ಬೆಂಗಳೂರು: ಐಎಂಎ ಜ್ಯುವೆಲರ್ಸ್ ಸಂಸ್ಥಾಪಕ ಮನ್ಸೂರ್ ಖಾನ್ ಅವರದು ಎನ್ನಲಾದ ಆಡಿಯೋದಲ್ಲಿ “ಶಿವಾಜಿನಗರದ ಸ್ಥಳೀಯ ಶಾಸಕ’ ಎಂದು ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಶಿವಾಜಿನಗರದ ಕಾಂಗ್ರೆಸ್ ಶಾಸಕ ಆರ್. ರೋಷನ್‌ಬೇಗ್, ವಿವಾದಕ್ಕೆ ತಮ್ಮ ಹೆಸರು ತಳಕು ಹಾಕಿರುವುದನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.
ವಿವಾದದ ಕುರಿತು ಟ್ವಿಟ್ ಮಾಡಿರುವ ರೋಷನ್ ಬೇಗ್, “ಐಎಂಎ ಗ್ರೂಪ್ ಆಪ್ ಕಂಪನೀಸ್ ಕುರಿತ ವಿವಾದದಲ್ಲಿ ನನ್ನ ಹೆಸರಲ್ಲಿ ಕೆಲವೊಂದು ನಕಲಿ ಅಂಶಗಳು ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ, ಖಡಾಖಂಡಿತವಾಗಿ ಹೇಳುತ್ತೇನೆ, ನಾನು ಯಾವುದೇ ಪ್ರಕಾರದಲ್ಲೂ ಅಥವಾ ಯಾವುದೇ ರೀತಿಯಲ್ಲೂ ಕಂಪೆನಿಯ ಪಾಲುದಾರ ಇಲ್ಲವೇ ಫಲಾನುಭವಿ ಅಲ್ಲ.
ಒಬ್ಬ ಸ್ಥಳೀಯ ಶಾಸಕನೆಂಬ ನೆಲೆಯಲ್ಲಿ ಐಎಂಎ ಜೊತೆಗೆ ನಾನು ಸಂಬಂಧವಿಟ್ಟುಕೊಂದಿದ್ದೇನೆ. ಅದೂ ಸಹ ನನ್ನ ಕ್ಷೇತ್ರದಲ್ಲಿ ಕೈಗೊಂಡ ಸಮಾಜಸೇವೆಗೆ ಮಾತ್ರ ಅದು ಸಿಮೀತಗೊಂಡಿದೆ. ಮುಖ್ಯವಾಗಿ ನನ್ನ ಕ್ಷೇತ್ರದಲ್ಲಿ ಬರುವ ವಿ.ಕೆ. ಒಬೇದುಲ್ಲಾ ಶಾಲೆಗೆ ಸಂಬಂಧಿಸಿದಂತೆ. ಈ ಶಾಲೆಯಲ್ಲಿ ನನ್ನ ಕ್ಷೇತ್ರದ ಸಾವಿರಾರು ವಿದ್ಯಾರ್ಥಿಗಳು ಇದ್ದಾರೆ.
ನನ್ನ ಕ್ಷೇತ್ರದಲ್ಲಿ ಅನೇಕ ಗುತ್ತಿಗೆದಾರರು ಹಾಗೂ ಖಾಸಗಿ ಕಂಪೆನಿಗಳು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತವೆ. ಆದರೆ, ನಾನು ಅಂತಹ ಯಾವುದೇ ಕಂಪೆನಿಗೆ ಯಾವುದೇ ಬಗೆಯ ಭಾಗಿಯಲ್ಲ. ಆದ್ದರಿಂದ, ನನ್ನ ಕ್ಷೇತ್ರದ ಜನರಲ್ಲಿ ನನ್ನ ಮನವಿ ಏನೆಂದರೆ ಹರಿದಾಡುತ್ತಿರುವ ಸುಳ್ಳು ವಿಚಾರಗಳ ಬಗ್ಗೆ ಗಮನ ಕೊಡಬೇಡಿ ಹಾಗೂ ಈ ವಿವಾದದಲ್ಲಿನ ಸುಳ್ಳು ಮಾಹಿತಿಗಳನ್ನು ತಿರಸ್ಕರಿಸಿ.
ನಿಮಗೆ ತಿಳಿದಿರಲಿ, ಈ ರೀತಿಯ ಸುಳ್ಳುಗಳನ್ನು ಹರಿಯಬಿಡುತ್ತಿರುವ ಕಿಡಿಗೇಡಿಗಳ ವಿರುದ್ಧ ಸಕ್ಷಮ ಪ್ರಾಧಿಕಾರದ ಮುಂದೆ ಸೂಕ್ತ ಕಾನೂನು ಕ್ರಮ ಜರುಗಿಸುವ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇನೆ. ಈ ಸುಳ್ಳು ಮಾಹಿತಿಗಳನ್ನು ಪ್ರಸಾರ ಮಾಡುವುದರಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಲಿದ್ದೇನೆ.