ಬೆಂಗಳೂರು: ಪ್ರಿಯಕರನ ಜೊತೆಗಿನ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ ಪತಿಯನ್ನು ತನ್ನ ಸಹೋದರಿ ಹಾಗೂ ಪ್ರಿಯಕರನ ಜತೆ ಸೇರಿ ಪತ್ನಿಯೇ ಹತ್ಯೆಗೈದಿರುವ ಘಟನೆ ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೆಗ್ಗನಹಳ್ಳಿ ನಿವಾಸಿ ಅಭಿಷೇಕ್ (36) ಕೊಲೆಯಾದವ. ಕೃತ್ಯ ಎಸಗಿದ ಪತ್ನಿ ನಿಖಿತಾ (32), ಈಕೆಯ ಸಹೋದರಿ ನಿಶ್ಚಿತಾ (30) ಮತ್ತು ಈ ಇಬ್ಬರ ಪ್ರಿಯಕರ ಅಂದ್ರಹಳ್ಳಿ ನಿವಾಸಿ ಕಾರ್ತಿಕ್ (27) ಹಾಗೂ ಈತನ ಸ್ನೇಹಿತ ಚೇತನ್ ಕುಮಾರ್(33)ನನ್ನು ಬಂಧಿಸಲಾಗಿದೆ.
ಆರೋಪಿಗಳು ನ.27ರಂದು ಅಂದ್ರಹಳ್ಳಿಯ ಖಾಸಗಿ ಶಾಲೆಯ ಬಳಿ ಅಭಿಷೇಕ್ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಈ ಸಂಬಂಧ ಮೃತನ ಸಹೋದರ ಅವಿನಾಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಅಭಿಷೇಕ್ ಮತ್ತು ಅವಿನಾಶ್ ಸಹೋದರರಾಗಿದ್ದು, 8 ವರ್ಷಗಳ ಹಿಂದೆ ಅಭಿಷೇಕ್- ನಿಖಿತಾ, ಸಹೋದರ ಅವಿನಾಶ್- ನಿಶ್ಚಿತಾರನ್ನು ಮದುವೆಯಾಗಿದ್ದರು. ಇಬ್ಬರು ಸಹೋದರರು ಕುಟುಂಬ ಸಮೇತ ಅಂದ್ರಹಳ್ಳಿಯಲ್ಲಿ ವಾಸವಾಗಿದ್ದರು. ಈ ವೇಳೆ ಅವಿನಾಶ್ ಮನೆ ಎದುರು ಮನೆಯಲ್ಲಿ ವಾಸವಾಗಿದ್ದ ಕಾರ್ತಿಕ್ ಜತೆ ಪತ್ನಿ ನಿಶ್ಚಿತಾ ಅಕ್ರಮ ಸಂಬಂಧ ಹೊಂದಿದ್ದಳು. ಅಲ್ಲದೆ, ಮೃತ ಅಭಿಷೇಕ್ ಪತ್ನಿ ನಿಖಿತಾ ಜತೆಯೂ ಕಾರ್ತಿಕ್ ಫೋನ್ನಲ್ಲಿ ಮಾತನಾಡುತ್ತಿದ್ದ. ಈ ವಿಚಾರ ತಿಳಿದ ಸಹೋದರರು ಹಿರಿಯರಿಗೆ ತಿಳಿಸಿದ್ದರು. ಬಳಿಕ ದಂಪತಿಗಳ ನಡುವೆ ರಾಜಿ-ಸಂಧಾನ ಮಾಡಲಾಗಿತ್ತು. ಆದರೆ, ಕೆಲ ದಿನಗಳ ಬಳಿಕ ನಿಖಿತಾ ಪತಿ ಅಭಿಷೇಕ್ ಜತೆ ಜಗಳ ಮಾಡಿಕೊಂಡು ಅಂದ್ರಹಳ್ಳಿ ಯಲ್ಲಿರುವ ತವರು ಮನೆ ಸೇರಿ ಕೊಂಡಿದ್ದಳು.
ಲೋಹದ ಬಳೆಗಳಿಂದ ಹತ್ಯೆ: ಈ ಮಧ್ಯೆ ನ.27ರಂದು ರಾತ್ರಿ 8 ಗಂಟೆ ಸುಮಾರಿಗೆ ಅಭಿಷೇಕ್ಗೆ ಕರೆ ಮಾಡಿದಾಗ ಆರೋಪಿಗಳು ಮಾತನಾಡಬೇಕೆಂದು ಬ್ಯಾಡರಹಳ್ಳಿಯ ಅನುಪಮಾ ಸ್ಕೂಲ್ ಬಳಿ ಕರೆಸಿಕೊಂಡಿದ್ದಾರೆ. ನಂತರ ಆರೋಪಿಗಳು ಮತ್ತು ಅಭಿಷೇಕ್ ನಡುವೆ ವಾಗ್ವಾದ ನಡೆದಿದ್ದು, ಅದು ವಿಕೋಪಕ್ಕೆ ಹೋದಾಗ ಆರೋಪಿಗಳು ಅಭಿಷೇಕ್ ಮೇಲೆ ಹಲ್ಲೆ ನಡೆಸಿದ್ದಾರೆ. ಕಾರ್ತಿಕ್ ಮತ್ತು ಚೇತನ್ ತಮ್ಮ ಕೈಗೆ ಹಾಕಿಕೊಂಡಿದ್ದ ಲೋಹದ ಬಳೆಯಿಂದ ಅಭಿಷೇಕ್ನ ತಲೆ ಹಾಗೂ ಮುಖ, ಇತರೆ ಭಾಗಗಳ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಅದೇ ವೇಳೆ ಸ್ಥಳದಲ್ಲಿದ್ದ ಪತ್ನಿ ನಿಖಿತಾ ಮತ್ತು ನಾದಿನಿ ನಿಶ್ಚಿತಾ ಕೂಡ ಹತ್ಯೆಗೆ ಕುಮ್ಮಕ್ಕು ನೀಡಿದಲ್ಲದೆ, ಹಲ್ಲೆ ಕೂಡ ಮಾಡಿದ್ದಾರೆ. ಇನ್ನು ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಅವಿನಾಶ್ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದರು.
ಬಳಿಕ ದೂರುದಾರ ಅವಿನಾಶ್, ಕಾರ್ತಿಕ್ ಕಾಲಿಗೆ ಬಿದ್ದು ಸಹೋದರ ಅಭಿಷೇಕ್ನನ್ನು ಬಿಡುವಂತೆ ಕೇಳಿ ಕೊಂಡಿದ್ದಾನೆ. ನಂತರ ಆರೋಪಿಗಳು ಸ್ಥಳದಿಂದ ತೆರಳಿದ್ದರು. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಅಭಿಷೇಕ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಶನಿವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಅಭಿಷೇಕ್ ಮೃತಪಟ್ಟಿದ್ದಾರೆ.
ಆಗಿದ್ದೇನು?
ಅಕ್ಕ-ತಂಗಿಯನ್ನು ಮದುವೆಯಾಗಿದ್ದ ಸಹೋದರರು
ಕಾರ್ತಿಕ್ ಎಂಬಾತನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಹೆಂಡತಿ, ನಾದಿನಿ
ಇದೇ ಕಾರಣಕ್ಕೆ ಗಂಡ-ಹೆಂಡತಿಯರ ನಡುವೆ ಪ್ರತಿದಿನ ಜಗಳ
ಪೋಷಕರವರೆಗೂ ದೂರು ಹೋಗಿ ರಾಜಿ ಸಂಧಾನ, ಆದರೂ ಅಕ್ರಮ ಸಂಬಂಧ ಮುಂದುವರಿಸಿದ್ದ ಹೆಂಡತಿ
ಈ ನಡುವೆ ಪತಿ ಹತ್ಯೆಗೆ ಪ್ರಿಯಕರ-ಪತ್ನಿ ಸಂಚು. ಬಳಿಕ ಪತಿ, ಆಕೆಯ ಸೋದರಿ, ಪ್ರಿಯಕರ, ಸ್ನೇಹಿತನಿಂದ ಹತ್ಯೆ