ಕಲಬುರಗಿ: ಅಚ್ಛೆ ದಿನ್ ಎನ್ನುವುದು ಕೇವಲ ಸ್ಲೋಗನ್ ಆಗಿದ್ದು, ಅಚ್ಛೆ ದಿನ್ ಬಂದೇ ಇಲ್ಲ ಎಂದು ಉತ್ತರ ಪ್ರದೇಶ ಬಿಎಸ್‌ಪಿ ರಾಜ್ಯ ಸಂಯೋಜಕ ಎಂ.ಎಲ್. ಥೋಮರ್ ಟೀಕಿಸಿದರು.
ನಗರದ ಜಗತ್ ವೃತ್ತದಲ್ಲಿ ಅಕ್ಕ ಮಾಯಾವತಿ ಅವರ 63ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಲಬುರಗಿ ವಲಯ ಮಟ್ಟದ ಜನಕಲ್ಯಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಧಾನಿ ಮೋದಿ ತಮ್ಮ ಅಧಿಕಾರಾವಧಿಯಲ್ಲಿ ಜನರಿಗೆ ನೀಡಿದ್ದ ಭರವಸೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜನರ ಮುಂದೆ ಹೋಗಲು ಅವರಿಗೆ ಯಾವುದೇ ವಿಷಯಗಳಿಲ್ಲ ಎಂದರು.
ಮೋದಿ ಅವರನ್ನು ಬರಲಿರುವ ಚುನಾವಣೆಯಲ್ಲಿ ಸೋಲಿಸಬೇಕೆನ್ನುವುದು ದೇಶದ ಜನರ ಇಚ್ಛೆಯಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಪ್ರಾದೇಶಿಕ ಪಕ್ಷಗಳು ಸೇರಿ ಎನ್‌ಡಿಎ ಮೈತ್ರಿಕೂಟದ ವಿರುದ್ದ ಒಗಟ್ಟಾಗಿವೆ. ಆದ್ದರಿಂದ ರಾಜ್ಯದಲ್ಲಿಯೂ ಬಿಎಸ್‌ಪಿಗೆ ಹೆಚ್ಚಿನ ಬಲ ತುಂಬಿ ಅಕ್ಕ ಮಾಯಾವತಿಗೆ ಪ್ರಧಾನಿ ಸ್ಥಾನ ದೊರೆಯಲು ಎಲ್ಲ ಕಾರ್ಯಕರ್ತರು ಶ್ರಮಿಸಬೇಕೆಂದು ಮನವಿ ಮಾಡಿದರು.
ಉತ್ತರ ಪ್ರದೇಶದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ದಲಿತರ, ದಮನೀತರ ಪರ ಹಾಗೂ ಮಹಿಳೆಯರ ಸಬಲೀಕರಣಕ್ಕೆ ದುಡಿದಿದ್ದಾರೆ. ಅವರ ಕೈ ಬಲಪಡಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಗೌತಮ ಬಿ. ಬೊಮ್ಮನಳ್ಳಿ, ಕೆ.ಬಿ. ವಾಸು, ಡಾ| ರಾಜು ಕಾಂಬಳೆ, ಸೂರ್ಯಕಾಂತ ನಿಂಬಾಳಕರ್, ಮಹಾದೇವ ಧನ್ನಿ, ವೈ. ನರಸಪ್ಪ, ಸೋಮಶೇಖರ ರಾಮದುರ್ಗ, ಎಲ್.ಆರ್. ಭೋಸ್ಲೆ, ಸಾಹುಕಾರ ಕಾಂಬಳೆ, ಈರಪ್ಪ ಮಾದರ, ಯಶ್ವಂತ ಪೂಜಾರಿ, ಶಿವಪುತ್ರ ಗುಮ್ಮಗೇರಿ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.