ಪಟ್ನಾ: ಪಶ್ಚಿಮ ಬಂಗಾಲ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ವಿಪಕ್ಷ ನಾಯಕರ ಸಭೆ ಕರೆಯುವಂತೆ ಬಿಹಾರ ಮುಖ್ಯಮಂತ್ರಿ, ಜೆಡಿಯು ವರಿಷ್ಠ ನಿತೀಶ್ ಕುಮಾರ್ ಅವರಲ್ಲಿ ಮನವಿ ಮಾಡಿಕೊಂಡ ಬೆನ್ನಲ್ಲೇ ವಿಪಕ್ಷ ನಾಯಕರನ್ನು ಒಗ್ಗೂಡಿಸಲು ನಿತೀಶ್ ಕುಮಾರ್ ಚಿಂತನೆ ನಡೆಸಿದ್ದಾರೆ. ಮೇ ಮೂರನೇ ವಾರದಲ್ಲಿ ಪಟ್ನಾದಲ್ಲಿ ವಿಪಕ್ಷ ನಾಯಕರ ಸಭೆ ಕರೆಯಲು ನಿತೀಶ್ ಕುಮಾರ್ ನಿರ್ಧರಿಸಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಮುಕ್ತಾಯವಾದ ಬಳಿಕ ಮೇ 17 ಅಥವಾ 18ರಂದು ಈ ಸಭೆ ನಡೆಯುವ ಸಾಧ್ಯತೆ ಇದೆ. ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್, ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಈ ಸಭೆಯಲ್ಲಿ ಪಾಲ್ಗೊಳ್ಳಲು ಸಮ್ಮತಿಸಿದ್ದಾರೆ ಎನ್ನ ಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖೀಲೇಶ್ ಯಾದವ್, ದಿಲ್ಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅಥವಾ ಅವರ ಪ್ರತಿನಿಧಿ, ಎಡಪಕ್ಷಗಳ ನಾಯಕರಾದ ಸೀತಾರಾಮ ಯೆಚೂರಿ, ಡಿ. ರಾಜಾ ಅವರು ಕೂಡ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನವಾಗಿ ಕಳೆದ ತಿಂಗಳು ಈ ಎಲ್ಲ ನಾಯಕರನ್ನು ನಿತೀಶ್ ಕುಮಾರ್ ಭೇಟಿಯಾಗಿ ಚರ್ಚೆ ನಡೆಸಿದ್ದರು.
ಇದೇ ವೇಳೆ ನಿತೀಶ್ ಕುಮಾರ್ ಅವರು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಝಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಿದ್ದು ಇವರೀರ್ವರು ಪಟ್ನಾದಲ್ಲಿ ನಡೆಯಲಿರುವ ವಿಪಕ್ಷಗಳ ನಾಯಕರ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.