ಬೆಂಗಳೂರು: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರನ್ನು ಧಾರುಣವಾಗಿ ನಡೆಸಿಕೊಂಡ ಘಟನೆ ಇನ್ನೂ ಜಿವಂತವಾಗಿರುವಾಗಲೇ ರಾಜಧಾನಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲೂ ಅಂಥದ್ದೇ ಘಟನೆ ನಡೆದಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ದಂಪತಿಗೆ ಸೂಕ್ತ ಚಿಕಿತ್ಸೆ ನೀಡದೆ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ.
ಘಟನೆ ಬಗ್ಗೆ ತಿಳಿದ ರಾಜ್ಯ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷ ವಿ.ಎಸ್. ಉಗ್ರಪ್ಪ ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಅದೇಶಸಿದ್ದಾರೆ. ಶನಿವಾರ ನಗರದ ವೈಯ್ನಾಲಿಕಾವಲ್‌ನಲ್ಲಿ ಅತ್ಯಾಚಾರಕ್ಕೊಳಗಾಗಿ ಬೌರಿಂಗ್ ಆಸ್ಪತ್ರೆಗೆ ಸೇರಿರುವ ಅಪ್ರಾಪೆ¤ ಬಾಲಕಿಯನ್ನು ಭೇಟಿಯಾಗಲು ಉಗ್ರಪ್ಪ ಆಸ್ಪತ್ರೆಗೆ ಬಂದಿದ್ದರು. ಉಗ್ರಪ್ಪರನ್ನು ಕಂಡ ಅಪಘಾತದ ಗಾಯಾಳುಗಳು ವೈದ್ಯರು ನಡೆದುಕೊಂಡ ಬಗೆಯನ್ನು ವಿವರಿಸಿದರು.
ಇದರಿಂದ ಉಗ್ರಪ್ಪ ತೀವ್ರ ಆಕ್ರೋಶಗೊಂಡರು. ಆಸ್ಪತ್ರೆಯ ಸಿಬ್ಬಂದಿ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡ ಉಗ್ರಪ್ಪ ಅವರು ವೈದ್ಯರನ್ನು ತರಾಟೆ ತೆಗೆದುಕೊಂಡರು. ಅಲ್ಲದೆ, ಸೂಕ್ತ ಚಿಕಿತ್ಸೆ ಕೊಡದಿರಲು ಕಾರಣವೇನು ಎಂದು ಪ್ರಶ್ನಿಸಿದರು. ಜತೆಗೆ ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ ಅವರು, ಅಪಘಾತದ ಬಗ್ಗೆ ಠಾಣೆ ತೆರಳಿ ದೂರು ದಾಖಲಿಸುವಂತೆ ಗಾಯಾಳುಗಳಿಗೆ ಸೂಚಿಸಿದರು.
ಅಪಘಾತವಾಗಿದ್ದು ಹೇಗೆ? ನಂತರ ಆಗಿದ್ದೇನು?: ಹೊಸಕೋಟೆ ಬಳಿಯ ಬಿದರಹಳ್ಳಿ ಬಳಿ ಕಾರು ಅಪಘಾತದಲ್ಲಿ ಮುನಿರತ್ನಮ್ಮ ಮತ್ತು ಮುನಿರಾಜು ಹಾಗೂ ಅವರ ಮಗಳು ನಂದಿನಿ ಗಾಯಗೊಂಡು ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದರು. ಆರಂಭದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದ ವೈದ್ಯರು, ಕೈ, ಕಾಲು ಮತ್ತು ಕಣ್ಣಿನ ಭಾಗದಲ್ಲಾಗಿದ್ದ ತೀವ್ರತರದ ಗಾಯಗಳನ್ನು ಕಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಕ್ಯಾನ್ ಮತ್ತು ಎಕ್ಸ್‌ರೇ ಮಾಡಿಸಿಕೊಂಡು ಬರುವಂತೆ ಸೂಚಿಸಿದ್ದರು.
ಅದರಂತೆ ದಂಪತಿ ಎಲ್ಲ ರೀತಿಯ ಪರೀಕ್ಷೆ ಮಾಡಿಸಿಕೊಂಡು ಶನಿವಾರ ಸಂಜೆ ಬೌರಿಂಗ್ ಆಸ್ಪತ್ರೆಗೆ ವಾಪಸಾಗಿದ್ದರು. ಆದರೆ ಆಸ್ಪತ್ರೆ ಸಿಬ್ಬಂದಿ ಅವರನ್ನು ಮತ್ತೆ ಒಳರೋಗಿಗಳಾಗಿ ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ. ಏನಾದರೂ ಅನಾಹುತವಾದರೆ ಅದಕ್ಕೆ ನಾವು ಹೊಣೆಯಾಗಲು ಸಾಧ್ಯವಿಲ್ಲ ಎಂದು ಗಾಯಾಳುಗಳಿಗೆ ನೇರವಾಗಿಯೇ ಹೇಳಿದರು ಎನ್ನಲಾಗಿದೆ. ಗಾಯದ ಸ್ಥಿತಿಯಲ್ಲೇ ರಾತ್ರಿ ಇಡೀ ಆಸ್ಪತ್ರೆ ಹೊರಗೆ ಮಲಗಿದ್ದರು
ಆಸ್ಪತ್ರೆ ಸಿಬ್ಬಂದಿಯ ವರ್ತನೆಯಿಂದ ಬೇಸರಗೊಂಡ ಗಾಯಾಳುಗಳು ಆಸ್ಪತ್ರೆಯ ಆವರಣದಲ್ಲಿ ರಾತ್ರಿ ಇಡೀ ಮಲಗಿದ್ದಾರೆ. ಭಾನುವಾರ ಬೆಳಗ್ಗೆ ಮತ್ತೂಮ್ಮೆ ಸಿಬ್ಬಂದಿಯನ್ನು ಕೇಳಿದಾಗಲೂ ಅವರಿಂದ ಯಾವುದೇ ಸ್ಪಂದನೆ ಬಂದಿಲ್ಲ ಇದೇ ಕಾರಣ ಮತ್ತೆ ಅಲ್ಲೇ ಉಳಿದಿದ್ದರು. ಈ ವೇಳೆ ಗಾಯಾಳು ಮುನಿರಾಜು ತಲೆಸುತ್ತು ಬಂದು ಕುಸಿದು ಬಿದಿದ್ದಾರೆ. ಅದೇ ವೇಳೆಗೆ ಉಗ್ರಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದನ್ನು ತಿಳಿದ ಗಾಯಾಳುಗಳು ಅವರನ್ನು ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ.