ಬೆಂಗಳೂರು: ಸಾಫ್ಟ್ವೇರ್ ಎಂಜಿನಿಯರ್‌ವೊಬ್ಬರ ಮನೆ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮತ್ತಿಕೆರೆ ನಿವಾಸಿ ಆರ್. ಗೌತಮ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ನಗರದ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಗೌತಮ್ ಮಾ.23ರಂದು ಬೆಳಗ್ಗೆ 8.45ರ ಸುಮಾರಿಗೆ ಕುಟುಂಬ ಸಮೇತ ಕನಕಪುರದ ಬ್ಯಾಕ್ಯಾಡರ್ ಕ್ಯಾಂಪ್‌ಗೆ ಹೋಗಿದ್ದು, ರಾತ್ರಿ ಅಲ್ಲೇ ತಂಗಿದ್ದರು.
ಈ ವೇಳೆ ಮನೆಗೆ ನುಗ್ಗಿರುವ ಕಳ್ಳರು ನಾಲ್ಕು ಕೊಠಡಿಗಳಲ್ಲಿದ್ದ ಎರಡು ಸಾವಿರ ರೂ. ನಗದು, ಎರಡು ವಜ್ರದ ಕಿವಿ ಓಲೆಗಳು, ನಕ್ಲೆಸ್‌ಗಳು, ಬಳೆಗಳು ಸೇರಿ 12,50,000 ರೂ. ಮೌಲ್ಯದ 413 ಗ್ರಾಂ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದಾರೆ. ಮಾ.24ರಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಗೌತಮ್ ಮತ್ತು ಕುಟುಂಬ ವಾಪಸ್ ಬಂದಾಗ ಮನೆಯ ಬಾಗಿಲು ತೆರೆದಿತ್ತು.
ಗಾಬರಿಗೊಂಡು ಒಳಗೆ ಹೋಗಿ ನೋಡಿದಾಗ ಮನೆಯ ನಾಲ್ಕು ಕೊಠಡಿಗಳಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳು ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಮನೆ ಆವರಣದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳಲಿಲ್ಲ. ಹೀಗಾಗಿ ಅಕ್ಕ-ಪಕ್ಕದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಗೌತಮ್ ಕುಟುಂಬದ ಬಗ್ಗೆ ತಿಳಿದಿರುವ ವ್ಯಕ್ತಿಗಳೇ ಕೃತ್ಯ ಎಸಗಿರಬಹುದು. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು. ಪ್ರಕರಣ ಯಶವಂತಪುರ ಠಾಣೆಯಲ್ಲಿ ದಾಖಲಾಗಿದೆ.