ಹುಣಸೂರು: ಕಾರು ಕಳ್ಳತನವಾದ 24 ಗಂಟೆಯೊಳಗೆ ಮೂವರನ್ನು ಹುಣಸೂರು ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಡಗು ಜಿಲ್ಲೆಯ ಕುಶಾಲನಗರದ ಕಿಶೋರ್, ಮಹಮದ್ ಫಾರೂಕ್, ಅಬ್ದುಲ್ ರಷೀದ್ ಬಂಧಿತರು ಆರೋಪಿಗಳು. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಘಟನೆ ವಿವರ: ನಗರದ ವಿಜಯಾ ಬ್ಯಾಂಕ್ ಹಿಂಬದಿ ಬಡಾವಣೆಯ ನಿವಾಸಿ ನಾಗೇಂದ್ರ ಅವರು ತಮ್ಮ ಮನೆಯ ಮುಂದೆ ಮೇ 29 ರಂದು ಕಾರು ನಿಲ್ಲಿಸಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಕಾರು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ನಗರ ಠಾಣೆಯಲ್ಲಿ ದೂರು ನೀಡಿದ್ದರು.
ಪೊಲೀಸರು ಸಿ.ಸಿ. ಕ್ಯಾಮರಾ ಪರಿಶೀಲಿಸಿದ ವೇಳೆ ಕಾರು ಪಿರಿಯಾಪಟ್ಟಣದ ಕಡೆ ಹೋಗಿರುವುದು ಪತ್ತೆಯಾಗಿತ್ತು. ಕಳ್ಳರ ಜಾಡು ಹಿಡಿದು ಬೆನ್ನು ಹತ್ತಿದ ಪೊಲೀಸರು ಕುಶಾಲನಗರದ ಕಡೆ ಕಾರಿಗಾಗಿ ಶೋಧ ನಡೆಸುತ್ತಿರುವ ವೇಳೆ ಕೊಪ್ಪ ಗೇಟ್ ನಲ್ಲಿ ಕಾರು ಪತ್ತೆ ಹಚ್ಚಿದ್ದಾರೆ. ಆರೋಪಿಗಳನ್ನು ಕಾರು ಸಹಿತ ವಶಕ್ಕೆ ಪಡೆದಿದ್ದಾರೆ. ತಲೆ ಮರೆಸಿಕೊಂಡಿರುವ ಇನ್ನಿಬ್ಬರು ಪ್ರಮುಖ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ:ವಸ್ತ್ರ ಬಿಚ್ಚಿ ತಾಯಿ, ಮಗಳೊಂದಿಗೆ ಅಸಭ್ಯ ವರ್ತನೆ: ಆರೋಪಿ ಬಂಧನ
ಕಾರ್ಯಾಚರಣೆಯಲ್ಲಿ ಡಿವೈಎಸ್ ಪಿ ರವಿ ಪ್ರಸಾದ್ ಮಾರ್ಗದರ್ಶನದಲ್ಲಿ ನಗರ ಠಾಣೆ ಇನ್ಸ್ ಪೆಕ್ಟರ್ ಶ್ರೀನಿವಾಸ್, ಅಪರಾಧ ವಿಭಾಗದ ಪಿಎಸ್ಐ ಲೋಕೇಶ್, ಠಾಣಾ ಗುಪ್ತಮಾಹಿತಿ ಸಿಬ್ಬಂದಿ ಪ್ರಸಾದ್, ಸಿಬ್ಬಂದಿಗಳಾದ ಇರ್ಫಾನ್, ಭರತೇಶ್, ವೆಂಕಟೇಶ್ ಪ್ರಸಾದ್ ಭಾಗವಹಿಸಿದ್ದರು.