Advertisement

ಬೆಳೆ ಸಮೀಕ್ಷೆ  ಕಾರ್ಯ ನಿರ್ವಹಿಸಿದ ಯುವಕರಿಗಿನ್ನೂ ಸಿಕ್ಕಿಲ್ಲ  ವೇತನ

01:00 AM Feb 03, 2019 | Harsha Rao |

ಕಾರ್ಕಳ: ನಿರುದ್ಯೋಗಿ ಯುವಕ -ಯುವತಿಯರಿಗೆ ಸುವರ್ಣಾವಕಾಶ ಎಂದು ಹೇಳಿ, ನಾನಾ ಆಮಿಷಗಳನ್ನೊಡ್ಡಿ ಬೆಳೆ ಸಮೀಕ್ಷೆ ಕಾರ್ಯವನ್ನು ಮಾಡಿಸಿದ ಸರಕಾರ ಸಂಭಾವನೆಯನ್ನೇ ನೀಡಿಲ್ಲ. ಈ ಬಗ್ಗೆ ಸಮೀಕ್ಷಕರು ಎಲ್ಲರಿಗೂ ಮನವಿ ಮಾಡಿದ್ದರೂ ಈ ವರೆಗೆ ಪ್ರಯೋಜನವಾಗಿಲ್ಲ.  

Advertisement

ಏನಿದು ಸಮೀಕ್ಷೆ ?
ಪ್ರಕೃತಿ ವಿಕೋಪ ಸೇರಿದಂತೆ ನಾನಾ ರೀತಿಯಲ್ಲಿ ಬೆಳೆ ಹಾನಿಗೊಂಡಲ್ಲಿ  ಪರಿಹಾರ ಒದಗಿಸುವ ನಿಟ್ಟಿನಲ್ಲಿ  ಸರಕಾರ ಬೆಳೆ ಸಮೀಕ್ಷೆ ಕಾರ್ಯ ಕೈಗೊಂಡಿತ್ತು. ಇದಕ್ಕಾಗಿ ಸಮೀಕ್ಷಕರು ಕೃಷಿಕರ ಜಮೀನಿಗೆ ಭೇಟಿ ನೀಡಿ ಪ್ರತಿ ಮಾಹಿತಿ ಖಚಿತಪಡಿಸಿ, ಮೊಬೈಲ್‌ ಆ್ಯಪ್‌ ಮೂಲಕ ಚಿತ್ರದೊಂದಿಗೆ ಅಪ್‌ಲೋಡ್‌ ಮಾಡುವ ಕಾರ್ಯ ರಾಜ್ಯಾದ್ಯಂತ ನಡೆಸಲಾಗಿತ್ತು.

ಕಠಿನ ಕೆಲಸ
ಬಹುತೇಕವಾಗಿ ಕಾಲೇಜು ಮುಗಿಸಿ ಉದ್ಯೋಗಕ್ಕಾಗಿ ಎದುರುನೋಡುತ್ತಿದ್ದ ಯುವಕರು ಬೆಳೆ ಸಮೀಕ್ಷೆ ಕಾರ್ಯದಲ್ಲಿ  ಕೈಜೋಡಿಸಿದ್ದರು. ಒಂದು ಸರ್ವೆ ನಂಬರ್‌ನ ಸಮೀಕ್ಷೆಗೆ 10 ರೂ. ನಿಗದಿಗೊಳಿಸಿ ಸರಕಾರ ಇವರನ್ನು ದುಡಿಸಿಕೊಂಡಿತ್ತು. ಯುವಕರು ಬಿಸಿಲು, ಮಳೆ ಎನ್ನದೆ ಎರಡು ತಿಂಗಳು ತಿರುಗಾಡಿದ್ದರು.  

ಬೆಳೆ ಸಮೀಕ್ಷೆ ಮುಗಿದ ತತ್‌ಕ್ಷಣ ವೇತನ ನೇರವಾಗಿ ಬ್ಯಾಂಕ್‌ ಖಾತೆಗೆ ಜಮೆಯಾಗಲಿದೆ ಎಂದು ಸಮೀಕ್ಷೆ ಮೇಲ್ವಿಚಾರಣೆ ಹೊತ್ತ ಅಧಿಕಾರಿಗಳು ಹೇಳಿದ್ದರು. ಜತೆಗೆ ಶೀಘ್ರವಾಗಿ ಸಮೀಕ್ಷೆ ಕಾರ್ಯ ಮುಗಿಸುವಂತೆ ಒತ್ತಾಯಿಸಿ, ಪ್ರತಿದಿನ ವರದಿ ಪಡೆಯುತ್ತಿದ್ದರು. ಉಡುಪಿ ಜಿಲ್ಲೆಯ 267 ಗ್ರಾಮಗಳಲ್ಲಿ 859 ಮಂದಿ ಬೆಳೆ ಸಮೀಕ್ಷೆಗಾರರು ಕಾರ್ಯನಿರ್ವಹಿಸಿದ್ದರು. ಆದರೆ ಈಗ ವೇತನವೇ ಬಂದಿಲ್ಲ. 

ಮೂರು ತಿಂಗಳು ಕಳೆದರೂ ವೇತನವಿಲ್ಲ
ಅನೇಕ ಆಸೆ ಹೊತ್ತು ಬೆಳೆ ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿಕೊಂಡೆವು. ಬೆಳೆ ಸಮೀಕ್ಷೆ ಕಾರ್ಯ ಮುಗಿದು ಮೂರು ತಿಂಗಳು ಕಳೆದರೂ ವೇತನ ಪಾವತಿಯಾಗದಿರುವುದು ಅತೀವ ನೋವನ್ನುಂಟು ಮಾಡಿದೆ. ಜಿಲ್ಲಾ  ಉಸ್ತುವಾರಿ ಸಚಿವರ ಗಮನಕ್ಕೆ ತಂದಾಗ ಮಾಹಿತಿ ಇಲ್ಲ ಎಂದಿದ್ದಾರೆ.  
– ದಿನೇಶ್‌ ನಲ್ಲೂರು ಬೆಳೆ ಸಮೀಕ್ಷಾ ಕಾರ್ಯದಲ್ಲಿ ಪಾಲ್ಗೊಂಡವರು

Advertisement

ಶೀಘ್ರದಲ್ಲೇ ವೇತನ ಪಾವತಿ
ರಾಜ್ಯದ ಕೆಲ ತಾಲೂಕುಗಳಿಗೆ ಮೊದಲ ಹಂತವಾಗಿ ಹಣ ಬಿಡುಗಡೆಯಾಗಿದೆ. ಉಡುಪಿ ತಾಲೂಕಿನಲ್ಲಿ  ಬೆಳೆ ಸಮೀಕ್ಷೆ ನಡೆಸಿದ 168  ಮಂದಿಯ ಬ್ಯಾಂಕ್‌ ಖಾತೆಗೆ ಈಗಾಗಲೇ ವಿದ್ಯುನ್ಮಾನ ನಾಗರಿಕ ಸೇವಾ ವಿತರಣೆ ನಿರ್ದೇಶನಾಲಯ ಇಲಾಖೆಯಿಂದ ವೇತನ ಪಾವತಿಯಾಗಿದೆ. ಶೀಘ್ರದಲ್ಲೇ ಎಲ್ಲರಿಗೂ ವೇತನ ಪಾವತಿಯಾಗಲಿದೆ.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಉಡುಪಿ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next