Advertisement

ಅನ್ನದಾತರ ಬದುಕಿನಲ್ಲಿ ಫೈಂಜಾಲ್‌ ದಂಗಲ್‌; ಕಡಲೆ ಕಾಳುಕಟ್ಟುವ ಹಂತದಲ್ಲಿ ರೈತರ ಗೋಳು

02:51 PM Dec 03, 2024 | Team Udayavani |

ಉದಯವಾಣಿ ಸಮಾಚಾರ
ಕುಷ್ಟಗಿ: ಫೈಂಜಾಲ್‌ ಚಂಡಮಾರುತ ಪ್ರಭಾವದಿಂದ ಸೋಮವಾರ ಮಧ್ಯಾಹ್ನದಿಂದ ದಟ್ಟ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಲಘು ಮಳೆಯಾಗಿದೆ. ಈ ಪ್ರತಿಕೂಲ ವಾತಾವರಣದಿಂದ ರೈತರಲ್ಲಿ ಬೆಳೆ ಹಾಳಾಗುವ ಆತಂಕ ಕಂಡುಬಂದಿದೆ.

Advertisement

ಫೈಂಜಾಲ್‌ ಚಂಡಮಾರುತ ದುಷ್ಪರಿಣಾಮ ಈ ಭಾಗದ ಬೆಳೆಗಳಿಗೆ ಆಗುವುದಿಲ್ಲ ಅಂದುಕೊಂಡಿದ್ದರು. ಆದರೆ ವಾತಾವರಣದ
ಚಿತ್ರಣ ಬದಲಾಗಿದೆ. ಹಿಂಗಾರು ಹಂಗಾಮಿನ ಬಿಳಿಜೋಳ, ಗೋದಿ, ಕಡಲೆ, ಕುಸುಬೆ ಮತ್ತಿತರ ಬೆಳೆಗಳಿಗೆ ಮೋಡ ಕವಿದಿದ್ದರಿಂದ ಹವಾಮಾನ ತಂಪಾಗಿದ್ದರೆ ಚಳಿ ಹೆಚ್ಚಿದಷ್ಟು ಹುಲುಸಾಗಿ ಬರುತ್ತವೆ. ಆದರೆ ಮೋಡ ಕವಿದ ವಾತಾವರಣವಿದ್ದು ಅಕಾಲಿಕ ತುಂತುರು ಮಳೆ ರೈತರನ್ನು ನಿದ್ದೆಗೆಡಿಸಿದೆ.

ಕೃಷಿ ಇಲಾಖೆ ಮಾಹಿತಿ ಪ್ರಕಾರ ಕಡಲೆ 11,246 ಹೆಕ್ಟೆರ್‌(ಗುರಿ 18 ಸಾವಿರ ಹೆಕ್ಟೆರ್‌) ನಲ್ಲಿ ಬೆಳೆಯಲಾಗಿದ್ದು, ಬಿಳಿಜೋಳ 7,108 ಹೆಕ್ಟೆರ್‌ (ಗುರಿ 12 ಸಾವಿರ ಹೆಕ್ಟೆರ್‌)ನಲ್ಲಿ ಬೆಳೆಯಲಾಗಿದೆ. ಗೋದಿ 150 ಹೆಕ್ಟೆರ್‌ನಲ್ಲಿ ಬೆಳೆಯಲಾಗಿದೆ. ಕುಸುಬೆ 73 ಹೆಕ್ಟೆರ್‌ನಲ್ಲಿ ಬೆಳೆಯಲಾಗಿದೆ.

ಬಿಳಿಜೋಳ ಮತ್ತು ಕಡಲೆ ಕಾಳು ಕಟ್ಟುವ ಹಂತದಲ್ಲಿದೆ. ಈ ಸಮಯದಲ್ಲಿ ಅಕಾಲಿಕ ಮಳೆಯಾದರೆ ಹುಳಿ ತೊಳೆದು ಹೋದರೆ ಇಳುವರಿ ಕುಂಠಿತ ಸಾಧ್ಯತೆಗಳಿವೆ. ಅಲ್ಲದೇ ಮೋಡ ಕವಿದ ವಾತಾವರಣಕ್ಕೆ ಕೀಟ ಬಾಧೆ ಉಲ್ಬಣಿಸಲಿದೆ. ಈಗಾಗಲೇ ಎರಡ್ಮೂರು ಬಾರಿ ಕೀಟನಾಶಕ ಸಿಂಪಡಿಸಿರುವ ರೈತರು, ಇದೀಗ ಈ ವಾತಾವರಣದಿಂದ ಕೀಟಬಾಧೆ ನಿಯಂತ್ರಿಸಲು ಮತ್ತೆ ಖರ್ಚು ಮಾಡಬೇಕಿರುವುದು ತಲೆನೋವಾಗಿದೆ. ಮಳೆ ಹಾಗೂ ಮೋಡ ಕವಿದ ವಾತಾವರಣ ಮುಂದುವರಿಯದಂತೆ ರೈತರು
ಪ್ರಾರ್ಥಿಸುತ್ತಿದ್ದಾರೆ.

ಕುಷ್ಟಗಿಯ ರೈತ ಮುತ್ತಣ್ಣ ಎಲಿಗಾರ ಪ್ರತಿಕ್ರಿಯಿಸಿ, ಉತ್ತಮ ಮಳೆಯಿಂದ ಹಿಂಗಾರು ಬೆಳೆ ಸಮೃದ್ಧವಾಗಿದ್ದು, ಈ ಪರಿಸ್ಥಿತಿಯಲ್ಲಿ ಮಳೆ-ಮೋಡ ಕವಿದ ವಾತಾ‌ವರಣಕ್ಕೆ ಕಡಲೆಗೆ ಕೀಟ ಬಾಧೆ ಕಾಣಿಸಿಕೊಂಡಿದೆ. ಇದನ್ನು ನಿಯಂತ್ರಿಸಲು ಕೊರೋಜಿನ್‌ ಸಿಂಪಡಿಸಬೇಕಿದ್ದು, ತುಂತುರು ಮಳೆ ನಿಂತ ಬಳಿಕ ಸಿಂಪಡಿಸುವೆ ಎಂದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಂದಿನ ಎರಡ್ಮೂರು ದಿನಗಳವರೆಗೆ ಮೋಡ ಕವಿದ ವಾತಾವರಣ ಹಾಗೂ ಅಲ್ಲಲ್ಲಿ ತುಂತುರು ಮಳೆ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಟಾವು ಮಾಡಿದ ಬೆಳೆಗಳನ್ನು ಸುರಕ್ಷಿತ ಸ್ಥಳದಲ್ಲಿ ಶೇಖರಣೆ ಮಾಡಿಟ್ಟುಕೊಳ್ಳಬೇಕಿದೆ.

Advertisement

ಈಗಾಗಲೇ ಫೈಂಜಾಲ್‌ ಚಂಡಮಾರುತ ಬಂಗಾಳಕೊಲ್ಲಿಯಿಂದ ಆರಂಭಗೊಂಡಿದ್ದು, ಡಿ.4 ಅಥವಾ 5ಕ್ಕೆ ಕೊನೆಯಾಗಲಿದೆ. ಅಲ್ಲಿಯವರೆಗೂ ಮೋಡ ಮುಸುಕಿದ ವಾತಾವರಣ, ತುಂತುರು ಮಳೆ ಇರಲಿದೆ. ಆದಾಗ್ಯೂ ಈ ಭಾಗದಲ್ಲಿ ತುಂತುರು
ಮಳೆ ಆಗಲಿಕ್ಕಿಲ್ಲ ಅಂದುಕೊಂಡಿದ್ದೇವೆ. ಮಳೆಯಾದರೆ ಕಡಲೆ, ಬಿಳಿಜೋಳ ಇಳುವರಿ ಮೇಲೆ ಪರಿಣಾಮ ಬೀರಲಿದೆ. ಈ ಪ್ರತಿಕೂಲ ವಾತಾವರಣ ನಂತರ ಕೀಟಬಾಧೆ ಹೆಚ್ಚುವ ಸಾಧ್ಯತೆ ಹಿನ್ನೆಲೆಯಲ್ಲಿ ಕೀಟನಾಶಕ ಸಿಂಪಡಿಸಬೇಕಿದೆ.
ಅಜ್ಮೀರ್‌ ಅಲಿ ಬೆಟಗೇರಿ,
ಸಹಾಯಕ ಕೃಷಿ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next