ಚನ್ನಪಟ್ಟಣ: ಹಿಂದಿನ ಯುಪೀಳಿಗೆಯು ಜನಪದ ಕಲೆಗಳ ಕಡೆಗೆ ನಿರಾಶಕ್ತಿ ವಹಿಸುತ್ತಿದ್ದು ಜನಪದ ಕಲೆಯು ನೈಜ ಗ್ರಾಮೀಣ ಕಲೆಯಾಗಿದ್ದು ಬೇರೆಲ್ಲ ಕಲೆಗಳ ಉಗಮಕ್ಕೆ ಕಾರಣವಾಗಿದೆ ಎಂದು ಕರ್ನಾಟಕ ಶಾಸ್ತ್ರೀಯ ಸಂಗೀತದ ವಿದ್ವಾಂಸರಾದ ಅನ್ನಪೂರ್ಣ ಅಭಿಪ್ರಾಯಿಸಿದರು.
ತಾಲೂಕಿನ ಮೈತ್ರಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ವೀರೇಗೌಡನದೊಡ್ಡಿ ಶಾಲೆಯಲ್ಲಿ ಆಯೋಜಿಸಿದ್ದ ಜಾನಪದ ಗೀತಗಾಯನ ಮತ್ತು ತತ್ವಪದ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಜ್ಞರ ಅಭಿಪ್ರಾಯದಂತೆ ಸಂಗೀತದಿಂದ ಕ್ಯಾನ್ಸರ್ ಗುಣಪಡಿಸುವ ಸಾಮರ್ಥ್ಯವಿದೆ.
ವಿದ್ಯಾರ್ಥಿಗಳು ಮೂಲ ಕಲೆಗಳಾದ ಜಾನಪದ, ತತ್ವಪದ, ಸಂಗೀತ, ಮುಂತಾದ ಕಲೆಗಳನ್ನು ಕಲಿತು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಲು ಸಹಕರಿಸಬೇಕು ಹಾಗೂ ದೃಶ್ಯ ಮಾಧ್ಯಮಗಳಿಂದ ಹಾಗೂ ಧಾರವಾಹಿಗಳ ಪ್ರಭಾವಕ್ಕೆ ಒಳಗಾಗಿ ಮಾನವೀಯ ಮೌಲ್ಯಗಳ ಕಡೆಗೆ ಹೆಚ್ಚಿನ ಗಮನ ನೀಡದೆ ನೈಜ ಜಾನಪದ ಕಲೆಗಳು ಅವನತಿ ಹಾದಿಗೆ ಸರಿಯುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ ಎಂದು ತಿಳಿಸಿದರು.
ನೈಜ ಕಲೆಗೆ ಕೊಡಲಿ ಪೆಟ್ಟು: ಗಾಯಕಿ ಶಾರದ ಮಾತನಾಡಿ, ಚಲನಚಿತ್ರಗಳ ಹಾವಳಿಯಿಂದ ನೈಜ ಜಾನಪದ ಕಲೆಗೆ ಕೊಡಲಿ ಪೆಟ್ಟು ಬೀಳುತ್ತಿದ್ದು ಯುವಕರು ಸಿನಿಮಾದತ್ತಾ ಮುಖ ಮಾಡಿರುವುದು ವಿಷಾದನೀಯ ಸಂಗತಿಯಾಗಿದೆ. ಸಂಗೀತಕ್ಕೆ ಶತ ಶತಮಾನಗಳ ಇತಿಹಾಸವಿದ್ದು, ಅನೇಕ ಜಾನಪದ ವಿದ್ವಾಂಸರನ್ನು ಕೊಟ್ಟಂತ ನಾಡು ನಮ್ಮದ್ದು ಕಲೆ, ಸಂಸ್ಕೃತಿ, ನಾಡು, ನುಡಿಗಾಗಿ ವಿದ್ಯಾರ್ಥಿ ಹಾಗೂ ಯುವಕರು ತೊಡಗಿಸಿಕೊಳ್ಳಬೇಕು.
ಹಾಗೂ ಆಧುನಿಕತೆಯಿಂದ ನೈಜ ಬದುಕಿಗೂ ಕೊಡಲಿ ಪೆಟ್ಟು ಬಿಳುವಂತಾಗಿದೆ. ಶಿವಶರಣರು ಸಮಾಜದಲ್ಲಿ ಅಂಕು-ಡೊಂಕುಗಳನ್ನು ತತ್ವಪದಗಳ ಮೂಲಕ ಸಾಮಾನ್ಯ ಜನರಿಗೆ ಅರ್ಥವಾಗುವಂತೆ ತಿಳಿಸಿರುತ್ತಾರೆ. ಅದರಂತೆ ಇಂದಿಗೂ ಕನಕದಾಸರು, ಪುರಂದರದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.
ವೀರೇಗೌಡನದೊಡ್ಡಿ ಶಾಲೆ ಮುಖ್ಯ ಶಿಕ್ಷಕ ಎಚ್.ಸಿ.ಲಿಂಗರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಬಾಲಕರ ಪದವಿ ಪೂರ್ವ ಕಾಲೇಜು ಹಾಸ್ಟೆಲ್ ನಿಲಯಪಾಲಕ ಎನ್.ಮೋಹನ್‌ಕುಮರ್, ಸಿದ್ದರಾಮು ನೀಲಸಂದ್ರ, ಪಿ.ವಿಷಕಂಠಯ್ಯ, ಪ್ರತಾಪ್ ಗೌತಮ್, ಪ್ರಕಾಶ್ ಬಾಣಂತಹಳ್ಳಿ, ಶಾರದ ನಾಗೇಶ್, ಗೀತಗಾಯನ ನಡೆಸಿಕೊಟ್ಟರು. ಪ್ರತಾಪ್ ಗೌತಮ್, ಶಾರದ.ಕೆ. ಇದ್ದರು.