ಉಡುಪಿ: ಯುವಕರಿಂದ ಭ್ರಷ್ಟಾಚಾರ ನಿಯಂತ್ರಿಸಲು ಸಾಧ್ಯ ಎಂದು ಲೋಕಾಯುಕ್ತ ನ್ಯಾ| ವಿಶ್ವನಾಥ ಶೆಟ್ಟಿ ಹೇಳಿದರು.
ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ರವಿವಾರ ಪಿ. ಶಿವಾಜಿ ಶೆಟ್ಟಿ ಸ್ಮಾರಕ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ, ಬಹುಮಾನ ವಿತರಿಸಿ ಮಾತನಾಡಿದ ಅವರು, ಕೆಟ್ಟ ಆಡಳಿತ, ಭ್ರಷ್ಟಾಚಾರ ಕೊನೆಗಾಣಿಸಲು ಯುವಕರು ಸಹಕರಿಸಬೇಕು ಎಂದರು.
ಯುವ ನ್ಯಾಯವಾದಿಗಳು ಕಠಿನಶ್ರಮಪಟ್ಟು ಹೊಸ ಹೊಸ ಶೋಧನೆಗಳಿಗೆ ತೊಡಗಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ನ್ಯಾ| ಶೆಟ್ಟಿ ಹೇಳಿದರು.
ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಕೇರಳದ ನ್ಯಾ| ದಾಮ ಶೇಷಾದ್ರಿ ನಾಯ್ಡು, ಕರ್ನಾಟಕದ ನ್ಯಾ| ಮನೋಹರ ಬಿಜೂರು ಮುಖ್ಯ ಅತಿಥಿಗಳಾಗಿದ್ದರು. ಮಂಗಳೂರಿನ ಹಿರಿಯ ನ್ಯಾಯವಾದಿಗಳಾದ ಎಂ.ವಿ. ಶಂಕರ ಭಟ್, ಸೀತಾರಾಮ ಶೆಟ್ಟಿ ಶುಭಕೋರಿದರು.
ಜಯಂತಿ ಶಿವಾಜಿ ಶೆಟ್ಟಿ, ಪ್ರಾಧ್ಯಾಪಕರಾದ ರೋಹಿತ್ ಅಮೀನ್, ನಿರ್ಮಲಾ ಕುಮಾರಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರೊ| ಪ್ರಕಾಶ್ ಕಣಿವೆ ಸ್ವಾಗತಿಸಿ ನಿವೇದಿತಾ ಜಿ. ಬಾಳಿಗಾ ವಂದಿಸಿದರು. ಆಯಿಶಾರಾವ್ ಕಾರ್ಯಕ್ರಮ ನಿರ್ವಹಿಸಿದರು. ಡಾರಿಲ್ ಕ್ಲೆತ್, ಅಶ್ವಿನಿ, ಗೀತಾ ಶೆಣೈ, ರಚನಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು.
ಅಮೆರಿಕದಲ್ಲಿ ಜನವರಿಯಿಂದ ಎಪ್ರಿಲ್ ವರೆಗೆ ಜನಿಸಿದವರು ಬುದ್ಧಿವಂತರಂತೆ! ಅಮೆರಿಕದಲ್ಲಿ ಜನವರಿಯಿಂದ ಎಪ್ರಿಲ್ ವರೆಗೆ ಜನಿಸಿದವರು ಬುದ್ಧಿವಂತರು ಎಂಬ ಮಾತಿದೆ. ಏಕೆ? ಅಲ್ಲಿ ಆರು ವರ್ಷವಾಗದೆ ಶಾಲೆಗೆ ಸೇರಿಸುವಂತಿಲ್ಲ. ಡಿ. 31ರೊಳಗೆ ಜನಿಸಿದವರನ್ನು ಶಾಲೆಗೆ ಸೇರಿಸುವಾಗ ವರ್ಷಾರಂಭದಲ್ಲಿ ಜನಿಸಿದ ಮಕ್ಕಳು ದೈಹಿಕ, ಪ್ರಬುದ್ಧತೆಯಲ್ಲಿ ವರ್ಷಾಂತ್ಯಕ್ಕೆ ಹುಟ್ಟಿದವರಿಗಿಂತ ಹೆಚ್ಚು ಸಮರ್ಥರಿರುತ್ತಾರೆ. ಹೀಗಾಗಿ ಯೋಜನಾಬದ್ಧವಾಗಿ ಅಲ್ಲಿ ಮಕ್ಕಳು ಜನಿಸುವಂತೆ ಜಾಣ್ಮೆ ತೋರುತ್ತಾರೆ.
– ನ್ಯಾ| ದಾಮ ಶೇಷಾದ್ರಿ ನಾಯ್ಡು