Advertisement

ತಿಂಗಳಿಗಾಗುವ ನೀರು ವ್ಯರ್ಥವಾಗಿ ಹರಿದು ಹೋಯ್ತು

11:14 AM Aug 19, 2017 | |

ಬೆಂಗಳೂರು: ಮಳೆಗಾಲ ಆರಂಭವಾಗಿ ಮೂರು ತಿಂಗಳೇ ಕಳೆದರೂ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಕಾವೇರಿ ಕೊಳ್ಳದ ಅಣೆಕಟ್ಟುಗಳು ಇನ್ನೂ ತುಂಬಿಲ್ಲ. ಹೀಗಾಗಿ ಬೆಂಗಳೂರು ಈ ಬಾರಿಯೂ ಕುಡಿವ ನೀರಿನ ಅಭಾವದ ಭೀತಿ ಎದುರಿಸುತ್ತಿದೆ. ಹೀಗಿರುವಾಗಲೇ ನಗರದಲ್ಲಿ ಕಳೆದ ಸೋಮವಾರ ಶತಮಾನದ ಮಳೆ ಸುರಿದಿದೆ.

Advertisement

ಆ ಮಳೆಯನ್ನು ಹಿಡಿದಿಟ್ಟುಕೊಳ್ಳಲು ನಾವು ಸಫ‌ಲರಾಗಿದ್ದರೆ, ಅದು ಒಂದು ತಿಂಗಳಿಗೆ ಸಾಕಾಗುಷ್ಟು ನೀರಾಗುತ್ತಿತ್ತು. ನಗರದಲ್ಲಿ ಸೋಮವಾರ ತಡರಾತ್ರಿ ಸರಾಸರಿ 63 ಮಿ.ಮೀ. ಮಳೆಯಾಗಿತ್ತು. ಅದರಲ್ಲೂ ಬಿಳೇಕಹಳ್ಳಿಯೊಂದರಲ್ಲೇ 180 ಮಿ.ಮೀ. ಮಳೆಯಾಗಿತ್ತು. ಇದು ಸಾರ್ವಕಾಲಿಕ ದಾಖಲೆಯೂ ಹೌದು.

ಹಾಗೊಂದು ವೇಳೆ ಈ ನೀರನ್ನು ಹಿಡಿದಿಡುವ ವ್ಯವಸ್ಥೆ ನಮ್ಮಲ್ಲಿ ಇದ್ದಿದ್ದರೆ, ಅದರಿಂದ ಅಂದಾಜು 1.4 ಟಿಎಂಸಿ ನೀರು ಸಂಗ್ರಹಿಸಿಟ್ಟುಕೊಳ್ಳಬಹುದಿತ್ತು. ಬಿದ್ದ ಮಳೆಯಲ್ಲಿ ಬೆಂಗಳೂರು ದಕ್ಷಿಣದ ಪಾಲು 1 ಟಿಎಂಸಿ ನೀರು ಎಂದು ಅಂದಾಜಿಸಲಾಗಿದೆ. ಇದು ಬೆಂಗಳೂರಿಗರು ಒಂದು ತಿಂಗಳು ಬಳಸುವ ನೀರಿಗೆ ಸರಿಸಮ. 

ನಗರ ಸೇರಿದಂತೆ ರಾಜ್ಯಾದ್ಯಂತ ಮಳೆ ಕೊರತೆ ಇದೆ. ಬೆಂಗಳೂರಿಗೆ ನೀರುಣಿಸುವ ಕಾವೇರಿ ಕಣಿವೆಯಲ್ಲೂ ಈ ಬಾರಿ ಸರಿಯಾದ ಮಳೆ ಇಲ್ಲ. ಹಾಗಾಗಿ ಡ್ಯಾಂಗಳೂ ತುಂಬಿಲ್ಲ. ಇರುವ ನೀರಲ್ಲೇ ತಮಿಳುನಾಡಿನ ಪಾಲನ್ನು ನೀಡಬೇಕಾದ್ದು ಅನಿವಾರ್ಯತೆ. ಹಾಗೆ ಪಕ್ಕದ ರಾಜ್ಯಕ್ಕೆ ನೀರು ಕೊಟ್ಟಮೇಲೆ ಬೆಂಗಳೂರಿಗೆ ಉಳಿಯುವುದೇನು?

ಹಾಗಾಗಿ ಬೇಸಿಗೆಯಲ್ಲಿ ಉಂಟಾಗಲಿರುವ ನೀರಿನ ಹಾಹಾಕಾರದ ಮುನ್ಸೂಚನೆ ಈಗಾಗಲೇ ಸಿಕ್ಕಿದೆ. ಇಂತಹ ಸಂದರ್ಭದಲ್ಲಿ ಬಿದ್ದ ಮಳೆಯಿಂದ ನಗರದ ಜನರಿಗೆ ಅನಾಯಾಸವಾಗಿ ತಿಂಗಳಿಗೆ ಆಗುವಷ್ಟು ನೀರು ಲಭ್ಯವಾಗುತ್ತಿತ್ತು. ಆದರೆ, ನೀರಿನ ಸಂಗ್ರಹಣ ಸಮರ್ಪಕ ವ್ಯವಸ್ಥೆ ಹೊಂದಿಲ್ಲದ ನಾವು ಒಂದು ಟಿಎಂಸಿ ನೀರನ್ನು ಕೈಚೆಲ್ಲಿದ್ದೇವೆ. 

Advertisement

ನೀರಿನ ಲೆಕ್ಕಾಚಾರ ಹೀಗಿದೆ ನೋಡಿ: ನಗರದ ವಿಸ್ತೀರ್ಣ 800 ಚದರ ಕಿ.ಮೀ. ಇದೆ. ಈ ವ್ಯಾಪ್ತಿಯಲ್ಲಿ ಬೀಳುವ ಒಟ್ಟಾರೆ ಮಳೆ ನೀರನ್ನು ಲೆಕ್ಕಹಾಕಿದರೆ, 464 ಮಿಲಿಯನ್‌ ಕ್ಯುಬಿಕ್‌ ಮೀಟರ್‌ ಆಗುತ್ತದೆ. 28.32 ಮಿಲಿಯನ್‌ ಕ್ಯುಬಿಕ್‌ ಮೀಟರ್‌ ನೀರು 1 ಟಿಎಂಸಿಗೆ ಸಮ. ಸೋಮವಾರ ರಾತ್ರಿಯಿಂದೀಚೆಗೆ 28.36 ಮಿಲಿನಯನ್‌ ಕ್ಯುಬಿಕ್‌ ಮೀಟರ್‌ಗಿಂತಲೂ ಹೆಚ್ಚು ಮಳೆ ಬಿದ್ದಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. 

ಮಳೆ ಮತ್ತು ಅದರಿಂದ ಉಂಟಾಗಬಹುದಾದ ನೆರೆಯನ್ನು ನಾವು ಸಂಪನ್ಮೂಲವಾಗಿ ಪರಿವರ್ತಿಸುವ ಅವಶ್ಯಕತೆ ಇದೆ. ಉದಾಹರಣೆಗೆ 30×40 ಚದರಡಿಯ ಹತ್ತು ಮನೆಗಳಿರುವ ಒಂದು ಪ್ರದೇಶದಲ್ಲಿ 50 ಮಿ.ಮೀ. ಮಳೆ ಬಿದ್ದರೆ, ಒಂದು ಲಕ್ಷ ಲೀ. ನೀರನ್ನು ಅನಾಯಾಸವಾಗಿ ಹಿಡಿದಿಡಬಹುದು.

ಸೋಮವಾರ ರಾತ್ರಿ ನಗರದಲ್ಲಿ ಅಳವಡಿಸಿರುವ 80 ಮಳೆ ಮಾಪನ ಕೇಂದ್ರಗಳ ದಾಖಲೆಗಳ ಪ್ರಕಾರ ಸರಾಸರಿ 63 ಮಿ.ಮೀ. ಮಳೆಯಾಗಿದೆ. ಆದರೆ, ಯಾವುದೇ ಪೂರ್ವಯೋಜನೆಗಳು ಇಲ್ಲದ್ದರಿಂದ ಆ ಮಳೆಯೇ ನಮಗೆ ಸಮಸ್ಯೆಯಾಗಿ ಪರಿಣಮಿಸಿತು ಎಂದು ಕರ್ನಾಟಕ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಶ್ರೀನಿವಾಸ ರೆಡ್ಡಿ ತಿಳಿಸುತ್ತಾರೆ. 

ಕೆರೆಗಳಿಗೆ ಲಿಂಕ್‌ ಮಾಡಲಿ: ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಮಳೆ ನೀರು ಭಾಗಶಃ ಚರಂಡಿ ಮೂಲಕ ಕೆರೆಗಳಿಗೆ ಸೇರುತ್ತಿದೆ. ಇದರೊಂದಿಗೆ ಕೊಳಚೆ ನೀರು ಕೂಡ ಅದೇ ಕೆರೆಗೆ ಸೇರುತ್ತಿದೆ. ಹಾಗಾಗಿ, ಕೊಳಚೆ ನೀರಿನಿಂದ ಕೆರೆಗಳನ್ನು ಮುಕ್ತಗೊಳಿಸಿ, ಮಳೆ ನೀರನ್ನು ಆ ಕೆರೆಗಳಿಗೆ “ಲಿಂಕ್‌’ ಮಾಡಬಹುದು. ಕೆರೆ ಪಕ್ಕದಲ್ಲೇ ಸಂಸ್ಕರಣಾ ಘಟಕಗಳನ್ನು ತೆರೆದು, ಆ ನೀರನ್ನು ಮರುಬಳಕೆ ಮಾಡಲು ಅವಕಾಶ ಇದೆ ಎಂದೂ ಅವರು ಅಭಿಪ್ರಾಯಪಟ್ಟರು. 

ಆದರೆ, ಹೀಗೆ ಬಿದ್ದ ಎಲ್ಲ ನೀರನ್ನೂ ಸಂಗ್ರಹಿಸುವುದು ಅಸಾಧ್ಯದ ಮಾತು. ನಗರದ ಬೆಳವಣಿಗೆ ಬೇರೆ ಬೇರೆ ರೀತಿಯಲ್ಲಿರುತ್ತದೆ. ಎಲ್ಲ ಕಡೆಗೂ ಮಳೆ ನೀರು ಸಂಗ್ರಹ ಮಾಡಲು ಪೂರಕ ವ್ಯವಸ್ಥೆ ಇರುವುದಿಲ್ಲ. ಆದರೆ, ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಉಂಟಾಗಬೇಕು. ರಾಜಕಾಲುವೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದರೆ, ಅರ್ಧಕ್ಕರ್ಧ ಸಮಸ್ಯೆ ಪರಿಹಾರ ಆಗುತ್ತದೆ, ನೀರಿಗಾಗಿ ಡ್ಯಾಂಗಳನ್ನು ಅವಲಂಭಿಸುವುದೂ ತಪ್ಪುತ್ತದೆ ಎಂದು ಜಲ ಮಂಡಳಿ ಅಧಿಕಾರಿಯೊಬ್ಬರು ತಿಳಿಸುತ್ತಾರೆ.  

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next