ಮುನ್ನೂರು: ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವಾಗಿ ಸುಂಕ ಪಾವತಿಸಿದರೂ ತ್ಯಾಜ್ಯ ಸಂಗ್ರಹ ಸರಿಯಾಗಿ ಆಗುತ್ತಿಲ್ಲ, ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಹಿತ ಕರ ಘಟನೆಗಳಿಂದ ಜನರು ಭೀತಿ ಪಡುವಂತಾಗಿದೆ ಮತ್ತು ಕುತ್ತಾರಿನಲ್ಲಿ ಯುವತಿಯರನ್ನು ಚುಡಾಯಿಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಸುಭಾಷನಗರದ ಸಮುದಾಯ ಭವನದಲ್ಲಿ ಜರಗಿದ ಮುನ್ನೂರು ಗ್ರಾಮ ಪಂಚಾಯತ್‌ನ 2017-18ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು.
ತ್ಯಾಜ್ಯ ಘಟಕಕ್ಕೆ ಸಂಬಂಧಿಸಿ ಜಿ.ಪಂ ಸದಸ್ಯೆ ಧನಲಕ್ಷ್ಮಿ ಗಟ್ಟಿ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲೇ ಪ್ರಥಮವಾಗಿ ಮುನ್ನೂರು ಗ್ರಾಮದಲ್ಲಿನ ತ್ಯಾಜ್ಯ ಸಂಗ್ರಹ ಘಟಕ ಕಾರ್ಯಾಚರಿಸುತ್ತಿದೆ. ಮನೆಗಳಿಂದ ಕಸ ಸಂಗ್ರಹಕ್ಕೆ ಎರಡು ವಾಹನಗಳನ್ನು ಇಡಲಾಗಿದೆ. ಆದರೆ ಪ್ಲಾಸ್ಟಿಕ್ ತ್ಯಾಜ್ಯ ವನ್ನು ಸಂಗ್ರಹ ಘಟಕದಲ್ಲಿ ಇಡಲು ತೊಂದರೆಯಾಗುತ್ತಿದ್ದು, ವಾರಕ್ಕೊಮ್ಮೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ಲಾರಿ ಯಲ್ಲಿ ಕೊಂಡೊಯ್ಯುವ ಪ್ರಯತ್ನ ಮಾಡಲಾಗುತ್ತಿದೆ. ಅದಕ್ಕಾಗಿ ಗ್ರಾಮಸ್ಥರು ಪ್ಲಾಸ್ಟಿಕ್ ತ್ಯಾಜ್ಯವನ್ನು ವಾರದಲ್ಲಿ ಒಂದು ಬಾರಿ ನೀಡಿದಲ್ಲಿ ವಿಲೇವಾರಿ ಸುಲಭವಾಗುತ್ತದೆ ಎಂದರು.
ಗ್ರಾಮದಲ್ಲಿ ಇತ್ತೀಚೆಗೆ ಅಹಿ ತಕರ ಘಟನೆಗಳು ಹೆಚ್ಚಾಗಿ ನಡೆ ಯುತ್ತಿದ್ದು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಮುನ್ನೂರು ಕಡೆ ಯಿಂದ ಕುತ್ತಾರು ಜಂಕ್ಷನ್ನಿನ ಬಸ್ಸು ನಿಲ್ದಾಣದವರೆಗೆ ನಡೆದುಕೊಂಡು ಹೋಗುವ ಯುವತಿಯರನ್ನು ಯುವಕರ ತಂಡವೊಂದು ಚುಡಾಯಿಸುತ್ತಿದ್ದು, ಅನಾಗರಿಕರಂತೆ ವರ್ತಿಸುತ್ತಿದ್ದಾರೆ. ಹೆಣ್ಣು ಮಕ್ಕಳ ಮನೆಯವರು ಪೊಲೀಸರಿಗೆ ದೂರು ನೀಡಲು ಹೆದರುತ್ತಿದ್ದಾರೆ. ಪೊಲೀಸರು ಇಂತಹ ಯುವಕರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಿದೆ ಎಂದು ಮಹಿಳೆಯೊಬ್ಬರು ಆಗ್ರ ಹಿಸಿದರು.
ಮುನ್ನೂರು ಪಂಚಾಯತ್ ವ್ಯಾಪ್ತಿಯಲ್ಲಿ ಎರಡು ಕೊಲೆಯತ್ನ ಪ್ರಕರ ಣಗಳು ನಡೆದಿವೆ. ಆದರೆ ಆರೋಪಿಗಳ ಬಂಧನವಾಗಿಲ್ಲ. ಅಹಿತಕರ ಘಟನೆಗಳು ಮರುಕಳಿಸುತ್ತಲೇ ಇವೆ. ಪೊಲೀಸರು ಕಟ್ಟುನಿಟ್ಟಾದ ಕ್ರಮಕೈಗೊಳ್ಳಬೇಕಿದೆ. ಜನ ರೊಂದಿಗೆ ವಿಶ್ವಾಸ ಹೊಂದುವ ಜನಸ್ನೇಹಿ ಕಾರ್ಯಕ್ರಮವನ್ನು ಪೊಲೀಸರು ನಡೆಸದೆ ಹಲವು ಸಮಯಗಳೇ ನಡೆದಿವೆ. ಇದರಿಂದ ಜನರ ಸಹಕಾರವೂ ಪೊಲೀಸರಿಗೆ ಸಿಗುತ್ತಿಲ್ಲ. ಗ್ರಾಮದ ಜನ ಭೀತಿಯಿಂದಲೇ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾಗಿದೆ. ಗ್ರಾಮಸ್ಥರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಪೊಲೀಸರಿಂದ ಆಗಬೇಕಿದೆ ಎಂದು ಜಿ.ಪಂ. ಸದಸ್ಯೆ ಧನಲಕ್ಷಿ$¾à ಗಟ್ಟಿ ಹೇಳಿದರು.
ಪೊಲೀಸ್ ಸಿಬಂದಿ ಮಾತನಾಡಿ,ಲಿಖೀತ ದೂರು ನೀಡಿದಲ್ಲಿ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು. ಪೊಲೀಸ್ ಅಧಿಕಾರಿಗಳಲ್ಲಿ ನೇರ ಸಂಪರ್ಕಿಸಿ ಮಾಹಿತಿ ನೀಡಿ. ಪೊಲೀಸ್ ಬೀಟ್ ನಂತೆ ಆಯಾಯ ಪ್ರದೇಶಕ್ಕೆ ಒಬ್ಬರೊಬ್ಬರಿಗೆ ಜವಾಬ್ದಾರಿ ನೀಡಲಾಗಿದೆ. ಅವರ ಸಂಪರ್ಕ ಇಟ್ಟುಕೊಂಡು ಸ್ಥಳದಲ್ಲಿ ಆಗುವ ಅಹಿತಕರ ಘಟನೆಗಳ ಕುರಿತು ಮಾಹಿತಿ ನೀಡಿ. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದರು.
ಮುನ್ನೂರು ಗ್ರಾ.ಪಂ ಅಧ್ಯಕ್ಷೆ ರೂಪಾ ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಹರೀಶ್ ಭಂಡಾರಬೈಲು, ನೋಡಲ್ ಅಧಿಕಾರಿ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಅಧಿಕಾರಿ ದುರ್ಗಾಲತಾ, ತಾ.ಪಂ ಸದಸ್ಯೆ ಆಲ್ಫೆ†ಡ್ ವಿಲ್ಮಾ ಡಿ’ಸೋಜಾ ಮೊದಲಾದವರು ಉಪಸ್ಥಿತರಿದ್ದರು.