ಸುಳ್ಯ: ಪ್ರತಿ ಮಳೆಗಾಲದಲ್ಲಿ ಹೊರ ಜಗತ್ತಿನ ಸಂಪರ್ಕ ಕಡಿದುಕೊಳ್ಳುತ್ತಿದ್ದ ಎಷ್ಟೋ ಹಳ್ಳಿಗಳ ಜನರ ಬದುಕಿಗೆ ಸಂಪರ್ಕ ಸೇತುವಾದವರು ತೂಗುಸೇತುವೆಗಳ ಸರದಾರ ಪದ್ಮಶ್ರೀ ಪುರಸ್ಕೃತ ಸುಳ್ಯದ ಗಿರೀಶ್ ಭಾರದ್ವಾಜ್. ಅವರು ರಾಜ್ಯಾ ದ್ಯಂತ ನಿರ್ಮಿಸಿದ 8 ತೂಗುಸೇತುವೆಗಳು ಮಹಾಮಳೆಯಲ್ಲಿ ಕೊಚ್ಚಿ ಹೋಗಿವೆ. ಇದರಿಂದಾಗಿ ಭಾರದ್ವಾಜ್ ಮಮ್ಮಲ ಮರುಗಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ, ರಾಮದುರ್ಗ, ಮೊದಗ, ಉತ್ತರ ಕನ್ನಡ ಜಿಲ್ಲೆಯ ಸಹಸ್ರಲಿಂಗ, ಡೋಂಗ್ರಿ, ಕುಮಟಾ, ಚಿಕ್ಕಮಗಳೂರು ಜಿಲ್ಲೆಯ ಬಾಳೆ ಹೊನ್ನೂರು ಸಮೀಪದ ಕಾಂಡ್ಯ ಸೇತುವೆ, ಬೆಳ್ತಂಗಡಿ ತಾಲೂಕಿನ ಮುಗೇರಡ್ಕ ತೂಗು ಸೇತುವೆಗಳಿಗೆ ಹಾನಿ ಉಂಟಾಗಿದೆ. ಕೆಲವು ಹಾನಿಗೀಡಾದರೆ, ಮತ್ತೆ ಕೆಲವು ಸೇತುವೆಗಳ ರೋಪ್, ಪಿಲ್ಲರ್ ಕಳಚಿವೆ. ಕೆಲವು ವರ್ಷಗಳ ಹಿಂದೆ ನಿರ್ಮಿಸಿದ ಮುಗೇರಡ್ಕ ತೂಗು ಸೇತುವೆ ಸಂಪೂರ್ಣ ನಾಶವಾಗಿದೆ.
ದೇಶಾದ್ಯಂತ ಗಿರೀಶ್ ಭಾರದ್ವಾಜ್ ಸುಮಾರು 137 ತೂಗು ಸೇತುವೆಗಳನ್ನು ನಿರ್ಮಿಸಿದ್ದಾರೆ. ಇದು ಅವರಿಗೆ ವ್ಯವಹಾರ ಅಲ್ಲ; ಊರಿಂದ ಊರಿಗೆ ಸ್ನೇಹ, ಪ್ರೀತಿ, ಸಂಬಂಧ ಬೆಸೆಯುವ ಕಾಯಕ. ಸಣ್ಣಪುಟ್ಟ ಸಮಸ್ಯೆ ಬಂದಾಗಲು ಅತ್ಯಂತ ಸ್ನೇಹ ಭಾವದಿಂದ, ಕಾಳಜಿಯಿಂದ ಅಲ್ಲಿಗೆ ಧಾವಿಸುತ್ತಿದ್ದರು. ಆಯಾ ಪ್ರದೇಶಗಳ ಜನರು ತೂಗುಸೇತುವೆ ಮುರಿದಿರುವ ಕುರಿತು ದೂರವಾಣಿಯಲ್ಲಿ ಮಾಹಿತಿ ನೀಡಿದಾಗ ಭಾರದ್ವಾಜ್‌ಗೆ ದು:ಖ ತಡೆಯಲಾಗುತ್ತಿಲ್ಲ. “ಛೇ! ಹೀಗಾಯಿತಲ್ವಾ’ ಎಂದು ಮರುಕಪಡುತ್ತಿದ್ದಾರೆ.
ಸಣ್ಣ, ಪುಟ್ಟ ಹಾನಿ ಕಂಡಿದ್ದೆ. ಆದರೆ, ಈ ಮಟ್ಟದ ಹಾನಿಯ ವಿಷಯ ತಿಳಿದು ನೋವು ತಡೆಯಲಾಗುತ್ತಿಲ್ಲ. ಅಲ್ಲಿನ ಜನರ ಸಂಕಟ ಪದೇಪದೆ ನೆನಪಾಗಿ ಮನಸ್ಸು ಮರುಗುತ್ತಿದೆ.
-ಗಿರೀಶ್ ಭಾರದ್ವಾಜ್