Advertisement

ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗೆ ಬಲಿಯಾದ ಅಮಾಯಕ ಬಾಲಕಿ

12:17 PM Oct 16, 2017 | Team Udayavani |

ಬೆಂಗಳೂರು: ಶುಕ್ರವಾರ ಸುರಿದ ಮಳೆ ಐದು ಅಮಾಯಕ ಜೀವಗಳ ಬಲಿ ಪಡೆದ ನಂತರ ಭಾನುವಾರ ಕೂಡ ಸಾವಿನ ಸರಣಿ ಮುಂದುವರಿದಿದ್ದು, ಬದುಕು ಕಟ್ಟಿಕೊಳ್ಳಲು ದೂರದೂರಿನಿಂದ ಬೆಂಗಳೂರಿಗೆ ಬಂದಿದ್ದ ಬಡ ಕುಟುಂಬದ ಯುವತಿ ಕಾಳುವೆಯಲ್ಲಿ ಕೊಚ್ಚಿಹೋಗಿದ್ದಾಳೆ.

Advertisement

ಯುವತಿ ಸಾವಿಗೆ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ. ಗುಲ್ಬರ್ಗ ಜಿಲ್ಲೆ ಬಿರಾಳ ಗ್ರಾಮದ ಯುವತಿ ನರಸಮ್ಮ (18) ಸಿ.ವಿ.ರಾಮನ್‌ ನಗರ ವಿಧಾನಸಭಾ ಕ್ಷೇತ್ರದ ಕೃಷ್ಣಪ್ಪ ಗಾರ್ಡನ್‌ನಲ್ಲಿನ ಕಾಲುವೆ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ.

ಭಾನುವಾರ ಬೆಳಗ್ಗೆ 7.30ಕ್ಕೆ ಬಹಿರ್ದೆಸೆಗೆಂದು ರಾಜಕಾಲುವೆ ಬಳಿ ಹೋದ ಯುವತಿ, ಕಾಲುಜಾರಿ ಬಿದ್ದಿದ್ದು, ಈ ವೇಳೆ ತಲೆಗೆ ಗಾಯವಾಗಿ ಎದ್ದೇಳಲು ಸಾಧ್ಯವಾಗದೆ ನೀರಿನಲ್ಲಿ ಕೊಚ್ಚಿಹೋಗಿದ್ದಾಳೆ. ಇದನ್ನು ಕಂಡ ದೇವಮ್ಮ ಎಂಬುವವರು ಕೂಗಿಕೊಂಡಿದ್ದನ್ನು ಕೇಳಿ ಬಂದ ಸ್ಥಳೀಯ ಯುವಕರು, ಯುವತಿ ರಕ್ಷಣೆಗೆ ಯತ್ನಿಸಿದರೂ ಪ್ರಯೋಜವಾಗಿಲ್ಲ. ಯುವತಿ ಬಿದ್ದ ಸ್ಥಳದಿಂದ ಸುಮಾರು 400 ಮೀ. ದೂರದಲ್ಲಿ ಬೈರಸಂದ್ರ ಕೆರೆಯ ಪ್ರವೇಶಿಸುವ ಭಾಗದಲ್ಲಿ ಮೃತದೇಹ ಪತ್ತೆಯಾಗಿದೆ.

ಶೌಚಾಲಕ್ಕೆ ಮನವಿ ಮಾಡಿದ್ದರು: ಈ ಪ್ರದೇಶಕ್ಕೆ 10 ಇ-ಶೌಚಾಲಯ ನೀಡುವಂತೆ ಹೊಸ ತಿಪ್ಪಸಂದ್ರ ವಾರ್ಡ್‌ ಸದಸ್ಯೆ ಶಿಲ್ಪಾ ಅಭಿಲಾಷ್‌ ಅವರು ಆರು ತಿಂಗಳಿಂದ ಹಲವಾರು ಬಾರಿ ಪಾಲಿಕೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ, ಅಧಿಕಾರಿಗಳು ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಯುವತಿ ಪ್ರಾಣ ಕಳೆದುಕೊಂಡಿದ್ದು, ಇದೀಗ ಇ-ಶೌಚಾಲಯಗಳನ್ನು ನೀಡಲು ಪಾಲಿಕೆ ಮುಂದಾಗಿದೆ.

ವಿವಾಹಕ್ಕೆ ಸಿದ್ಧತೆ: ನರಸಮ್ಮ ಸೇರಿ ವೆಂಕಪ್ಪ ಅವರಿಗೆ ಲಕ್ಷ್ಮೀ, ಭಾಗ್ಯ ಹಾಗೂ ತಿಪ್ಪ ಎಂಬ ಮಕ್ಕಳಿದ್ದು, ಕಳೆದ 15 ಎದಿನಗಳಿಂದ ಹಿರಿಯ ಮಗಳು ನರಸಮ್ಮನ ವಿವಾಹಕ್ಕೆ ಸಿದ್ಧತೆ ನಡೆದಿತ್ತು. ಕೆಲ ದಿನಗಳ ಹಿಂದೆ ಸ್ವಗ್ರಾಮಕ್ಕೆ ಹೋಗಿ ಮದುವೆ ಗಂಡು ನೋಡುವ ಶಾಸ್ತ್ರ ನಡೆಸಲಾಗಿತ್ತು. ದೀಪಾವಳಿ ಬಳಿಕ ಕನ್ಯೆ ನೋಡಲು ಬರುವುದಾಗಿ ಗಂಡಿನ ಕಡೆಯವರು ತಿಳಿಸಿದ್ದರು.

Advertisement

ಶೌಚಾಲಯ ನೀಡಿದ್ದರೆ…: “ಹಲವಾರು ಬಾರಿ ವಾರ್ಡ್‌ಗೆ ಇ-ಶೌಚಾಲಯ ನೀಡಿ ಎಂಧು ಮನವಿ ಮಾಡಲಾಗಿದೆ. ಆದರೆ, ಬಿಬಿಎಂಪಿ ಈವರೆಗೆ ಮಂಜೂರು ಮಾಡಿಲ್ಲ. ಮಹಿಳೆಯರ ಅನುಕೂಲಕ್ಕಾಗಿ ಇ-ಶೌಚಾಲಯಗಳನ್ನು ಕೋರಿದರೂ ನೀಡಿಲ್ಲ. ಒಂದೊಮ್ಮೆ ನೀಡಿದ್ದರೆ ಯುವತಿ ಪ್ರಾಣ ಉಳಿಯುತ್ತಿತ್ತು.

30 ವರ್ಷಗಳಿಂದ 4 ಎಕರೆ ಜಾಗದಲ್ಲಿ 400ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸವಿದ್ದು, ಸ್ಥಳೀಯರು ಹಾಗೂ ಬಿಇಎಂಎಲ್‌ ನಡುವಿನ ಭೂ ವಿವಾದ ನ್ಯಾಯಾಲಯದಲ್ಲಿದೆ. ಬಿಇಎಂಎಲ್‌ನಿಂದ ಬಿಬಿಎಂಪಿಗೆ ಈ ಜಾಗ ಹಸ್ತಾಂತರಿಸಿಕೊಂಡು ಬಡವರಿಗೆ ನೀಡಲು ಸಚಿವ ಜಾರ್ಜ್‌ ಒಪ್ಪಿದ್ದಾರೆ,’ ಎಂದು ಪಾಲಿಕೆ ಸದಸ್ಯೆ ಶಿಲ್ಪಾ ಅಭಿಲಾಷ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಶವದ ಮುಂದೆ ರಾಜಕೀಯ: ಬಾಲಕಿಯ ಮೃತದೇವ ನೋಡಲು ಶಾಸಕ ಎಸ್‌.ರಘು ಹಾಗೂ ವಾರ್ಡ್‌ ಸದಸ್ಯೆ ಶಿಲ್ಪ ಅಭಿಲಾಷ್‌  ಬೆಳಗ್ಗೆ ಬಂದಿದ್ದರು. ಈ ವೇಳೆ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಮೊದಲಿಗೆ ಶಾಸಕರ ಕಡೆಯವರು ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು.

ಇದರಿಂದ ಕೆರಳಿದ ಸ್ಥಳೀಯರು ಹತ್ತಾರು ವರ್ಷಗಳಿಂದ ನೂರಾರು ಮನವಿಗಳನ್ನು ನಿಮಗೆ ನೀಡಿದ್ದೇವೆ. ನೀವೇನು ಮಾಡಿದ್ದೀರಾ? ಈಗ ರಾಜಕಾರಣ ಮಾಡಲು ಬಂದಿದ್ದೀರಾ ಎಂದು ಶಾಸಕರಿಗೆ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡರು. ಈ ನಡುವೆ ಮೃತ ಯುವತಿಯ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next