Advertisement

ಹಲಸಿನಕಾಯಿ ವೈವಿಧ್ಯ

12:30 AM Feb 22, 2019 | |

ಬಡವರ ಆಹಾರ ಎಂದು ಕರೆಯಲ್ಪಡುತ್ತಿದ್ದ ಹಲಸು ಈಗ ವಿಶ್ವದೆಲ್ಲೆಡೆ ದಾಪುಗಾಲು ಹಾಕುತ್ತಿದೆ. ಹಲಸು ಎಂದರೆ ಮೂಗು ಮರಿಯುವ ಕಾಲ ಹೋಗಿ, ಅದರ ಸದುಪಯೋಗವನ್ನು ಅರಿತುಕೊಂಡು ಕೈಬೀಸಿ ಕರೆಯುವ ಹಾಗಾಗಿದೆ. ಎಲ್ಲೆಲ್ಲೂ ಹಲಸು ಮೇಳ ಪರಿಮಳ ಬೀರುತ್ತಿದೆ. ಈಗ ಹಲಸಿನ ಸೀಸನ್‌. ಎಳೆ ಹಲಸು ಮರದ ತುಂಬಾ ಜೋತಾಡುತ್ತಿದೆ. ಹಲಸನ್ನು ಕೊಯಿದು ತಯಾರಿಸಿದ ಪಾಕ ಪ್ರಯೋಗ ನಿಮಗಾಗಿ…

Advertisement

ಗುಜ್ಜೆ ಉಪ್ಪಿನಕಾಯಿ
ಬೇಕಾಗುವ ಸಾಮಗ್ರಿ:
ಗುಜ್ಜೆ ಹೋಳು- ಒಂದು ಕಪ್‌, ಹರಳುಪ್ಪು- ಕಾಲು ಕಪ್‌, ಮೆಣಸಿನ ಹುಡಿ- ನಾಲ್ಕು ಚಮಚ, ಸಾಸಿವೆ- ಒಂದು ಚಮಚ, ಜೀರಿಗೆ- ಒಂದು ಚಮಚ, ಅರಸಿನ ಹುಡಿ- ಒಂದೂವರೆ ಚಮಚ, ಬೆಲ್ಲ- ಸಣ್ಣ ತುಂಡು, ಲಿಂಬೆ ರಸ- ಎರಡು ಚಮಚ.

ತಯಾರಿಸುವ ವಿಧಾನ: ಎಳೆ ಗುಜ್ಜೆಯನ್ನು ಹೊರಗಿನ ಸಿಪ್ಪೆ , ಗೂಂಜು ತೆಗೆದು ಸಣ್ಣ ತುಂಡುಗಳಾಗಿ ಮಾಡಿಕೊಳ್ಳಿ. ಎರಡು ಗ್ಲಾಸು ನೀರಿಗೆ ಹರಳುಪ್ಪು ಹಾಕಿ ಕದಡಿಕೊಂಡು ಚೆನ್ನಾಗಿ ಕುದಿಸಿಕೊಳ್ಳಿ. ಇದಕ್ಕೆ ಗುಜ್ಜೆ ಹೋಳುಗಳನ್ನು ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ. ಸಾಸಿವೆ-ಜೀರಿಗೆಯನ್ನು ಎಣ್ಣೆ ಹಾಕದೆ ಹುರಿದು ಹುಡಿಮಾಡಿಟ್ಟುಕೊಳ್ಳಿ. ಕಾದ ಬಾಣಲೆಗೆ ಮೆಣಸಿನ ಹುಡಿ, ಅರಸಿನ ಹುಡಿ ಹಾಕಿ ಪರಿಮಳ ಬರುವವರೆಗೆ ಹುರಿದು ಗುಜ್ಜೆಯ ಹೋಳುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಬೇಯಿಸಿದ ನೀರನ್ನು ಸೇರಿಸಿ ಹದಗೊಳಿಸಿ ಕುದಿಸುತ್ತ ಇರಿ. ಬೆಲ್ಲ, ಸಾಸಿವೆ, ಜೀರಿಗೆ ಹುಡಿ, ಸ್ವಲ್ಪ ಉಪ್ಪು ಸೇರಿಸಿ ದಪ್ಪಗಾಗುವವರೆಗೆ ಕುದಿಸಿ ಇಳಿಸಿರಿ, ಕೊನೆಗೆ ಲಿಂಬೆರಸ ಹಾಕಿ ಮುಚ್ಚಿಡಿ. ಆರಿದ ನಂತರ ಚೆನ್ನಾಗಿ ಕಲಸಿಕೊಂಡು ಜಾಡಿಯಲ್ಲಿ ಹಾಕಿಡಿ.

ಗುಜ್ಜೆ ಕೂರ್ಮ
ಬೇಕಾಗುವ ಸಾಮಗ್ರಿ:
ಗುಜ್ಜೆ ಹೋಳು- ಎರಡು ಕಪ್‌, ತೆಂಗಿನ ತುರಿ- ಒಂದು ಕಪ್‌, ಹಸಿಮೆಣಸು- ಎರಡು, ಲವಂಗ- ಎರಡು, ದಾಲ್ಚಿನಿ ಚೆಕ್ಕೆ- ಸಣ್ಣ ತುಂಡು, ಏಲಕ್ಕಿ- ಒಂದು, ಅಕ್ಕಿ ಹುಡಿ- ಎರಡು ಚಮಚ, ಶುಂಠಿ, ಬೆಳ್ಳುಳ್ಳಿ- ಎರಡು, ಕರಿಬೇವು- ಐದು ಗರಿ, ಕೊತ್ತಂಬರಿ ಸೊಪ್ಪು ಸ್ವಲ್ಪ, ರುಚಿಗೆ ಉಪ್ಪು.

ತಯಾರಿಸುವ ವಿಧಾನ: ಸಣ್ಣದಾಗಿ ಹೆಚ್ಚಿಕೊಂಡ ಗುಜ್ಜೆಗೆ ಉಪ್ಪು, ಅರಸಿನ ಹುಡಿ ಹಾಕಿ ಮೆತ್ತಗೆ ಬೇಯಿಸಿ. ಕರಿಬೇವು, ಹಸಿಮೆಣಸನ್ನು ಸ್ವಲ್ಪ ತುಪ್ಪಹಾಕಿ ಹುರಿದುಕೊಂಡು ತೆಂಗಿನ ತುರಿಯ ಜೊತೆ ಸೇರಿಸಿ ಲವಂಗ, ಚೆಕ್ಕೆ, ಶುಂಠಿ, ಬೆಳ್ಳುಳ್ಳಿ ಹಾಕಿ ನಯವಾಗಿ ರುಬ್ಬಿಕೊಂಡು ಬೇಯಿಸಿದ ಗುಜ್ಜೆಗೆ ಸೇರಿಸಿ ಹದಗೊಳಿಸಿರಿ. ಅಕ್ಕಿ ಹುಡಿಯನ್ನು ನೀರಿನಲ್ಲಿ ಕದಡಿ ಅದಕ್ಕೆ ಸೇರಿಸಿ, ಬೆಲ್ಲವನ್ನು ಸೇರಿಸಿಕೊಳ್ಳಿ. ಐದು ನಿಮಿಷ ಕುದಿಸಿ ಇಳಿಸಿರಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಸವಿಯಿರಿ.

Advertisement

ಗುಜ್ಜೆ ಪೋಡಿ
ಬೇಕಾಗುವ ಸಾಮಗ್ರಿ:
ತೆಳುವಾಗಿ ಕತ್ತರಿಸಿದ ಗುಜ್ಜೆ ತುಂಡು- ಇಪ್ಪತ್ತು, ಕಡ್ಲೆಹಿಟ್ಟು- ಒಂದೂವರೆ ಕಪ್‌, ಅಕ್ಕಿ ಹುಡಿ- ಮೂರು ಚಮಚ, ಮೆಣಸಿನ ಹುಡಿ- ಮೂರು ಚಮಚ, ಕರಿಮೆಣಸಿನ ಹುಡಿ- ಒಂದು ಚಮಚ, ಇಂಗು, ರುಚಿಗೆ ತಕ್ಕಷ್ಟು  ಉಪ್ಪು, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಸಿಪ್ಪೆ, ಗೂಂಜು ತೆಗೆದ ಗುಜ್ಜೆಯನ್ನು ಕಾಲು ಇಂಚು ದಪ್ಪಗೆ ಚಪ್ಪಟೆಯಾಗಿ ಕತ್ತರಿಸಿಕೊಳ್ಳಿ. ಕಡ್ಲೆಹಿಟ್ಟಿಗೆ ಅಕ್ಕಿ ಹುಡಿ, ಉಪ್ಪು, ಮೆಣಸಿನ ಹುಡಿ, ಕರಿಮೆಣಸಿನ ಹುಡಿ ಹಾಕಿ ನೀರಿನಲ್ಲಿ ದಪ್ಪಗೆ ಕದಡಿಕೊಂಡು ಗುಜ್ಜೆ ತುಂಡುಗಳನ್ನು ಇದರಲ್ಲಿ ಮುಳುಗಿಸಿ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ. 

ಗುಜ್ಜೆ ಚಟ್ನಿ
ಬೇಕಾಗುವ ಸಾಮಗ್ರಿ:
ಹೆಚ್ಚಿದ ಗುಜ್ಜೆ ಹೋಳು- ಒಂದು ಕಪ್‌, ತೆಂಗಿನ ತುರಿ- ಮುಕ್ಕಾಲು ಕಪ್‌, ಉದ್ದಿನಬೇಳೆ- ಎರಡು ಚಮಚ, ಒಣಮೆಣಸು- ಎರಡು, ಬೆಳ್ಳುಳ್ಳಿ- ಎರಡು ಎಸಳು, ಹುಳಿ ಸ್ವಲ್ಪ, ಅರಸಿನ ಹುಡಿ ಸ್ವಲ್ಪ, ಬೆಲ್ಲ- ಸಣ್ಣ ತುಂಡು, ಕರಿಬೇವು- ಒಂದು ಗರಿ, ಎಣ್ಣೆ ಸ್ವಲ್ಪ, ರುಚಿಗೆ ಉಪ್ಪು.

ತಯಾರಿಸುವ ವಿಧಾನ: ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯೊಂದಿಗೆ ಉದ್ದಿನ ಬೇಳೆ, ಒಣಮೆಣಸು ಹಾಕಿ ಕೆಂಪಗೆ ಹುರಿದುಕೊಳ್ಳಿ. ಇದಕ್ಕೆ ಹೆಚ್ಚಿದ ಗುಜ್ಜೆಯನ್ನು ಹಾಕಿ ನೀರು, ಉಪ್ಪು, ಅರಸಿನ ಹುಡಿ ಹಾಕಿ ಮೆತ್ತಗೆ ಬೆಂದ ನಂತರ ಬೆಲ್ಲ, ಹುಳಿ ಹಾಕಿ ನೀರು ಆರುವವರೆಗೆ ಬೇಯಿಸಿ ತೆಂಗಿನ ತುರಿ ಹಾಕಿ ಎರಡು ನಿಮಿಷ ಹುರಿದುಕೊಂಡು ಇಳಿಸಿ. ಬಿಸಿ ಆರಿದ ನಂತರ ಬೆಳ್ಳುಳ್ಳಿ ಬೀಜ ಹಾಕಿ ನಯವಾಗಿ ರುಬ್ಬಿಕೊಳ್ಳಿ. (ರುಬ್ಬುವಾಗ ಬೇಕಿದ್ದರೆ ನೀರು ಸೇರಿಸಿಕೊಳ್ಳಿ.) ಸಾಸಿವೆ ಒಗ್ಗರಣೆಯೊಂದಿಗೆ ಕರಿಬೇವು ಸೇರಿಸಿ ಅಲಂಕರಿಸಿ ಸವಿಯಿರಿ.

ಗುಜ್ಜೆ ಮಂಚೂರಿ
ಬೇಕಾಗುವ ಸಾಮಗ್ರಿ:
ಗುಜ್ಜೆ ಹೋಳು- ಎರಡೂವರೆ ಕಪ್‌, ಅಕ್ಕಿ ಹುಡಿ- ಮುಕ್ಕಾಲು ಕಪ್‌, ಕಡ್ಲೆಹುಡಿ- ಎರಡು ಚಮಚ, ಆರಾರೋಟು (ಕೂವೆ) ಹುಡಿ- ಎರಡು ಚಮಚ, ಮೆಣಸಿನಹುಡಿ- ಎರಡು ಚಮಚ, ಹಸಿಮೆಣಸಿನಕಾಯಿ- ಮೂರು, ಟೊಮೆಟೊ- ಮೂರು, ಈರುಳ್ಳಿ- ಎರಡು, ಬೆಳ್ಳುಳ್ಳಿ- ಹತ್ತು ಎಸಳು, ಹೆಚ್ಚಿದ ಕೊತ್ತಂಬರಿ ಸೊಪ್ಪು- ಅರ್ಧ ಕಪ್‌, ಲಿಂಬೆರಸ- ಮೂರು ಚಮಚ, ಶುಂಠಿ- ಸಣ್ಣ ತುಂಡು, ಉಪ್ಪು, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಗುಜ್ಜೆಯ ಸಿಪ್ಪೆ, ಗೂಂಜು ತೆಗೆದು ಹದ ಗಾತ್ರದ ಹೋಳುಗಳಾಗಿ ಮಾಡಿಕೊಳ್ಳಿ. ಅಕ್ಕಿ ಹುಡಿಗೆ ಕಡ್ಲೆ ಹುಡಿ, ಉಪ್ಪು, ಮೆಣಸಿನ ಹುಡಿ, ಹಾಕಿ ದಪ್ಪಗೆ ಕಲಸಿಕೊಳ್ಳಿ. ಇದಕ್ಕೆ ಕೂವೆ ಹುಡಿಯನ್ನು ನೀರಿನಲ್ಲಿ ಕದಡಿ ಸೇರಿಸಿಕೊಂಡು ದೋಸೆಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಇದಕ್ಕೆ ಗುಜ್ಜೆ ಹೋಳುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಕಾದ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ. ಟೊಮೆಟೊ ಹಣ್ಣನ್ನು ಬೇಯಿಸಿ ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿ, ಮೆಣಸಿನ ಹುಡಿ, ಉಪ್ಪು, ಸಕ್ಕರೆ ಹಾಕಿ ದಪ್ಪಗಿನ ದ್ರಾವಣ ಮಾಡಿಕೊಳ್ಳಿ. ಬಾಣಲೆಗೆ ಮೂರು ಚಮಚ ಎಣ್ಣೆ ಹಾಕಿ ಕಾದ ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು ಹಾಕಿ ಕೆಂಪಗೆ ಹುರಿದು, ಮಾಡಿಟ್ಟ ಟೊಮೆಟೊ ರಸವನ್ನು ಸೇರಿಸಿ ಚೆನ್ನಾಗಿ ಕುದಿಸಿ. ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ, ಹುರಿದ ಗುಜ್ಜೆ ಹೋಳುಗಳನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಕೊನೆಗೆ ಲಿಂಬೆರಸ ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಸವಿಯಿರಿ.

ವಿಜಯಲಕ್ಷ್ಮೀ ಕೆ. ಎನ್‌.

Advertisement

Udayavani is now on Telegram. Click here to join our channel and stay updated with the latest news.

Next