Advertisement

Alvas Virasat: ಜಯ ಘೋಷ, ಮಂಗಳವಾದ್ಯಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆ

03:27 AM Dec 15, 2024 | Team Udayavani |

ಮೂಡುಬಿದಿರೆ: ಐದು ದಿನಗಳ ಮೊದಲು ವಿರಾಸತ್‌ ವೇದಿಕೆಯಲ್ಲಿ ಬಲದಿಂದ ಸಂಚರಿಸಿ ಎಡಭಾಗದಲ್ಲಿ ಸ್ಥಿತಗೊಂಡಿದ್ದ ಸಾಂಸ್ಕೃತಿಕ ರಥ ಶನಿವಾರ ರಾತ್ರಿ ಸ್ವಸ್ಥಾನಕ್ಕೆ ಮರಳಿತು.

Advertisement

ಬಾನಂಗಳದಲ್ಲಿ ಸಿಡಿಮದ್ದುಗಳ ಚಿತ್ತಾರ, ವೇದಘೋಷಗಳ ನಿನಾದ, ಭಜನೆಗಳು, ಪುಷ್ಪ ಪಲ್ಲಕ್ಕಿಗಳು, ಪ್ರೇಕ್ಷಕರ ಜಯ ಘೋಷ ಹಾಗೂ ಮಂಗಳವಾದ್ಯಗಳೊಂದಿಗೆ ಸಾಂಸ್ಕೃತಿಕ ರಥ ವೇದಿಕೆಯ ಎಡದಿಂದ ಬಲಕ್ಕೆ ಸಂಚರಿಸಿ ಸ್ವಸ್ಥಾನಕ್ಕೆ ಮರಳಿತು. ಜತೆಗೆ ಧ್ವಜ ಅವರೋಹಣದೊಂದಿಗೆ ವಿರಾ ಸತ್‌ನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶನಿವಾರ ರಾತ್ರಿ ತೆರೆ ಬಿತ್ತು.

ಲೋಕ ಮಾರ್ಗದರ್ಶಕರಾದ ರಾಮ-ಕೃಷ್ಣರ ಮೂರ್ತಿ ಪ್ರತಿಷ್ಠಾಪಿಸಿದ ಸಾಂಸ್ಕೃತಿಕ ರಥವನ್ನು ಮುಖ್ಯ ವೇದಿಕೆಯ ಮುಂಭಾಗದಲ್ಲಿ ಎಡದಿಂದ ಬಲಕ್ಕೆ ಎಳೆಯಲಾಯಿತು. ಇದಕ್ಕೂ ಮೊದಲು ಸಣ್ಣ ರಥದಲ್ಲಿ ಗಣಪತಿ, ಪಲ್ಲಕ್ಕಿಯಲ್ಲಿ ಹನುಮಂತ, ಮಹಾಲಕ್ಷ್ಮೀ ಹಾಗೂ ಸರಸ್ವತಿ ಮೂರ್ತಿಗಳನ್ನು ಕರೆ ತರಲಾಯಿತು.

ರಥಯಾತ್ರೆಯಲ್ಲಿ ಮೈಸೂರು, ಪಂಡರಾಪುರ ಹಾಗೂ ಮಂಗಳೂರು ಹರೇಕೃಷ್ಣ ಪಂಥದ ಭಜನ ತಂಡಗಳ ಭಜನೆ ಹಾಡಿನ ಮೂಲಕ ಭಕ್ತಿ ಪ್ರಭಾವಳಿ ಮೂಡಿಸಿದರು. ಅರ್ಚಕರು ಮಂತ್ರ ಘೋಷ ಮಾಡಿದರು. ತಟ್ಟಿ ರಾಯ, ಅಪ್ಸರೆಯರು, ಕಲಶ ಹಿಡಿದ ಯುವತಿಯರು, ಹುಲಿರಾಯ, ಕೊಂಬು, ಕಹಳೆ ನಾದ ಮೊಳಗಿದವು. ಛತ್ರಿ, ಬಿರುದಾವಳಿ, ಚಾಮರ ಗಳೊಂದಿಗೆ ದೊಂದಿಗಳು ಬೆಳಗಿದವು.

ಹರಿದ್ವಾರದಿಂದ ಬಂದ ವಿಪುಲ್‌ ಶರ್ಮಾ ನೇತೃತ್ವದ ಗಂಗಾರತಿ ತಂಡವು ಮಂತ್ರ ಘೋಷಗಳೊಂದಿಗೆ ಆರತಿ ಬೆಳಗಿದರು. ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿ ವಿವೇಕ್‌ ಆಳ್ವ ಹಾಗೂ ಗಣ್ಯರು ರಥಕ್ಕೆ ಪುಷ್ಪಾರ್ಚನೆ ಮಾಡಿದರು.

Advertisement

ರವಿವಾರವೂ ಇದೆ ಮೇಳ
ಡಿ. 15ರಂದು ವಿರಾಸತ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹೊರತು ಪಡಿಸಿ, ಉಳಿದೆಲ್ಲವೂ ಇರಲಿವೆ. ಬೆಳಗ್ಗೆ 9ರಿಂದ ರಾತ್ರಿ 10ರ ವರೆಗೆ ಮಳಿಗೆಗಳು ತೆರೆದಿರಲಿವೆ. 7 ಮೇಳಗಳ 750ಕ್ಕೂ ಮಳಿಗೆಗಳಿವೆ. ರಜಾದಿನವನ್ನು ಕುಟುಂಬದ ಜತೆ ಆನಂದಿಸಬಹುದು.

ಎಲ್ಲವೂ ನಿರೀಕ್ಷೆಯಂತೆ ಸಾಗಿದೆ: ಡಾ| ಮೋಹನ್‌ ಆಳ್ವ ಮಾತು
ಮೂಡುಬಿದಿರೆ: ವಿರಾಸತ್‌ ತನ್ನ ಎಂದಿನ ಗತ್ತನ್ನು ಕಾದಿಟ್ಟುಕೊಂಡು ಬಂದಿದೆ, ಯಾವುದೇ ರಾಜಿಯಾಗಿಲ್ಲ, ಎಲ್ಲಕ್ಕಿಂತಲೂ ಖುಷಿ ಎಂದರೆ ಜನರು ಪ್ರತಿದಿನವೂ ನನ್ನ ನಿರೀಕ್ಷೆಯಂತೆಯೇ ಬೆಳಗ್ಗಿನಿಂದ ಸಂಜೆ ವರೆಗೂ ಇದ್ದು ಖುಷಿಪಟ್ಟಿದ್ದಾರೆ.

30ನೇ ವರ್ಷದ ಆಳ್ವಾಸ್‌ ವಿರಾಸತ್‌ ಅಂತಿಮ ಹಂತದಲ್ಲಿದೆ. ಕಳೆದ ಐದು ದಿನಗಳಲ್ಲಿ ವಿರಾಸತ್‌ ಹೆಚ್ಚು ಜನರನ್ನು ತಲಪಿದೆ. ಜನ ವಿದ್ಯಾಗಿರಿಗೆ ಆಗಮಿಸಿ, ಸಾಂಸ್ಕೃತಿಕ ಉತ್ಸವಗಳನ್ನು ಸವಿಯುವುದರ ಜತೆಗೆ ಕ್ಯಾಂಪಸ್‌ ಆವರಣದಲ್ಲಿರುವ ವಿವಿಧ ಮೇಳಗಳಿಗೂ ಭೇಟಿ ಕೊಡುತ್ತಿದ್ದಾರೆ. ಇದು ನಮ್ಮ ನಿರೀಕ್ಷೆಯಂತೇ ಆಗಿದೆ ಎನ್ನುತ್ತಾರೆ ಆಳ್ವಾಸ್‌ ವಿರಾಸತ್‌ನಕತೃ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಧ್ಯಕ್ಷ ಡಾ| ಎಂ. ಮೋಹನ್‌ ಆಳ್ವ.

ವಿರಾಸತ್‌ ತಯಾರಿ ವೇಳೆ ಮಳೆಯಿಂದಾಗಿ ಸಿದ್ಧತೆ ಅಸ್ತವ್ಯಸ್ತವಾಗಿತ್ತು. ಕೃಷಿಮೇಳದ ಆವರಣ, ಅಲಂಕಾರಗಳು ಎಲ್ಲದಕ್ಕೂ ಅಡಚಣೆಯಾಗಿತ್ತು. ಈಗ ಬಹಳ ಸಮಾಧಾನವಾಗಿದೆ, ಮಳೆಯ ಸಮಸ್ಯೆಯೂ ಆಗಿಲ್ಲ. ನಾನು ನಿರೀಕ್ಷೆ ಮಾಡಿದಂತೆ ಎಲ್ಲ ವರ್ಗದ ಜನರೂ ಆಗಮಿಸಿ ಖುಷಿಪಟ್ಟಿದ್ದಾರೆ. ಅದರಲ್ಲೂ ಹಿಂದೆ ವಿರಾಸತ್‌ನ ಮೊದಲ ಕಾರ್ಯಕ್ರಮ ಮುಗಿದ ಕೂಡಲೇ ಜನ ಹೆಚ್ಚಾಗಿ ತೆರಳುತ್ತಿದ್ದರು, ಆದರೆ ಈ ಬಾರಿ ಕೊನೆವರೆಗೂ ಸರಾಸರಿ 20 ಸಾವಿರ ಮಂದಿ ಇದ್ದು ಕಾರ್ಯಕ್ರಮಗಳನ್ನು ವೀಕ್ಷಿಸಿದ್ದಾರೆ. ಹಾಗಾಗಿ ಹಿಂದಿಗಿಂತಲೂ ಈ ಬಾರಿ ವಿರಾಸತ್‌ ಜನರನ್ನು ತಲಪಿದೆ.

ಸ್ವತ್ಛತೆ, ಸಮಯಪ್ರಜ್ಞೆ, ಕಾರ್ಯ ಕ್ರಮ ನಡೆಸುವ ಕ್ರಮಗಳು, ಶಿಸ್ತು ಸಾಮಾನ್ಯವಾಗಿ ಈ ಬಾರಿಯದ್ದೇ ಶ್ರೇಷ್ಠವಾಗಿದೆ, ಇದನ್ನೇ ಕಾಪಾಡಿಕೊಂಡು ಬಂದಿದ್ದೇವೆ, ವಿರಾಸತ್‌ನ ಗತ್ತು ಕಡಿಮೆಯಾಗಿಲ್ಲ. ಸ್ವತ್ಛತೆ, ಸಮಯಪ್ರಜ್ಞೆ, ಕ್ರಮಗಳು, ಶಿಸ್ತು, ಯಾರಿಗೂ ತೊಂದರೆಯಾಗದ ಪಾರ್ಕಿಂಗ್‌ ಈ ಎಲ್ಲ ಅಂಶಗಳನ್ನೂ ಕಾಪಾಡಿಕೊಂಡೇ ಬಂದಿದ್ದೇವೆ. ಪೊಲೀಸರನ್ನು ಬಳಸದೆ ನಮ್ಮದೇ ಸ್ವಯಂಸೇವಕರು, ಸ್ಕೌಟ್ಸ್‌ ಗೈಡ್ಸ್‌ ಗಳೂ ಸೇರಿಕೊಂಡು ಇಷ್ಟು ಜನರನ್ನು ನಿರ್ವಹಣೆ ಮಾಡಿದ್ದೇ ವಿಶೇಷ.

ವಿರಾಸತ್‌ ಇಂದೂ ಇದೆ ಬನ್ನಿ
ವಿರಾಸತ್‌ ಶನಿವಾರವೇ ಮುಗಿದಿಲ್ಲ, ರವಿವಾರ ಇಡೀ ದಿನ ಕೃಷಿ, ಕರಕುಶಲ, ಫಲಪುಷ್ಪ, ಆಹಾರ ಸಹಿತ ಎಲ್ಲ ಮೇಳ ಗಳನ್ನೂ ಆನಂದಿಸಬಹುದು. ಸಾಂಸ್ಕೃ ತಿಕ ಕಾರ್ಯಕ್ರಮ ಮಾತ್ರ ಇರುವು ದಿಲ್ಲ ಎಂದು ಡಾ| ಆಳ್ವ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next