Advertisement

Nuclear Power Plant: ಇನ್ನೊಂದು ಅಣುಸ್ಥಾವರ ಮೂರು ಜಿಲ್ಲೆಗಳಲ್ಲಿ ಪರಿಶೀಲನೆ

02:01 AM Jan 09, 2025 | Team Udayavani |

ಬೆಂಗಳೂರು: ರಾಷ್ಟ್ರೀಯ ಉಷ್ಣ ವಿದ್ಯುತ್‌ ನಿಗಮವು (ಎನ್‌ಟಿಪಿಸಿ) ರಾಜ್ಯದಲ್ಲಿ ಅಣು ವಿದ್ಯುತ್‌ ಸ್ಥಾವರ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೀಡಿರುವ ಪ್ರಸ್ತಾವನೆಗೆ ಪೂರಕವಾಗಿ ಸರಕಾರ ಮುಂದಡಿ ಇಟ್ಟಿದೆ. ಇದಕ್ಕಾಗಿ ಲಭ್ಯವಿರುವ ಭೂಮಿ ಮತ್ತು ನೀರು ಒಳಗೊಂಡಂತೆ ಕಾರ್ಯಸಾಧ್ಯತೆ ಕುರಿತ ವರದಿ ಸಿದ್ಧಪಡಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

Advertisement

ರಾಜ್ಯದ ವಿಜಯಪುರ, ಕೊಪ್ಪಳ ಮತ್ತು ರಾಯಚೂರು ಸೇರಿದಂತೆ 3 ಕಡೆ ವಿವಿಧ ಸಾಮರ್ಥ್ಯದ ಅಣು ವಿದ್ಯುತ್‌ ಸ್ಥಾವರ ಘಟಕಗಳ ನಿರ್ಮಾಣ ಮಾಡಬಹುದು. ಭೂಮಿ ಮಂಜೂರಾತಿ ಮತ್ತು ಭೌಗೋಳಿಕ ಅಧ್ಯಯನಕ್ಕೆ ಅನುಮತಿ ಕೋರಿ ರಾಜ್ಯ ಸರಕಾರಕ್ಕೆ ಈಚೆಗೆ ಎನ್‌ಟಿಪಿಸಿ ಮನವಿ ಮಾಡಿತ್ತು. ಉದ್ದೇಶಿತ 3 ಜಿಲ್ಲೆಗಳಲ್ಲಿ ಭೂಮಿಯ ಲಭ್ಯತೆ ಮತ್ತು ಅದಕ್ಕಿರುವ ಅಡತಡೆಗಳು ಮತ್ತಿತರ ವಿಷಯಗಳ ಕುರಿತು ಅಧ್ಯಯನ ನಡೆಸಿ ಕಾರ್ಯಸಾಧ್ಯತಾ ವರದಿ ನೀಡುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ಜತೆಗೆ ಈ ಪ್ರಸ್ತಾವನೆಯ ಸಾಧಕ-ಬಾಧಕಗಳ ಬಗ್ಗೆಯೂ ಚರ್ಚಿಸಿ ಉನ್ನತ ಮಟ್ಟದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ವಿಕಾಸಸೌಧದಲ್ಲಿ ಬುಧವಾರ ಸಚಿವರಾದ ಕೆ.ಜೆ. ಜಾರ್ಜ್‌ ಮತ್ತು ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಜಾಗ ತೀರ್ಮಾನಿಸಿ: ಸಚಿವ
ರಾಜ್ಯಕ್ಕೆ ಈ ಅಣುಸ್ಥಾವರದ ಆವಶ್ಯಕತೆ ಎಷ್ಟಿದೆ? ಮೂರು ಕಡೆ ಜಾಗ ಗುರುತಿಸಿ, ಘಟಕಗಳ ನಿರ್ಮಾಣಕ್ಕೆ ಪ್ರಸ್ತಾವನೆ ಬಂದಿದೆ. ಮೂರೂ ಕಡೆಯೂ ಸ್ಥಾಪಿಸುವುದಾ ಅಥವಾ ಒಂದೇ ಕಡೆ ಸ್ಥಾಪನೆಗೆ ಅವಕಾಶ ನೀಡಬೇಕಾ? ಮಾಡುವುದಾದರೆ ಎಷ್ಟು ಸಾಮರ್ಥ್ಯ ಸೂಕ್ತ? ಇದರಿಂದಾಗುವ ಅನುಕೂಲ-ಅನಾನುಕೂಲಗಳು ಏನು ಎಂಬ ಅಂಶಗಳ ಬಗ್ಗೆ ಸರಕಾರ ಮಟ್ಟದಲ್ಲಿ ಚಿಂತನೆ ಮಾಡಿ ಒಂದು ಸೂಕ್ತ ತೀರ್ಮಾನಕ್ಕೆ ಬರಲು ಸಚಿವರು ಮತ್ತು ಉನ್ನತ ಅಧಿಕಾರಿಗಳು ಸಭೆಯಲ್ಲಿ ಅಭಿಪ್ರಾಯಪಟ್ಟರು ಎಂದು ಇಂಧನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಸಭೆಯಲ್ಲಿ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ಕುಮಾರ್‌ ಪಾಂಡೆ, ಎನ್‌ಟಿಪಿಸಿ ಅಧಿಕಾರಿಗಳು, ಮೂರೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಉಪಸ್ಥಿತರಿದ್ದರು.

Advertisement

ದಶಕದ ಹಿಂದೆ ಬಂದಿದ್ದ ಪ್ರಸ್ತಾವನೆ
ದಶಕದ ಹಿಂದೆ ಅಂದರೆ 2015ರಲ್ಲೂ ಇಂಥದ್ದೊಂದು ಪ್ರಸ್ತಾವನೆಗೆ ಮುನ್ನೆಲೆಗೆ ಬಂದಿತ್ತು. ಆಗ ಇದೇ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಒಂದು ವೇಳೆ ಕೇಂದ್ರ ಸರಕಾರ ರಾಜ್ಯಕ್ಕೆ ಮತ್ತೂಂದು ಅಣು ವಿದ್ಯುತ್‌ ಸ್ಥಾವರ ನೀಡುವುದಾದರೆ ಸ್ವಾಗತ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಅನಂತರದಲ್ಲಿ ಮುನ್ನೆಲೆಗೆ ಬರಲೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next