Advertisement
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಡಿ.ರಂದೀಪ್ ಅಧ್ಯಕ್ಷತೆಯಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣ್ ಸಭೆಯಲ್ಲಿ ಮಾತನಾಡಿದ ಅವರು, ಸ್ವಚ್ಛತಾ ನಗರಿಯ ಸರ್ವೇಕ್ಷಣೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮುಖ್ಯವಾಗಿದ್ದು, ಹೀಗಾಗಿ ಜನರ ಅಭಿಪ್ರಾಯವನ್ನು ಹೆಚ್ಚಿಸುವ ಅಗತ್ಯವಿದೆ.
Related Articles
Advertisement
ದಾಖಲೆ ಸಂಗ್ರಹಕ್ಕೆ ಮೆಚ್ಚುಗೆ: ಸ್ವಚ್ಛ ಸರ್ವೇಕ್ಷಣ್ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೇ ನಗರಕ್ಕಾಗಮಿಸಿದ್ದು, ಸಮೀಕ್ಷೆ ಆರಂಭಿಸಿದ್ದಾರೆ. ಆದರೆ, ನಗರಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಸಮೀಕ್ಷೆಗೆ ಸಂಬಂಧಿಸಿದಂತೆ ಈಗಾಗಲೇ ಸಂಗ್ರಹಿಸಲಾಗಿರುವ ದಾಖಲೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ದಾಖಲೆ ಸಂಗ್ರಹ ಹಾಗೂ ಸ್ಥಳ ಪರಿಶೀಲನೆಯಲ್ಲಿ ಶೇ.100 ಅಂಕ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಸಾರ್ವಜನಿಕರ ಅಭಿಪ್ರಾಯ ಸಂಗ್ರಹದ ಬಗ್ಗೆ ಹೆಚ್ಚಿನ ನಿಗಾವಹಿಸಬೇಕಾದ ಅಗತ್ಯವಿದ್ದು, ಇದರಿಂದ 800 ಅಂಕಗಳು ಬರಬೇಕಿದೆ ಎಂದರು.
10 ಲಕ್ಷ ವೀಕ್ಷಣೆ: ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರು, ಸ್ವಚ್ಛ ನಗರಿಗೆ ಸಂಬಂಧಿಸಿದಂತೆ ನೀಡಿರುವ ಒಂದು ನಿಮಿಷದ ವೀಡಿಯೊ ಕ್ಲಿಪ್ಪಿಂಗ್ ಅನ್ನು 10 ಲಕ್ಷ ಜನರು ಇಷ್ಟಪಟ್ಟಿದ್ದಾರೆ. ಇದರ ಬಗ್ಗೆಯೂ ಸ್ವಚ್ಛ ಸರ್ವೇಕ್ಷಣೆ ಸಂದರ್ಭದಲ್ಲಿ ಮಾಹಿತಿ ನೀಡಲಿದ್ದು, ಇದರಿಂದಲೂ ಸ್ವಚ್ಛ ಸಮೀಕ್ಷೆಗೆ ಅನುಕೂಲವಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಜಾಗೃತಿ ವಹಿಸಬೇಕಿದೆ: ಜಿಲ್ಲಾಧಿಕಾರಿ ಡಿ.ರಂದೀಪ್ ಮಾತನಾಡಿ, ಸ್ವಚ್ಛತಾ ಸಮೀಕ್ಷೆಗೆ ಸಂಬಂಧಿಸಿದಂತೆ ಆ್ಯಪ್ ಬಳಕೆ ಹಾಗೂ ಪ್ರಚಾರ ಕಾರ್ಯದಲ್ಲಿ ನಾವು ಈಗಾಗಲೇ ಯಶಸ್ವಿಯಾಗಿದ್ದೇವೆ. ಆದರೂ ಸಮೀಕ್ಷೆಗೆ ಅಗತ್ಯವಿರುವ ಅಂಕ ಕಡಿಮೆಯಾಗದಂತೆ ಎಚ್ಚರವಹಿಸಬೇಕಿದ್ದು, ಜನರ ಅಭಿಪ್ರಾಯ ಸಂಗ್ರಹದಿಂದ 800 ಅಂಕಗಳು ಬರಬೇಕಿದೆ.
ಹೀಗಾಗಿ 1969 ಟೋಲ್ ಫ್ರೀ ಸಂಖ್ಯೆಯ ಬದಲಿಗೆ ಸಾರ್ವಜನಿಕರು ವೆಬ್‌ಸೈಟ್ ಬಳಸಿಕೊಂಡು ಸ್ವಚ್ಛತಾ ಸಮೀಕ್ಷೆಗೆ ಅಗತ್ಯವಿರುವ ಅಂಕಗಳಿಕೆಯಲ್ಲಿ ಪ್ರಗತಿ ಸಾಧಿಸಬೇಕಿದೆ ಎಂದರು. ಇದಕ್ಕೂ ಮುನ್ನ ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಪ್ರಮುಖರು ಸ್ವಚ್ಛತಾ ಸಮೀಕ್ಷೆಯಲ್ಲಿ ಹೆಚ್ಚು ಅಂಕಗಳಿಕೆಗಾಗಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ, ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಸಹಾಯಕ ನಿರ್ದೇಶಕಿ ಡಾ.ಟಿ.ಸಿ.ಪೂರ್ಣಿಮಾ, ಜಿಎಸ್‌ಎಸ್ ಫೌಂಡೇಷನ್‌ನ ಶ್ರೀಹರಿ, ವಿಜಯ ವಿಠಲ ಶಿಕ್ಷಣ ಸಂಸ್ಥೆಯ ಆರ್. ವಾಸುದೇವ ಭಟ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಇನ್ನಿತರರು ಹಾಜರಿದ್ದರು.