Advertisement
ಹೌದು, ಇದು ಪಟ್ಟಣದ ಶೆಟ್ಟಿಹಳ್ಳಿ ಕೆರೆಯ ದಯನೀಯ ಸ್ಥಿತಿ. ತನ್ನ ವ್ಯಾಪ್ತಿಯನ್ನು ದಿನೇ ದಿನೇ ಕಡಿಮೆ ಮಾಡಿಕೊಳ್ಳುತ್ತಾ, ನೀರಿನ ನೆಲೆಯೇ ಕಾಣದಂತೆ ತನ್ನೊಡಲಲ್ಲಿ ಜೊಂಡು ಬೆಳೆಸಿಕೊಂಡು, ನಗರದ ಕೊಳಚೆ ನೀರನ್ನೆಲ್ಲಾ ತನ್ನ ಗರ್ಭದಲ್ಲಿರಿಸಿಕೊಂಡು ನಲುಗುತ್ತಿರುವ ಈ ಕೆರೆ ಇಂದು “ಕೆರೆಯ ಥರ, ಆದರೆ ಕೆರೆ ಅಲ್ಲ’ ಎನ್ನುವ ಸ್ಥಿತಿಯಲ್ಲಿದೆ.ಅನೈತಿಕ ಚಟುವಟಿಕೆಗಳ ತಾಣ: ಕೆರೆಯ ಆಸುಪಾಸಿನ ನಿವಾಸಿಗಳ ದುರ್ದೈವವೋ ಏನೋ, ಕೆರೆಯ ಪಕ್ಕದಲ್ಲಿ ವಾಸವಾಗಿರುವ ನಿವಾಸಿಗಳು ಇಂದು ದಿನನಿತ್ಯ ಚರಂಡಿ ನೀರಿನ ದುರ್ವಾಸನೆಯಿಂದಾಗಿ ನೆಮ್ಮದಿಯ ಜೀವನದಿಂದ
ವಂಚಿತರಾಗಿದ್ದಾರೆ. ಕೆರೆಯ ಸುತ್ತಲೂ ಇರುವ ಪೊದೆ ಕಳ್ಳಕಾಕರ, ಅನೈತಿಕ ಚಟುವಟಿಕೆಗಳಿಗೆ ಪ್ರಶಸ್ತ ತಾಣವಾಗಿ, ವಿಷಜಂತುಗಳ ವಾಸಸ್ಥಾನವಾಗಿ ಮಾರ್ಪಾಡಾಗಿರುವುದರಿಂದ ಇಲ್ಲಿನ ನಿವಾಸಿಗಳಿಗೆ ನೆಮ್ಮದಿಯ ಜೀವನ ಮರೀಚಿಕೆಯಾಗಿದೆ.
ನಗರಸಭೆಯೇ ಕಾರಣ: ಎಲ್ಲಾ ಕೆರೆಗಳಂತೆಯೇ ಮಳೆಗಾಲದಲ್ಲಿ ನೀರು ತುಂಬಿಸಿಕೊಂಡು ಬೇಸಿಗೆಯಲ್ಲಿ ಜನ ಜಾನುವಾರುಗಳಿಗೆ ನೀರುಣಿಸುತ್ತಿದ್ದ ಶೆಟ್ಟಿಹಳ್ಳಿ ಕೆರೆಗೆ ಈ ಸ್ಥಿತಿ ಬರೋಕೆ ಕಾರಣ ನಗರಸಭೆ. ಪಟ್ಟಣದ ಕೊಳಚೆ ನೀರನ್ನೆಲ್ಲಾ ಶೆಟ್ಟಿಹಳ್ಳಿ ಕೆರೆಗೆ ಹರಿಸಿದ ಪರಿಣಾಮವೇ ಇಂದು ಕೆರೆ ಗಬ್ಬೆದ್ದು ನಾರುತ್ತಾ, ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ. ಚರಂಡಿ ನೀರು ಕೆರೆಗೆ : ಒಳಚರಂಡಿ ನೀರು ಅಥವಾ ನಗರದ ಕೊಳಚೆ ನೀರನ್ನು ಶುದ್ಧೀಕರಿಸಿ ನಂತರ ಆ ನೀರನ್ನು ಕೆರೆಗೆ ಹರಿಸಬೇಕೆಂಬ ಪರಿಸರ ಇಲಾಖೆಯ ನಿಯಮಕ್ಕೆ ಇಲ್ಲಿ ಕಿಂಚಿತ್ತೂ ಬೆಲೆ ಸಿಕ್ಕಿಲ್ಲ. ಚರಂಡಿಯಲ್ಲಿ ಸಾಗಿ ಬಂದ ನೀರು ಸೀದಾ ಶೆಟ್ಟಿಹಳ್ಳಿ ಕೆರೆಯ ಗರ್ಭ ಸೇರಿಕೊಳ್ಳುವಂತೆ ಮಾಡಿ ತನ್ನ ಕೆಲಸ ಮುಗಿಯಿತೆಂದು ನಗರಸಭೆ ಕೈ ತೊಳೆದುಕೊಂಡಿದೆ. ನಗರ ಬೆಳೆದಂತೆಲ್ಲಾ ಈ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗಿ ಇಂದು ಕೆರೆಯ ತುಂಬ ಕೊಳಚೆ, ಕಲುಷಿತ ನೀರು ತುಂಬಿಕೊಂಡು ಕೆರೆಯ ಹತ್ತಿರಕ್ಕೂ ಯಾರೊಬ್ಬರೂ ಸುಳಿಯದಂತಾಗಿದೆ.
Related Articles
Advertisement
ಒತ್ತುವರಿ ಭೂತ: ಸರ್ಕಾರಿ ಭೂಮಿಯನ್ನು ಕಾಡುವ ಒತ್ತುವರಿ ಭೂತ ಶೆಟ್ಟಿಹಳ್ಳಿ ಕೆರೆಯನ್ನೂ ಸಹ ಬಿಟ್ಟಿಲ್ಲ. ಸುಮಾರು 60 ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದ ಕೆರೆ ಇಂದು ಬರೋಬ್ಬರಿ 15 ಎಕರೆ ಪ್ರದೇಶ ಕಳೆದುಕೊಂಡಿದೆ. ಸರ್ಕಾರಿ ಇಲಾಖೆಗಳೂ ಸೇರಿದಂತೆ ಇಂದಿರಾ ಕಾಟೇಜ್‌ನ ಕೆಲವರು ಶೆಟ್ಟಿಹಳ್ಳಿ ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ.
ಪುನಶ್ಚೇತನಕ್ಕೆ ಆಗ್ರಹ: ಪಟ್ಟಣದ ಹೊರವಲಯದ ಕುಡಿನೀರು ಕಟ್ಟೆಯನ್ನು ರಾಮನಗರ ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪುನಶ್ಚೇತನಗೊಳಿಸುತ್ತಿರುವಂತೆ ಶೆಟ್ಟಿಹಳ್ಳಿ ಕೆರೆಗೂ ಕಾಯಕಲ್ಪ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಒತ್ತುವರಿ ಆಗಿರುವ ಕೆರೆಯ ಜಾಗವನ್ನು ವಶಕ್ಕೆ ಪಡೆದು ಕೆರೆಯ ಸುತ್ತಲೂ ಉದ್ಯಾನ ನಿರ್ಮಿಸಿದರೆ ನಗರದ ಜನತೆಗೆ ಅನುಕೂಲವಾಗಲಿದೆ. ಜತೆಗೆ ಸ್ವತ್ಛತೆಯಿಂದಿರಲು ಸಾಧ್ಯವಾಗುತ್ತದೆ. ಈ ಸಂಬಂಧ ಅಧಿಕಾರಿಗಳು ಗಮನ ಹರಿಸಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.
ನಗರಸಭೆ, ಪಟ್ಟಣದ ಕೊಳಚೆ ನೀರ ನ್ನೆಲ್ಲಾ ಶೆಟ್ಟಿಹಳ್ಳಿ ಕೆರೆಗೆ ಹರಿಸುತ್ತಿದೆ, ನೀರು ಸಂಸ್ಕರಣೆ ಮಾಡದೆ ಹಾಗೆಯೇ ಬಿಡುತ್ತಿ ರುವುದರಿಂದ ದುರ್ವಾಸನೆ ಬೀರುತ್ತಿದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದ್ದು, ಕೆರೆಯನ್ನು ಪುನಶ್ಚೇತನಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.ನಾಗರಾಜು, ಮಹಾಲಕ್ಷ್ಮೀ ಬಡಾವಣೆ ನಿವಾಸಿ, ಚನ್ನಪಟ್ಟಣ ಶೆಟ್ಟಿಹಳ್ಳಿ ಕೆರೆಗೆ ಪಟ್ಟಣದ ತ್ಯಾಜ್ಯ ನೀರು ಹರಿಸುತ್ತಿಲ್ಲ, ಪಕ್ಕದ ಬಡಾವಣೆಯ ಚರಂಡಿ ನೀರು ಸ್ವಾಭಾವಿಕವಾಗಿ ಕೆರೆಗೆ ಹರಿಯುತ್ತಿದೆ. ಒಳಚರಂಡಿ ಕಾಮಗಾರಿ ಪೂರ್ಣವಾದರೆ ಅದು ಸಂಪೂರ್ಣ ನಿಯಂತ್ರಣವಾಗಲಿದೆ. ಒಳಚರಂಡಿ ಕಾಮಗಾರಿ ವಿಳಂಬವಾಗಿರುವುದರಿಂದ ಸಮಸ್ಯೆಯಾಗಿದೆ. ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು.
ಡಾ.ಆನಂದ್, ಪೌರಾಯುಕ್ತ, ನಗರಸಭೆ