Advertisement

UGD: ಈ ಸಾರಿಯಾದರೂ ಮುಗಿಸಿಬಿಡಿ!; ಹೊಸ ಆಡಳಿತ ಹಳೆ ಸವಾಲು

03:07 PM Sep 24, 2024 | Team Udayavani |

ಕುಂದಾಪುರ: ಕೊನೆಗೂ ಕಾರ್ಕಳ ಮತ್ತು ಕುಂದಾಪುರ ಪುರಸಭೆಗೆ ಹೊಸ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕಾತಿ ಆಗಿದೆ. ಮೀಸಲಾತಿ ನಿಗದಿ ವಿಳಂಬದಿಂದ ಚುನಾಯಿತ ಆಡಳಿತ ಮಂಡಳಿ ಇಲ್ಲದೆ  ತುಕ್ಕು ಹಿಡಿದಂತಿದ್ದ ಆಡಳಿತ ವ್ಯವಸ್ಥೆಗೆ ಮರು ಚಾಲನೆ ಸಿಕ್ಕಿದೆ. ಆದರೆ, ಅದರ ನಡುವೆ ವಿಧಾನ ಪರಿಷತ್‌ ಚುನಾವಣೆಯ ನೀತಿ ಸಂಹಿತೆ ಮತ್ತೆ ಒಂದುವರೆ ತಿಂಗಳು ಕೈಕಟ್ಟು ಬಾಯಿ ಮುಚ್ಚು ಎಂಬ ಪರಿಸ್ಥಿತಿಯನ್ನು ನಿರ್ಮಿಸಿದೆ. ಹೀಗಾಗಿ ಹೊಸ ಆಡಳಿತಕ್ಕೆ ಉಳಿಯುವುದು ಕೇವಲ 13 ತಿಂಗಳ ಅಧಿಕಾರಾವಧಿ ಮಾತ್ರ. ಈ ಅವಧಿಯಲ್ಲಾದರೂ ನಿಜವಾದ ಪ್ರಯತ್ನದ ಮೂಲಕ ಪುರಸಭೆ ಆಡಳಿತ ಜನರಿಗೆ ಉಪಕಾರ ಮಾಡಲಿ ಎಂಬುದು ನಿರೀಕ್ಷೆ. ಈ ನಿಟ್ಟಿನಲ್ಲಿ ಉದಯವಾಣಿ ಸುದಿನ ಪುರಸಭೆ ವ್ಯಾಪ್ತಿಯಲ್ಲಿ ತುರ್ತಾಗಿ ಆಗಲೇಬೇಕಾಗಿರುವ ಕೆಲವು ಪ್ರಮುಖ ಕೆಲಸಗಳ ಬಗ್ಗೆ ಆಡಳಿತದ ಗಮನ ಸೆಳೆಯಲು ಸರಣಿಯನ್ನು ಆರಂಭಿಸಿದೆ: ಅದುವೇ ಹೊಸ ಆಡಳಿತ ಹಳೆ ಸವಾಲು.

Advertisement

2 ಸಾವಿರಕ್ಕಿಂತ ಹೆಚ್ಚು ವರ್ತಕರ ಲೈಸೆನ್ಸ್‌ ಇರುವ, 37 ಸಾವಿರಕ್ಕಿಂತ ಹೆಚ್ಚು  ಜನ ವಾಸಿಸುತ್ತಿರುವ ಕುಂದಾಪುರ ನಗರದಲ್ಲಿ  ಒಳಚರಂಡಿ  ವ್ಯವಸ್ಥೆಯೇ ಇಲ್ಲ ಎನ್ನುವುದು ಖಂಡಿತವಾಗಿಯೂ ಅಪಮಾನಕಾರಿ ಸಂಗತಿ. ಆಡಳಿತ ವ್ಯವಸ್ಥೆ ಕಳೆದ ಹಲವಾರು ವರ್ಷಗಳಿಂದ ಯುಜಿಡಿ ವ್ಯವಸ್ಥೆ ತರುವುದಾಗಿ ಹೇಳುತ್ತಲೇ ಇದೆ. ಪೈಪ್‌ಲೈನ್‌ ಕೂಡಾ ಆಗಿದೆ. ಆದರೆ, ಎಸ್‌ಟಿಪಿ ಮತ್ತು ವೆಟ್‌ವೆಲ್‌ಗಳ ನಿರ್ಮಾಣ ಆಗಿಲ್ಲ. ಇದೀಗ ಅದಕ್ಕೂ ಜಾಗ ನಿರ್ಣಯ ಆಗಿದೆ. ಹೊಸ ಆಡಳಿತ ಮಂಡಳಿ ಮನಸು ಮಾಡಿದರೆ ಮುಂದಿನ ವರ್ಷವೇ ಕುಂದಾಪುರಕ್ಕೆ ದೊಡ್ಡ ಕೊಡುಗೆಯನ್ನು ನೀಡಬಹುದು. ಒಳಚರಂಡಿ ಇಲ್ಲದೆ ಅಲ್ಲಲ್ಲಿ ಕೊಳಚೆ ಗುಂಡಿಗಳು ಸೃಷ್ಟಿಯಾಗುವ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ಇದೆ.

ಜಾಗ ರೆಡಿ ಇದೆ ಎಂದಿತ್ತು ಪುರಸಭೆ
ಒಳಚರಂಡಿ ಮಂಡಳಿಗೆ 2013ರ ಅ.10ರಂದು ಪುರಸಭೆ ಅಧ್ಯಕ್ಷೆ ಕಲಾವತಿ ಹಾಗೂ ಮುಖ್ಯಾಧಿಕಾರಿ ಸದಾನಂದ ಅವರು ಒಳಚರಂಡಿ ಕಾಮಗಾರಿ, ವೆಟ್‌ವೆಲ್‌ ರಚನೆ, ಎಸ್‌ಟಿಪಿ ರಚನೆಗೆ ಬೇಕಾದ ಜಾಗವನ್ನು ನೀಡುವುದಾಗಿ ಲಿಖೀತವಾಗಿ ನೀಡಿದ್ದರು. 2016ರ ಜೂ.14ರಂದು ಅಧ್ಯಕ್ಷೆ ವಸಂತಿ ಸಾರಂಗ ಅವರು ಉಸ್ತುವಾರಿ ಸಚಿವರಾಗಿದ್ದ ವಿನಯ ಕುಮಾರ್‌ ಸೊರಕೆ ಅವರಿಗೆ ಭೂಸ್ವಾಧೀನಕ್ಕೆ ಅವಶ್ಯವಾದ 7.84 ಕೋ. ರೂ.ಗಳನ್ನು ಮಂಜೂರು ಮಾಡಲು ಮನವಿ ಮಾಡಿದ್ದರು. 2016ರ ಆ.24ರಂದು ನಡೆದ ಸಾಮಾನ್ಯ ಸಭೆಯಲ್ಲಿ 7.25 ಎಕರೆ ಭೂಸ್ವಾಧೀನಕ್ಕೆ 17 ಕೋ.ರೂ. ಅಂದಾಜುಪಟ್ಟಿಗೆ ಒಪ್ಪಿಗೆ ಕೂಡಾ ನೀಡಲಾಗಿತ್ತು. 2016ರಲ್ಲಿ ಸರಕಾರಿ ಭೂಮಿಯಲ್ಲಿ ಹೊಳೆಪರಂಬೋಕನ್ನು ವಿರಹಿತಗೊಳಿಸುವಂತೆ ಕಡತ ಕ‌ಳುಹಿಸಲಾಗಿತ್ತು.

ಯೋಜನೆಯ ಆರಂಭದಲ್ಲಿ 7.25 ಎಕರೆ ಅವಶ್ಯವಿದೆ ಎಂದಿದ್ದರೂ ಅನಂತರ ಬದಲಾದ ನಕ್ಷೆ, ಯೋಜನೆ, ಆಕ್ಷೇಪಗಳಿಂದಾಗಿ ವಿಸ್ತಾರವೂ ಕಡಿಮೆಯಾಯಿತು. ಟಿ.ಟಿ. ರಸ್ತೆ ಹಾಗೂ ರಾಯಪ್ಪನಮಠದಲ್ಲಿ ನಿರ್ಮಾಣವಾಗಬೇಕಿದ್ದ ವೆಟ್‌ವೆಲ್‌ಗ‌ಳ ಪ್ರಸ್ತಾವ ಕೈ ಬಿಡಲಾಯಿತು. ಉಳಿದ ಐದು ವೆಟ್‌ವೆಲ್‌ಗ‌ಳಿಗೆ ಜಾಗ ಗುರುತಿಸಲಾಯಿತು.

ಎಸ್‌ಟಿಪಿ, ವೆಟ್‌ವೆಲ್‌ಗೆ ನಿಗದಿಯಾದ ಜಾಗ

  • ಮದ್ದುಗುಡ್ಡೆಯಲ್ಲಿ ಸರಕಾರಿ ಪರಂಬೋಕು ಜಾಗದಲ್ಲಿ 10 ಸೆಂಟ್ಸ್‌
  • ವಿಠಲವಾಡಿಯಲ್ಲಿ ಶ್ರೀಪಾದ ಉಪಾಧ್ಯ ಅವರಿಂದ ಖರೀದಿ ಮಾಡಿದ 10 ಸೆಂಟ್ಸ್‌ ಜಾಗದಲ್ಲಿ
  • ಸಂಗಮ್‌ ಬಳಿ ಹೊಳೆಬದಿಯಲ್ಲಿ 25 ಸೆಂಟ್ಸ್‌ ಸರಕಾರಿ ಪರಂಬೋಕು ಜಾಗದಲ್ಲಿ
  • ಕಡ್ಗಿಮನೆಯಲ್ಲಿ ಕಲ್ಪನಾ ನಾಗರಾಜ್‌ ಅವರಿಂದ ಖರೀದಿಸಿದ 31 ಸೆಂಟ್ಸ್‌ ಜಾಗ
  • ಕೆಎಸ್‌ಆರ್‌ಟಿಸಿಯ ಹಿಂದೆ ಹುಂಚಾರಬೆಟ್ಟಿನ ಈಸ್ಟ್‌ ವೆಸ್ಟ್‌ ಕ್ಲಬ್‌ಗ ಸೇರುವಲ್ಲಿ 30 ಸೆಂಟ್ಸ್‌ ಜಾಗದಲ್ಲಿ ವೆಟ್‌ವೆಲ್‌ ಮತ್ತು ಹುಂಚಾರಬೆಟ್ಟಿನ ಕೊನೆಗೆ 90 ಸೆಂಟ್ಸ್‌ ಜಾಗದಲ್ಲಿ ಎಸ್‌ಟಿಪಿ ರಚನೆಯಾಗಲಿದೆ. (ಇಲ್ಲಿ ದಾರಿಗಾಗಿ 32 ಹಾಗೂ 90 ಸೆಂಟ್ಸ್‌ ಜಾಗ ಅವಶ್ಯವಿದೆ.)
  • ವಡೇರಹೋಬಳಿ ಗ್ರಾಮದಲ್ಲಿ 31 ಸೆಂಟ್ಸ್‌ ಜಾಗವನ್ನು ಈ ವರ್ಷ ಜು.3ರಂದು ಉಡುಪಿ ಡಿಸಿ ಮಂಜೂರು ಮಾಡಿದ್ದಾರೆ.
Advertisement

ಮುಂದೆ ಮಾಡಬೇಕಾದ್ದೇನು?

  • 42 ಕೋ.ರೂ. ಯೋಜನೆ ಎಂದು ಆರಂಭವಾಗಿ ಈಗ 48 ಕೋ.ರೂ.ಗಳಲ್ಲಿದೆ. 29 ಕೋ.ರೂ. ಕಾಮಗಾರಿ ಆಗಿದೆ. ಇನ್ನೂ 29 ಕೋ.ರೂ. ಕಾಮಗಾರಿ ಬಾಕಿ ಇದೆ. ಹೆಚ್ಚುವರಿ 6 ಕೋ.ರೂ. ಮಂಜೂರಾಗಿದೆ. ಇನ್ನೂ ಅನುದಾನದ ಅಗತ್ಯವಿದೆ.
  • ಈಗ ಹೊಸ ಆಡಳಿತ ಒಳಚರಂಡಿ ಮಂಡಳಿಯನ್ನು ಬೆನ್ನತ್ತಬೇಕು, ಹೊಸ ಗುತ್ತಿಗೆದಾರರನ್ನು ಹಿಡಿಯಬೇಕು, ಹೊಸ ಟೆಂಡರ್‌ ಇತ್ಯಾದಿ ಆಗಬೇಕು.
  • ಪೈಪ್‌ಲೈನ್‌ ಎಂದೋ ಆಗಿದ್ದು ಅದಿನ್ನು ಯಾವ ಸ್ಥಿತಿಯಲ್ಲಿ ಎಂಬುದು ಕಾಮಗಾರಿ ಪೂರ್ಣಗೊಂಡು ತ್ಯಾಜ್ಯ ನೀರು ಹರಿಯಲು ಆರಂಭವಾದ ಮೇಲೆಯೇ ತಿಳಿಯಬೇಕಿದೆ.

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next