Advertisement

Gujjara kere ನೀರು ಶುದ್ಧವಾಗಲೇ ಇಲ್ಲ; ಕೋಟಿ ಖರ್ಚು ಮಾಡಿದರೂ ನಿಂತಿಲ್ಲ ಒಳಚರಂಡಿ ಸಮಸ್ಯೆ

03:06 PM Sep 13, 2024 | Team Udayavani |

ಮಹಾನಗರ: ಪುರಾತನ ಗುಜ್ಜರಕೆರೆ ಅಭಿವೃದ್ಧಿಗೆ ಈವರೆಗೆ ಸುಮಾರು 10 ಕೋಟಿ ರೂ. ವಿನಿಯೋಗಿಸಿದರೂ ಕೆರೆ ನೀರು ಇನ್ನೂ ಶುದ್ಧಗೊಂಡಿಲ್ಲ. ಹಲವು ವರ್ಷಗಳಿಂದ ಕೆರೆ ನೀರಿಗೆ ಒಳಚರಂಡಿ ನೀರು ಸೇರುತ್ತಿದ್ದು, ಇದರ ಮೂಲ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಎನ್‌ಐಟಿಕೆ ಎಂಜಿನಿಯರ್‌ಗಳ ಮೊರೆ ಹೋಗಲು ಪಾಲಿಕೆ ನಿರ್ಧರಿಸಿದೆ.

Advertisement

ಮಹಾನಗರ ಪಾಲಿಕೆ, ಕುಡ್ಸೆಂಪ್‌ ಸಹಿತ ವಿವಿಧ ಇಲಾಖೆ ಅಧಿಕಾರಿಗಳು ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಈಗಾಗಲೇ ಪರಿಶೀಲನೆ ನಡೆಸಿದ್ದಾರೆ. ಆದರೂ ಕೆರೆ ಸೇರುತ್ತಿರುವ ಒಳಚರಂಡಿ ನೀರು ತಡೆಯಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಎನ್‌ಐಟಿಕೆ ಅಧಿಕಾರಿಗಳ ತಂಡ ಗುಜ್ಜರಕೆರೆಗೆ ಬಂದು ಸಮೀಕ್ಷೆ ನಡೆಸಲಿದೆ.

ಕೆಲವು ವರ್ಷಗಳ ಹಿಂದೆ ಗುಜ್ಜಕರೆ ಯನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊ ಳಿಸಲಾಗಿತ್ತು. ಬಳಿಕ ಸುತ್ತಮುತ್ತಲೂ ಪಾರ್ಕ್‌ ರೀತಿ ಸುಂದರಗೊಳಿಸಿ ಜನಾಕರ್ಷಣೆ ಗೊಳಿಸಲಾಗಿತ್ತು. ಆ ವೇಳೆಗಾಗಲೇ ಕೆರೆಗೆ ಡ್ರೈನೇಜ್‌ ನೀರು ಸೇರುತ್ತಿತ್ತು. ಕೆರೆ ಅಭಿವೃದ್ಧಿಯ ವೇಳೆ ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರು ಅನೇಕ ಬಾರಿ ಮನವಿ ಮಾಡಿದರೂ ಸಮಸ್ಯೆ ಇತ್ಯರ್ಥಗೊಂಡಿಲ್ಲ. ಇದರಿಂದಾಗಿ ಗುಜ್ಜರಕೆರೆ ನೀರು ಸದ್ಯ ಸಂಪೂರ್ಣ ಕಲುಪಿತಗೊಂಡಿದೆ.

ನೀರು ಪರೀಕ್ಷೆ ವೇಳೆ ಅಪಾಯಕಾರಿ ಅಂಶ ಪತ್ತೆ
ಕೆಲವು ತಿಂಗಳ ಹಿಂದೆ ಎಮ್ಮೆಕೆರೆಯ ಪಶ್ಚಿಮ ಭಾಗದಲ್ಲಿ ತೆಗದು ಪರೀಕ್ಷೆಗೆ ಒಳಪಡಿಸಲಾದ ನೀರಿನ ಪ್ರತಿ 100 ಮಿಲಿ ಲೀಟರ್‌ನಲ್ಲಿ ಟೋಟಲ್‌ ಕಾಲಿಫಾರ್ಮ್ ಸಂಖ್ಯೆ 1,600ರಷ್ಟು ಕಂಡು ಬಂದಿತ್ತು. ಫೀಕಲ್‌ ಕಾಲಿಫಾರ್ಮ್ ಸಂಖ್ಯೆ 500ರಷ್ಟಿದ್ದು, 100 ಎಂ.ಎಲ್‌.ನೀರಿನಲ್ಲಿ ಈ ಪ್ರಮಾಣದ ಅಂಶ ಕಂಡು ಬಂದಿರುವುದು ಅಪಾಯಕಾರಿಯಾಗಿದೆ. ಈಶಾನ್ಯ ದಿಕ್ಕಿನಿಂದ ತೆಗೆದು ಪರೀಕ್ಷೆಗೆ ಒಳಪಡಿಸಲಾದ ನೀರಿನ ಪ್ರತಿ 100 ಎಂ.ಎಲ್‌ನಲ್ಲಿಯೂ ಟೋಟಲ್‌ ಕಾಲಿಫಾರ್ಮ್ ಸಂಖ್ಯೆ 1600ರಷ್ಟಿದೆ, ಫೀಕಲ್‌ ಕಾಲಿಫಾರ್ಮ್ ಸಂಖ್ಯೆ 300ರಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದ್ದು, ನೀರನ್ನು ಕುಡಿಯುವುದು ಅಪಾಯಕಾರಿ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಸ್ಥಳೀಯರ ಮಾಹಿತಿಯ ಪ್ರಕಾರ ಕೆರೆಯ ಮೂರು ಕಡೆಗಳಲ್ಲಿ ಕೊಳಚೆ ನೀರು ಕೆರೆ ಸೇರುತ್ತಿದೆ.

ಗುಜ್ಜರಕೆರೆಗೆ ಪ್ರದೇಶದ ಬಾವಿಗಳ ನೀರಿನಲ್ಲೂ ಇದೇ ಪ್ರಮಾಣದಲ್ಲಿ ಬ್ಯಾಕ್ಟೀರಿಯಾ ಅಂಶಗಳಿರುವ ಸಾಧ್ಯತೆಯಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರಮಾಣದಲ್ಲಿ ಬ್ಯಾಕ್ಟೀರಿಯಾ ಇದ್ದರೆ ಕುದಿಸಿ ಆರಿಸಿ ಕುಡಿಯಲೂ ಯೋಗ್ಯವಲ್ಲ. ಕೆರೆಗೆ ನಿರಂತರವಾಗಿ ಒಳಚರಂಡಿ ನೀರು ಸೇರ್ಪಡೆಯಾಗುತ್ತಿದೆ. ಕೆರೆಯ ಒಂದು ಭಾಗದಲ್ಲಿ ಇದು ಸ್ಪಷ್ಟವಾಗಿ ಕಂಡು ಬರುತ್ತದೆ. ಕೆರೆಯಲ್ಲಿ ಅಮ್ಲಜನಕದ ಪ್ರಮಾಣವೂ ಕಡಿಮೆ ಇದೆ.

Advertisement

ಎನ್‌ಐಟಿಕೆ ಅಧಿಕಾರಿಗಳಿಂದ ಪರಿಶೀಲನೆ
ಗುಜ್ಜರಕೆರೆಗೆ ಒಳಚರಂಡಿ ನೀರು ಸೇರುತ್ತಿದ್ದು, ಇದರಿಂದಾಗಿ ಕೆರೆ ನೀರು ಕಲುಷಿತಗೊಂಡಿರುವ ಬಗ್ಗೆ ಸ್ಥಳೀಯರು ದೂರು ನೀಡಿದ್ದಾರೆ. ಇದರಂತೆ ಪಾಲಿಕೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಎನ್‌ಐಟಿಕೆ ಎಂಜಿನಿಯರ್‌ಗಳ ಪ್ರತ್ಯೇಕ ಸರ್ವೇ ನಡೆಸಲು ನಿರ್ಧರಿಸಲಾಗಿದೆ.
-ಆನಂದ್‌ ಸಿ.ಎಲ್‌. ಪಾಲಿಕೆ ಆಯುಕ್ತ

ಹಲವು ಬಾರಿ ಮನವಿ
ಗುಜ್ಜರಕೆರೆಗೆ ಡ್ರೈನೇಜ್‌ ನೀರು ಸೇರುವುದರಿಂದ, ಈ ಸಮಸ್ಯೆ ಉಂಟಾಗಿದೆ. ಸಮಸ್ಯೆ ಬಗೆಹರಿಸುವಂತೆ ಅನೇಕ ಬಾರಿ ಪಾಲಿಕೆಗೆ, ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಕೆ ಮಾಡಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ. ಕೆಲವು ತಿಂಗಳ ಹಿಂದೆ ಕೆರೆಯ ನೀರನ್ನು ಪರೀಕ್ಷೆಗೆ ಒಳಪಡಿಸಿದ್ದೇವೆ. ಗುಜ್ಜರಕೆರೆಯ ನೀರು ಕಲುಷಿತವಾಗಿದೆ ಎಂದು ಸಾಬೀತಾಗಿದೆ. ಕೆರೆಗೆ ಒಳಚರಂಡಿ ನೀರು ಸೇರುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ.
-ನೇಮು ಕೊಟ್ಟಾರಿ, ಕಾರ್ಯದರ್ಶಿ, ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ

3.43 ಎಕ್ರೆ ಕೆರೆ ವಿಸ್ತಿರ್ಣ
ಗುಜ್ಜರಕೆರೆ ಸುಮಾರು 3.43 ಎಕ್ರೆ ವಿಸ್ತಿರ್ಣದಲ್ಲಿ ವ್ಯಾಪಿಸಿದೆ. ಒಂದು ಕಾಲದಲ್ಲಿ ಕೃಷಿಯನ್ನು ಅವಲಂಬಿಸಿದ್ದ ಸ್ಥಳೀಯರಿಗೆ ಗುಜ್ಜರಕೆರೆಯೇ ಜಲಮೂಲವಾಗಿತ್ತು. ಮುಂದೆ ಕೃಷಿ ನಾಶಗೊಂಡು ವಸತಿ ಪ್ರದೇಶವಾದಾಗ ಗುಜ್ಜರಕೆರೆ ತ್ಯಾಜ್ಯ ಸುರಿಯುವ, ಒಳಚರಂಡಿ ನೀರು ಬಿಡುವ ಕೆರೆಯಾಗಿತ್ತು. ಬಳಿಕ ಸ್ಮಾರ್ಟ್‌ ಸಿಟಿಯಲ್ಲಿ ಅಭಿವೃದ್ಧಿಪಡಿಸಿ ಆಕರ್ಷಣೀಯ ತಾಣವಾಗಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next