ನವದೆಹಲಿ: ಭಾರತದಲ್ಲಿನ ಇತ್ತೀಚೆಗೆ ಬಹುತೇಕ ಎಲ್ಲಾ ಕಡೆ ಅರಣ್ಯ ಪ್ರದೇಶ, ಪಟ್ಟಣ, ನಗರ, ಗ್ರಾಮಗಳಲ್ಲಿ ಮನುಷ್ಯ ಮತ್ತು ವನ್ಯಮೃಗಗಳು ಮುಖಾಮುಖಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದಕ್ಕೊಂದು ಹೊಸ ಸೇರ್ಪಡೆ ಎಂಬಂತೆ ಹೆದ್ದಾರಿಯಲ್ಲಿ ಆನೆಯೊಂದು ಒಂದೊಂದಾಗಿ ಲಾರಿಯನ್ನು ತಡೆದು ನಿಲ್ಲಿಸಿ ಕಬ್ಬನ್ನು ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:ಉ.ಕನ್ನಡದಲ್ಲಿ ಯಾವ್ಯಾವ ರೈಲು ನಿಲುಗಡೆ ಆಗಲಿದೆ… ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದೇನು?
ಸಾಮಾಜಿಕ ಜಾಲತಾಣ ಬಳಕೆದಾರರಾದ ಡಾ.ಅಜಯಿತಾ ಎಂಬವರು “ಟೋಲ್ ಟ್ಯಾಕ್ಸ್ ಕಲೆಕ್ಟರ್” ಎಂಬ ತಮಾಷೆಯ ಕ್ಯಾಪ್ಶನ್ ನೀಡಿ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಟ್ವೀಟ್ ಮಾಡಿರುವ ಕಿರು ವಿಡಿಯೋದಲ್ಲಿ, ಆನೆಯೊಂದು ರಸ್ತೆಯ ಮಧ್ಯದಲ್ಲಿಯೇ ಲಾರಿಯನ್ನು ತಡೆದು ನಿಲ್ಲಿಸಿ ಅದರಲ್ಲಿದ್ದ ಸ್ವಲ್ಪ ಕಬ್ಬನ್ನು ಕೆಳಗೆ ಹಾಕಿದ ನಂತರ ಲಾರಿ ಮುಂದಕ್ಕೆ ಹೋಗಲು ಅನುವು ಮಾಡಿಕೊಡುತ್ತಿತ್ತು.
Related Articles
ಹೀಗೆ ಹೆದ್ದಾರಿಯಲ್ಲಿ ಕಬ್ಬನ್ನು ತುಂಬಿಸಿಕೊಂಡು ಬರುತ್ತಿರುವ ಒಂದೊಂದೇ ಲಾರಿಯನ್ನು ತಡೆದು ನಿಲ್ಲಿಸಿ ಕಬ್ಬನ್ನು ತೆಗೆದು ಕೆಳಗೆ ಹಾಕಿಕೊಂಡು ತಿನ್ನುತ್ತಿರುವ ಈ ವಿಡಿಯೋ ಈಗಾಗಲೇ 2 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದಿದ್ದು, 6,000ಕ್ಕೂಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ.
ಸಕ್ಕರೆ ಕಾರ್ಖಾನೆಗೆ ತೆರಳುತ್ತಿರುವ ಕಬ್ಬು ತುಂಬಿರುವ ಲಾರಿಗಳಲ್ಲಿನ ಕಬ್ಬುಗಳಲ್ಲಿನ ಸಕ್ಕರೆಯ ಅಂಶವನ್ನು ಪರಿಶೀಲಿಸಲು ಈ ಆನೆಯನ್ನು ನಿಯೋಜಿಸಲಾಗಿದೆ ಎಂದು ಟ್ವೀಟರ್ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಹೆದ್ದಾರಿ ಪಕ್ಕದಲ್ಲಿರುವ ಎಚ್ಚರಿಕೆಯ ಫಲಕದಲ್ಲಿ, ಎಚ್ಚರಿಕೆ ಇದು ಆನೆ ದಾಟುವ ಹಾದಿ ಎಂದು ಬರೆದಿದ್ದು, ಈ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿರುವುದಾಗಿ ತಿಳಿಸಿದೆ. ಆದರೆ ಈ ವಿಡಿಯೋದ ನಿಖರವಾದ ಸ್ಥಳ ತಿಳಿದುಬಂದಿಲ್ಲ ಎಂದು ವರದಿ ತಿಳಿಸಿದೆ.