ಒಂದು ದಿನ ಕಾಡಿನಲ್ಲಿ ಜಿಂಕೆಯೊಂದು ಹುಲ್ಲು ಮೇಯುತ್ತಾ ಹೊರಟಿತ್ತು. ದಾರಿಯಲ್ಲಿ ಸಿಕ್ಕ ಕಾಡೆಮ್ಮೆಯೊಂದು “ಇನ್ನೂ ಕೊಂಚ ದೂರ ಹೋದರೆ ಅಲ್ಲಿ ಹುಲ್ಲು ಬೇಕಾದಷ್ಟು ಸಿಗುತ್ತದೆ’ ಎಂದು ಹೇಳಿತು. ಹಸಿರು ಹುಲ್ಲಿನ ಆಸೆಯಿಂದ ಹೊರಟ ಜಿಂಕೆ ಇನ್ನೂ ಮುಂದೆ ಹೋಯಿತು. ಅದು ಮಳೆಗಾಲದ ದಿನವಾದ್ದರಿಂದ ಒಮ್ಮೆಲೆ ಧೋ ಧೋ ಎಂದು ಮಳೆ ಸುರಿಯಲಾರಂಭಿಸಿತು. ಜಿಂಕೆ ಅಲ್ಲಿಯೇ ಇದ್ದ ಮರದ ಕೆಳಗೆ ನಿಂತಿತಾದರೂ ಮಳೆಯ ರಭಸ ಹೆಚ್ಚಾಗಿದ್ದುದರಿಂದ ಅದು ಒದ್ದೆಯಾಗಿ ನಡುಗತೊಡಗಿತು. ತಾನು ಬಳಗದವರಿಂದ ದೂರವಾಗಿ ಒಂಟಿಯಾಗಿರುವ ಭಯ ಒಂದೆಡೆಯಾದರೆ ಸಿಡಿಲಿನ ಭಯ ಇನ್ನೊಂದೆಡೆ. ಇದರಿಂದ ಪಾರಾಗುವುದು ಹೇಗಪ್ಪಾ ಎಂದು ಅದು ಆಲೋಚಿಸತೊಡಗಿತು.
ಅತ್ತಿತ್ತ ನೋಡುತ್ತಿರುವಾಗ ಸನಿಹದಲ್ಲಿಯೇ ಗುಹೆಯೊಂದು ಕಂಡಿತು. ಅದರೊಳಗೆ ಹೊಕ್ಕು ಮಳೆಯಿಂದ ತಪ್ಪಿಸಿಕೊಳ್ಳಬಹುದೆಂದು ಯೋಚಿಸಿ ಜಿಂಕೆಯು ಲಗುಬಗೆಯಿಂದ ಓಡುತ್ತಾ ಗುಹೆಯನ್ನು ಪ್ರವೇಶಿಸಿತು. ಮಳೆ ನಿಲ್ಲುವವರೆಗೂ ಗುಹೆಯ ಒಳಗೆ ಇರುವುದೆಂದು ನಿರ್ಧರಿಸಿತು.
ಅಷ್ಟರಲ್ಲಿ ಸಿಂಹವೊಂದು ಗುಹೆಯತ್ತ ಬರುತ್ತಿರುವುದನ್ನು ಜಿಂಕೆ ನೋಡಿತು. ತಾನು ಸಿಂಹದ ಗುಹೆಯೊಳಕ್ಕೆ ಹೊಕ್ಕಿದ್ದೇನೆ ಎಂದು ಆಗಲೇ ಅದಕ್ಕೆ ತಿಳಿದದ್ದು. ಚಳಿಯಲ್ಲಿಯೂ ಅದು ಅಂಜಿ, ಬೆವೆತು ಹೋಯಿತು. ಗುಹೆಯಿಂದ ಹೊರಗೆ ಓಡಿಹೋಗಿ ತಪ್ಪಿಸಿಕೊಳ್ಳೋಣವೆಂದರೆ ಸಿಂಹ ಆಗಲೇ ಗುಹೆಯ ಬಳಿ ಬಂದೇಬಿಟ್ಟಿತ್ತು. ಸಿಂಹ ಒಳಬಂದು ತನ್ನನ್ನು ತಿಂದೇಬಿಡುತ್ತದೆ, ನಾನಿನ್ನು ಉಳಿಯಲಾರೆ ಎಂದುಕೊಂಡಿತು.
ಆಗ ಥಟ್ಟನೆ ಅದಕ್ಕೊಂದು ಉಪಾಯ ಹೊಳೆಯಿತು. ಹೇಗೋ ಸುಧಾರಿಸಿಕೊಂಡು, ಅಯ್ಯೋ, “ರಭಸದ ಮಳೆಗೆ ಗುಹೆ ಕುಸಿಯುತ್ತಿದೆ. ಯಾರಾದರೂ ಬಂದು ನನ್ನನ್ನು ರಕ್ಷಿಸಿರಿ’ ಎಂದು ಗುಹೆಯ ದ್ವಾರದ ಬಳಿ ಅರಚತೊಡಗಿತು. ಜಿಂಕೆಯ ಕೂಗನ್ನು ಸಿಂಹ ಕೇಳಿಸಿಕೊಂಡಿತು. ಗುಹೆ ಕುಸಿಯುತ್ತಿದೆ ಎಂಬ ಜಿಂಕೆಯ ಮಾತನ್ನು ನಂಬಿದ ಸಿಂಹ ಆ ಜಾಗದಿಂದ ಪಲಾಯನಗೈದಿತು. ಸಮಯಪ್ರಜ್ಞೆಯಿಂದ ಜಿಂಕೆ ತನ್ನ ಜೀವ ಉಳಿಸಿಕೊಂಡಿತು. ನಂತರ ಮಳೆ ನಿಲ್ಲುವವರೆಗೂ ಅಲ್ಲೇ ಇದ್ದು ನಂತರ ಜಿಂಕೆ ತನ್ನ ಒಡನಾಡಿಗಳನ್ನು ಕೂಡಿಕೊಂಡಿತು.
ಪುರುಷೋತ್ತಮ್