Advertisement

Contracter Case: ಗುತ್ತಿಗೆದಾರ ಆತ್ಮಹತ್ಯೆ: ಸಚಿವ ಪ್ರಿಯಾಂಕ್‌ ರಾಜೀನಾಮೆಗೆ ಬಿಜೆಪಿ ಆಗ್ರಹ

03:29 AM Jan 05, 2025 | Team Udayavani |

ಕಲಬುರಗಿ: ಗುತ್ತಿಗೆದಾರ ಸಚಿನ್‌ ಪಾಂಚಾಳ್‌ ಆತ್ಮಹತ್ಯೆಗೆ ನ್ಯಾಯ ಸಿಗುವ ವರೆಗೂ ಬಿಜೆಪಿ ಹೋರಾಟ ನಿಲ್ಲದು. ಇದನ್ನು ರಾಜ್ಯವ್ಯಾಪಿ ವಿಸ್ತರಿಸಲಾಗುವುದು ಎಂದು ಬಿಜೆಪಿ ಮುಖಂಡರು ಘೋಷಿಸಿದರು.

Advertisement

ನಗರದಲ್ಲಿ ಶನಿವಾರ ಬಿಜೆಪಿ ವತಿಯಿಂದ ಸಚಿನ್‌ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಮತ್ತು ಸಚಿವ ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಹಮ್ಮಿಕೊಂಡ ಬೃಹತ್‌ ಪ್ರತಿಭಟನೆ ಮೆರವಣಿಗೆಯಲ್ಲಿ ಮಾತನಾಡಿದ ಪಕ್ಷದ ನಾಯಕರೆಲ್ಲರೂ ಸಚಿನ್‌ ಆತ್ಮಹತ್ಯೆಗೆ ಸಂಬಂಧಿಸಿದಂತೆ 5 ಬೇಡಿಕೆ ಈಡೇರುವರೆಗೂ ಬಿಜೆಪಿ ವಿರಮಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.

ಬಿಜೆಪಿ ವಿರಮಿಸುವುದಿಲ್ಲ
ವಿಧಾನಸಭೆ ವಿಪಕ್ಷದ ನಾಯಕ ಆರ್‌. ಅಶೋಕ್‌ ಮಾತನಾಡಿ, ಸಚಿನ್‌ ಆತ್ಮಹತ್ಯೆ ಪ್ರಕರಣಕ್ಕೆ ನ್ಯಾಯ ಕೊಡಿಸುವವರೆಗೆ ಬಿಜೆಪಿ ವಿರಮಿಸುವುದಿಲ್ಲ. ಪ್ರಕರಣದ ಪ್ರಮುಖ ಆರೋಪಿ ರಾಜು ಕಪನೂರ್‌ನನ್ನು ಗೂಂಡಾ ಕಾಯ್ದೆಯಿಂದ ತೆಗೆಸಿದ ಕಾಂಗ್ರೆಸ್ಸಿಗರು, ಈಗ ನಮ್ಮವನಲ್ಲ; ನಮ್ಮವನಲ್ಲ ಎನ್ನುತ್ತಿದ್ದಾರೆ. ಆರೋಪಿಗಳಲ್ಲಿ ಮೊದಲ ಮೂವರು ಕಾಂಗ್ರೆಸ್ಸಿಗರು. ಈ ಭ್ರಷ್ಟ, ಆತ್ಮಹತ್ಯೆಗಳಿಗೆ ಕಾರಣವಾಗುವ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದರು.

ಯಾವ ಕೋಟಾ?
ವಿಧಾನಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಪ್ರಿಯಾಂಕ್‌ ಖರ್ಗೆ ಸಚಿವರಾಗಿದ್ದು ಮೆರಿಟ್‌ ಕೋಟಾದಲ್ಲೋ ಅಥವಾ ಪೇಮೆಂಟ್‌ ಕೋಟಾದಲ್ಲೋ ಎಂದು ಪ್ರಶ್ನಿಸಿದರು. ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಮಾತನಾಡಿ, ಸಚಿವ ಖರ್ಗೆ ಬಾಯಲ್ಲಿ ಗಾಂಧಿಗಿರಿ, ಆದರೆ ನಡೆ-ನುಡಿಯಲ್ಲಿ ಗೂಂಡಾಗಿರಿ. ಕೋಟೆ ಕಟ್ಟಿದವರೆಲ್ಲ ಮಣ್ಣಾಗಿದ್ದಾರೆ. ಇನ್ನು ನೀವು ಯಾವ ಲೆಕ್ಕ ಎಂದು ವಾಗ್ಧಾಳಿ ನಡೆಸಿದರು.

ನೆಂಟಸ್ತನಕ್ಕೆ ಬಂದಿಲ್ಲ
ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಮಾತನಾಡಿ, ಆತ್ಮೀಯರಾದ ಪ್ರಿಯಾಂಕ್‌ ಖರ್ಗೆಯವರು ನಮಗೆಲ್ಲ ಎಳನೀರು, ಬಿಸ್ಕೆಟ್‌ ಮೊದಲಾದವುಗಳನ್ನು ವ್ಯವಸ್ಥೆ ಮಾಡಿದ್ದಾರೆ. ನಾವೇನು ನಿಮ್ಮ ಮನೆಗೆ ನೆಂಟಸ್ತನಕ್ಕೆ ಬರ್ತಾ ಇಲ್ಲ. ಸಾವಿಗೆ ನ್ಯಾಯ ಕೇಳಲು ಬರುತ್ತಿರುವಾಗಲೂ ನನ್ನನ್ನು ಬಿಟ್ಟರೆ ಬೇರೆ ಯಾರೂ ಬುದ್ಧಿವಂತರಲ್ಲ ಎಂದುಕೊಂಡಿದ್ದಾರೆ. ಖರ್ಗೆಯವರೇ ನಿಮಗೆ ಮಾನವೀಯತೆ, ಮನುಷ್ಯತ್ವ ಇದ್ದರೆ, ಧಮ್ಮಿದ್ದರೆ, ತಾಕತ್ತಿದ್ದರೆ ಸಚಿನ್‌ ಮನೆಗೆ ಹೋಗಿ ಬನ್ನಿ ಎಂದು ಒತ್ತಾಯಿಸಿದರು.

Advertisement

‘ಬಿಜೆಪಿ ನಾಯಕರ ವಿರುದ್ಧ ಸುಪಾರಿ ಕೊಡಲಾಗಿದೆ. ಆದರೆ ಒಬ್ಬನೇ ಒಬ್ಬ ಬಿಜೆಪಿ ನಾಯಕರ ಕೂದಲು ಕೊಂಕಿದರೆ ರಾಜ್ಯ ಸರಕಾರ 24 ಗಂಟೆ ಅಧಿಕಾರದಲ್ಲಿ ಇರುವುದಿಲ್ಲ.’
– ಎನ್‌. ರವಿಕುಮಾರ, ಎಂಎಲ್‌ಸಿ

ಪ್ರಿಯಾಂಕ್‌ ಖರ್ಗೆ ಬಗ್ಗೆ ಮಾತನಾಡದಿದ್ದರೆ ಬಿಜೆಪಿಗೆ ನಿದ್ದೆ ಬರುವುದಿಲ್ಲ ಎನ್ನುತ್ತಾರೆ. ಅಂದರೆ ಸಚಿವ ಖರ್ಗೆ ನಿದ್ದೆ ಮಾತ್ರೆನಾ? ಎಲ್ಲರ ಡಿಎನ್‌ಎ ಬಗ್ಗೆ ಮಾತನಾಡುತ್ತಾರೆ. ಅವರಿಗೂ ಮಂಪರು ಪರೀಕ್ಷೆ ಮಾಡಿಸಿದ್ದರೆ ಎಲ್ಲ ಡಿಎನ್‌ಎ ಗೊತ್ತಾಗುತ್ತೆ. ತಾವು ವೈಯಕ್ತಿಕ ಮಾತನಾಡುವುದಿಲ್ಲ. ಸಮಯ ಬಂದಾಗ ಎಲ್ಲ ಮಾತನಾಡುತ್ತೇನೆ.
– ಛಲವಾದಿ ನಾರಾಯಣ ಸ್ವಾಮಿ, ವಿಧಾನ ಪರಿಷತ್‌ ವಿಪಕ್ಷ ನಾಯಕ

ಬಿಜೆಪಿ ಬೇಡಿಕೆಗಳೇನು?
1. ಡೆತ್‌ನೋಟ್‌ದಲ್ಲಿ ಹೆಸರಿಸಿರುವ ರಾಜು ಕಪನೂರ ಸೇರಿ ಎಲ್ಲರ ಬಂಧನವಾಗಬೇಕು.
2. ಪ್ರಿಯಾಂಕ್‌ ಖರ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು
3. ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು.
4. ಸಚಿನ್‌ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ
5. ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ನೌಕರಿ ನೀಡಬೇಕು

Advertisement

Udayavani is now on Telegram. Click here to join our channel and stay updated with the latest news.

Next