Advertisement

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

02:22 PM Jan 05, 2025 | Team Udayavani |

ದಾವಣಗೆರೆ: ವಿರೋಧ ಪಕ್ಷಗಳದ್ದು ಕೇವಲ ಆರೋಪ ಮಾಡುವುದೇ ಕೆಲಸವಲ್ಲ. ದಾಖಲಾತಿಗಳ ಸಹಿತವಾಗಿ ಆರೋಪ ಮಾಡಬೇಕು ಹಾಗೂ ಆರೋಪಗಳನ್ನು ಸಾಬೀತು ಪಡಿಸಬೇಕು. ಆಧಾರವಿಲ್ಲದೆ ಆರೋಪಗಳನ್ನು ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Advertisement

ದಾವಣಗೆರೆಯ ಎಂ. ಬಿ.ಎ ಗ್ರೌಂಡ್ ಹೆಲಿಪ್ಯಾಡ್ ಆವರಣದಲ್ಲಿ ರವಿವಾರ (ಜ.05)  ಮಾಧ್ಯಮದರೊಂದಿಗೆ  ಮಾತನಾಡಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರದಲ್ಲಿ ಶೇ. 60 ಕಮಿಷನ್ ಪಡೆಯಲಾಗುತ್ತಿದೆ ಎಂದು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು.

ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ದರ ಹೆಚ್ಚಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಎಲ್ಲಾ ಕಾಲದಲ್ಲಿಯೂ ಬಸ್ ದರಗಳು ಏರಿಕೆಯಾಗಿದೆ. ನೌಕರರ ವೇತನ, ಡೀಸಲ್ ಬೆಲೆ ಏರಿಕೆ, ಬಸ್ಸುಗಳನ್ನು ಕೊಳ್ಳುವುದು ಹಾಗೂ ಹಣದುಬ್ಬರವೂ ಆಗಿದೆ.  ವರ್ಷಗಳ ಹಿಂದೆ ಬೆಲೆ ಹೆಚ್ಚಿಸಲಾಗಿದ್ದು, ಸಾರಿಗೆ ನಿಗಮಗಳು ತೊಂದರೆಯಲ್ಲಿವೆ ಎನ್ನುವ ಕಾರಣ ಹಾಗೂ ಬೇಡಿಕೆಯೂ ಇದ್ದುದ್ದರಿಂದ ಬೆಲೆಯೇರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕೇಂದ್ರ ಸರ್ಕಾರ ರೈಲು ಪ್ರಯಾಣ ದರ ಹೆಚ್ಚಳ ಮಾಡಿಲ್ಲವೇ ಎಂದು ಪ್ರಶ್ನಿಸಿದರು. ಬಿಜೆಪಿ ಹಾಗೂ ಕುಮಾರಸ್ವಾಮಿಯವರ ಕಾಲದಲ್ಲಿಯೂ ಬೆಲೆ ಹೆಚ್ಚಳ ಮಾಡಲಾಗಿತ್ತು. ‌ಎಲ್ಲ ಕಾಲದಲ್ಲೂ ದರ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದರು.

Advertisement

ಕೆಪಿಸಿಸಿ, ಮುಖ್ಯಮಂತ್ರಿಗಳ ಬದಲಾವಣೆಯ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಈ ವಿಷಯಗಳ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.

ಖಾಲಿ ಇರುವ ಸಚಿವ ಸ್ಥಾನಗಳನ್ನು ತುಂಬುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ನಾಗೇಂದ್ರ ಅವರ ರಾಜೀನಾಮೆಯಿಂದ ಖಾಲಿಯಾಗಿರುವ  ಸಚಿವ ಸ್ಥಾನವನ್ನು ತುಂಬುವ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲಾಗುವುದು ಎಂದರು.

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿಗಳು ಚುನಾವಣೆಗಳು ನಡೆದು ಐದು ವರ್ಷಗಳಾಗಿವೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ವಿಷಯ ನ್ಯಾಯಾಲಯದ ಮುಂದೆ ಹೋಗಿದೆ. ವಿಷಯ ಅಲ್ಲಿಯೇ ಇತ್ಯರ್ಥವಾಗಬೇಕು. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ   ಚುನಾವಣೆ ನಡೆಸಲು ನಾವು  ತಯಾರಾಗಿದ್ದೇವೆ ಎಂದರು.

ಒಳಮೀಸಲಾತಿ ನೀಡಬೇಕೆಂದು  ಸರ್ವೋಚ್ಚ ನ್ಯಾಯಾಲಯ ಹೇಳಿದ್ದು  ಪ್ರಾಯೋಗಿಕ ಮಾಹಿತಿ ಇಲ್ಲದಿರುವುದರಿಂದ ನಾಗಮೋಹನ್ ದಾಸ್ ಅವರ ನೇತೃತ್ವದ  ಸಮಿತಿ ರಚಿಸಲಾಗಿದೆ. ಒಳಮೀಸಲಾತಿ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ಹಲವು ಸಚಿವರು ಸಭೆ ಸೇರಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಊಟಕ್ಕೆ ಸೇರುವುದೇ ತಪ್ಪೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ರಾಜಕಾರಣಿಗಳು ಊಟಕ್ಕೆ  ಸೇರಿದರೆ ಬಣ್ಣ ಕಟ್ಟಲಾಗುತ್ತದೆ. ಈಗಾಗಲೇ ಹೇಳಿದಂತೆ ಅಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಬೇಕೆಂದು ಈ ಹಿಂದೆ  ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ  ಬಜೆಟ್ ನಲ್ಲಿ ಘೋಷಿಸಲಾಗಿತ್ತು ಎಂಬುದಕ್ಕೆ ಉತ್ತರಿಸಿ ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಈ ಬಾರಿಯ ಬಜೆಟ್ ನ್ನು ಮಾರ್ಚ್ ನಲ್ಲಿ ಮಂಡಿಸಲಾಗುವುದು. ಆಯವ್ಯಯ ಪೂರ್ವಭಾವಿ ಚರ್ಚೆ ಪ್ರಾರಂಭವಾದ ನಂತರ ದಿನಾಂಕವನ್ನು ತಿಳಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next