Advertisement

Report: ಐಸಿಯು ಗಲೀಜು, ಟ್ಯಾಂಕ್‌ನಲ್ಲಿ ಪಾಚಿ: ಸರಕಾರಿ ಆಸ್ಪತ್ರೆಗಳ ದುಃಸ್ಥಿತಿ!

01:56 AM Jan 05, 2025 | Team Udayavani |

ಬೆಂಗಳೂರು: ಸರಕಾರಿ ಆಸ್ಪತ್ರೆಗಳ ನೀರಿನ ಟ್ಯಾಂಕ್‌ಗಳಲ್ಲಿ ಪಾಚಿ ಕಟ್ಟಿದೆ. ಬಹುತೇಕ ಆಸ್ಪತ್ರೆಗಳಲ್ಲಿ ಶೌಚಾಲಯಗಳ ಸ್ಥಿತಿ ಶೋಚನೀಯವಾಗಿದೆ, ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯಲಾಗುತ್ತದೆ, ಒಳಚರಂಡಿ ವ್ಯವಸ್ಥೆಯೇ ಇಲ್ಲ. ಇದು ಜನಸಾಮಾನ್ಯರಿಗೆ “ಆರೋಗ್ಯ ಗ್ಯಾರಂಟಿ’ ಕೊಡಬೇಕಾದ ಸರಕಾರಿ ಆಸ್ಪತ್ರೆಗಳ “ಅನಾರೋಗ್ಯಕರ’ ಸ್ಥಿತಿ.

Advertisement

ಕರ್ನಾಟಕ ರಾಜ್ಯ ಮಹಿಳಾ ಆಯೋಗವು ತನ್ನ ವರದಿಯಲ್ಲಿ ಈ ಮೇಲಿನ ಕಳವಳಕಾರಿ ಅಂಶಗಳನ್ನು ಉಲ್ಲೇಖೀಸಿದೆ. ಬಾಣಂತಿಯರ ಸಾವುಗಳ ಹಿನ್ನೆಲೆಯಲ್ಲಿ ರಾಜ್ಯದ 16 ಜಿಲ್ಲೆಗಳ ಪ್ರವಾಸ ಕೈಗೊಂಡು ಸರಕಾರಿ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ವಸ್ತುಸ್ಥಿತಿಗಳನ್ನು ಪರಿಶೀಲಿಸಿ ಆಯೋಗದ ಅಧ್ಯಕ್ಷೆ ಡಾ| ನಾಗಲಕ್ಷ್ಮೀ ಚೌಧರಿಯವರು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿರುವ ವರದಿಯಲ್ಲಿ ಈ ಅಂಶಗಳನ್ನು ಪ್ರಸ್ತಾವಿಸಲಾಗಿದೆ. ಸಮಸ್ಯೆಗಳನ್ನು ಗುರುತಿಸುವುದರ ಜತೆಗೆ ಅವುಗಳ ಪರಿಹಾರಕ್ಕೆ ಕೆಲವು ಶಿಫಾರಸುಗಳನ್ನು ಕೂಡ ವರದಿಯಲ್ಲಿ ಮಾಡಲಾಗಿದೆ.

ಸರಕಾರಿ ಆಸ್ಪತ್ರೆಗಳ ನೀರಿನ ಟ್ಯಾಂಕ್‌ಗಳಲ್ಲಿ ಪಾಚಿ ಕಟ್ಟಿದ್ದು, ನೀರು ಕಲುಷಿತಗೊಂಡಿದೆ. ಅದೇ ನೀರು ಹೆರಿಗೆ ಕೊಠಡಿಗೂ ಸರಬರಾಜು ಆಗುತ್ತಿದೆ. ಆ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾಗಳು ಇರುವ ಸಾಧ್ಯತೆಯಿದ್ದು, ಪ್ರಾಣಾಪಾಯಕ್ಕೂ ಎಡೆಮಾಡಿಕೊಡುವ ಸಾಧ್ಯತೆಯಿದೆ. ಆಗಾಗ ನೀರಿನ ಟ್ಯಾಂಕ್‌ ಸ್ವತ್ಛಗೊಳಿಸಿ ನೀರಿನ ಮಾದರಿ ಲ್ಯಾಬ್‌ಗ ಕಳಿಸಿ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಅದೇ ರೀತಿ ಬಹುತೇಕ ಸರಕಾರಿ ಆಸ್ಪತ್ರೆಗಳಲ್ಲಿ ಶೌಚಾಲಯಗಳ ಸ್ಥಿತಿ ಶೋಚನೀಯವಾಗಿದೆ. ಶೌಚಾಲಯಗಳಲ್ಲಿ ಸ್ವತ್ಛತೆ ಇರುವುದಿಲ್ಲ. ಹಲವು ಆಸ್ಪತ್ರೆಗಳಲ್ಲಿ ಶೌಚಾಲಯಗಳಿಗೆ ಬೀಗ ಹಾಕಲಾಗಿದೆ. ಅನೇಕ ಕಡೆ ಬಾಗಿಲುಗಳೂ ಇರುವುದಿಲ್ಲ. ಹಾಗಾಗಿ ಕೂಡಲೇ ಶೌಚಾಲಯಗಳ ಸ್ವತ್ಛತೆ ಕಡೆಗೆ ಗಮನಹರಿಸಬೇಕು ಎಂದು ಆಯೋಗ ಹೇಳಿದೆ.

ಆಸ್ಪತ್ರೆಗಳ ತ್ಯಾಜ್ಯ ವಸ್ತುಗಳನ್ನು ಆಸ್ಪತ್ರೆಯ ಆವರಣದ ಸುತ್ತಮುತ್ತ ಎಲ್ಲೆಂದರಲ್ಲಿ ಎಸೆಯುತ್ತಿದ್ದು, ಇದರಿಂದ ರೋಗ ಹರಡುವ ಸಾಧ್ಯತೆಯಿರುತ್ತದೆ. ಹಾಗಾಗಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮಕೈಗೊಳ್ಳಬೇಕು. ಬಹುತೇಕ ಸರಕಾರಿ ಆಸ್ಪತ್ರೆಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಇದರಿಂದ ಆಸ್ಪತ್ರೆಯ ಸುತ್ತಮುತ್ತ ನೀರು ನಿಂತು ಸೊಳ್ಳೆಗಳು ಹೆಚ್ಚಿದ್ದು, ಹಲವು ರೋಗಗಳಿಗೆ ಸಾರ್ವಜನಿಕರು ತುತ್ತಾಗುತ್ತಿದ್ದಾರೆ. ಚರಂಡಿಗಳ ಸ್ವತ್ಛತೆಗೆ ಗಮನ ಹರಿಸಬೇಕು. ಚಿಕಿತ್ಸೆಗೆ ಬರುವ ಮಹಿಳೆಯರನ್ನು ತಪಾಸಣೆ ನಡೆಸಲು ಕೈಗವಸು, ಸ್ಯಾನಿಟೈಸರ್‌ಗಳನ್ನು ಉಪಯೋಗಿಸುತ್ತಿರುವುದಿಲ್ಲ. ತಪಾಸಣೆಗೆ ಮುನ್ನ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ತಪಾಸಣೆ ನಡೆಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

Advertisement

ಆಸ್ಪತ್ರೆಗೆ ದಾಖಲಾದ ಗರ್ಭಿಣಿಯರು, ಬಾಣಂತಿಯರು ಹಾಗೂ ಮಹಿಳಾ ರೋಗಿಗಳ ಕಡೆಯ ಪರಿಚಾರಕರಿಗೆ ಮಲಗಲು, ಶುಚಿಗೊಳ್ಳಲು ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಇರುವುದಿಲ್ಲ. ಅವರೆಲ್ಲರೂ ಆಸ್ಪತ್ರೆಯ ಹೊರಾಂಗಣದಲ್ಲಿ ಮಲಗುತ್ತಿರುವುದು ಕಂಡು ಬಂದಿರುತ್ತದೆ. ಇದರಿಂದ ರೋಗಿಗಳ ಕಡೆಯವರಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ಇನ್ನಿತರ ಸಮಸ್ಯೆ/ಶಿಫಾರಸು
– ಶಸ್ತ್ರ ಚಿಕಿತ್ಸೆ, ರಕ್ತ ಪರೀಕ್ಷೆಗಳನ್ನು ಮಾಡುವಾಗ ಉಪಕರಣಗಳನ್ನು ಸ್ವತ್ಛಗೊಳಿಸಲು ಸೋಂಕು ನಿವಾರಕ ದ್ರಾವಣ ಬಳಸುತ್ತಿರುವುದಿಲ್ಲ. ಸೋಂಕು ನಿವಾರಕ ದ್ರಾವಣಗಳಿಂದ ಉಪಕರಣಗಳನ್ನು ಸ್ವತ್ಛಗೊಳಿಸಲು ಕ್ರಮ ಕೈಗೊಳ್ಳಬೇಕು. ಆಟೋ ಕ್ಲೇವ್‌ ಮೂಲಕ ಸಾಧನಗಳನ್ನು ಸ್ಟೆರಿಲೈಸೇಶನ್‌ ಮಾಡಬೇಕು.

– ಸರಕಾರಿ ಆಸ್ಪತ್ರೆಗಳಲ್ಲಿ ನುರಿತ ಸ್ಕ್ಯಾನಿಂಗ್‌ ತಜ್ಞರು,  ಸ್ತ್ರೀ ರೋಗ ತಜ್ಞರು, ರೆಡಿಯಾಲಾಜಿಸ್ಟ್‌ ಹಾಗೂ ಇತರ ಸಿಬಂದಿ ಕೊರತೆ ಇದ್ದು, ರೋಗಿಗಳ ಸಂಖ್ಯೆಗೆ ತಕ್ಕಂತೆ ನೇಮಕಾತಿಗಳನ್ನು ಮಾಡಿಕೊಳ್ಳಬೇಕು.

– ಸರಕಾರಿ ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭಗಳಲ್ಲಿ ಆ್ಯಂಬುಲೆನ್ಸ್‌ಗಳ ಕೊರತೆ ಇದೆ.

– ಗ್ರಾಮೀಣ ಮಟ್ಟದಲ್ಲಿ ಗರ್ಭಿಣಿಯರಿಗೆ ಆರೋಗ್ಯದ ಬಗ್ಗೆ ಮಾಹಿತಿಯ ಕೊರತೆ ಇದೆ.

– ಕೇಂದ್ರ ಸರಕಾರದಿಂದ ಪೂರೈಸುತ್ತಿರುವ ಔಷಧಗಳ ಅವಧಿಗಳನ್ನು ಪರಿಶೀಲಿಸಬೇಕು.

– ಆಸ್ಪತ್ರೆಗಳಲ್ಲಿ ಔಷಧಗಳನ್ನು ಇಡಲು ವ್ಯವಸ್ಥಿತವಾದ “ಸ್ಟೋರೇಜ್‌ ಕ್ಯಾಬಿನ್‌’ಗಳನ್ನು ಸ್ಥಾಪಿಸಬೇಕು.

– ಸೆಂಟ್ರಲ್‌ ಡ್ರಗ್‌ ಲ್ಯಾಬ್‌ (ಸಿಡಿಎಲ್‌) ಕೊಡುವ ಔಷಧಗಳ ಗುಣಮಟ್ಟ ಆಗಾಗ ಕಡ್ಡಾಯವಾಗಿ ಪರಿಶೀಲಿಸಬೇಕು.

ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವ ಮೂಲಕ ಸರಕಾರಿ ವೈದ್ಯಕೀಯ ವ್ಯವಸ್ಥೆಯ ನಿರ್ವಹಣೆಯಲ್ಲಿ ಗಮನಾರ್ಹ ಬದಲಾವಣೆ ತಂದರೆ ಆರ್ಥಿಕವಾಗಿ ದುರ್ಬಲರಾದ ಬಡ ಮಹಿಳೆಯರಿಗೆ ಗುಣಮಟ್ಟದ ಚಿಕಿತ್ಸೆ ದೊರಕುತ್ತದೆ. ಅಲ್ಲದೆ ಇದರಿಂದ ಬಾಣಂತಿಯರ, ಗರ್ಭಿಣಿಯರ ಹಾಗೂ ಮಹಿಳಾ ರೋಗಿಗಳ ಸಾವಿನ ಪ್ರಮಾಣವೂ ಇಳಿಮುಖವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. – ಡಾ. ನಾಗಲಕ್ಷ್ಮೀ ಚೌಧರಿ, ಅಧ್ಯಕ್ಷೆ, ರಾಜ್ಯ ಮಹಿಳಾ ಆಯೋಗ

Advertisement

Udayavani is now on Telegram. Click here to join our channel and stay updated with the latest news.

Next