Advertisement

ಗಾಂಧೀಜಿ ಹೋರಾಟಕ್ಕೆ ರಂಗಭೂಮಿಯೇ ಚೈತನ್ಯ ಶಕ್ತಿ

06:07 PM Mar 30, 2022 | Team Udayavani |

ಹಾವೇರಿ: ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ಗಾಂಧೀಜಿ ಜೀವನ ಮತ್ತು ಹೋರಾಟಕ್ಕೆ ಆದರ್ಶ ತುಂಬಿದ್ದೇ ರಂಗಭೂಮಿ. ಇಂದಿಗೂ ಅನೇಕ ಸ್ವಾತಂತ್ರ್ಯ ಸೇನಾನಿಗಳು ಜನಮಾನಸದಲ್ಲಿ ಜೀವಂತವಾಗಿ ಉಳಿದಿದ್ದರೆ ಅದು ರಂಗಭೂಮಿಯಿಂದಲೇ ಎಂದು ಮೈಲಾರ ಮಹಾದೇವ ಟ್ರಸ್ಟ್‌ ಸದಸ್ಯ ಕಾರ್ಯದರ್ಶಿ ಶಶಿಕಲಾ ಹುಡೇದ ಹೇಳಿದರು.

Advertisement

ನಗರದ ಗೆಳೆಯರ ಬಳಗದ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌, ಜಿಲ್ಲಾ ಕಲಾ ಬಳಗ, ಗೆಳೆಯರ ಬಳಗ ಹಾಗೂ ಗುದೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ರಂಗಭೂಮಿಗೆ ಬೇರೆ ಬೇರೆ ಸ್ವರೂಪದಲ್ಲಿ ಸೇವೆ ಸಲ್ಲಿಸಿದ ಐವರು ಸಾಧಕರಾದ ರಮೇಶ ದೇಶಪಾಂಡೆ, ರೇಣುಕಾ ಗುಡಿಮನಿ, ಶೇಷಗಿರಿ ಕಲಾ ತಂಡದ ಶಿವಮೂರ್ತಿ ಹುಣಸಿಹಳ್ಳಿ, ಮಿಮಿಕ್ರಿ ಕಲಾವಿದ ವಸಂತ ಕಡತಿ ಹಾಗೂ ಬ್ಯಾಡಗಿಯ ಕಲಾವಿದ ಜಮೀರ ರಿತ್ತಿ ಅವರನ್ನು ಸನ್ಮಾನಿಸಲಾಯಿತು. ನಂತರ ನಡೆದ ಸ್ವಾತಂತ್ರ್ಯೋತ್ತರ ಕನ್ನಡ ರಂಗಭೂಮಿ ಕುರಿತ ವಿಚಾರ ಗೋಷ್ಠಿಯಲ್ಲಿ ನಾಟಕಗಳ ವಿಕಾಸ-ದೇಶಪ್ರೇಮ ನಾಟಕಗಳ ಕುರಿತು ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿದರು. ಶಿಕ್ಷಕ ಕಲಾವಿದ ವಿರೂಪಾಕ್ಷ ಪಡಿಗೋದಿ ಬೀದಿ ನಾಟಕ ಪರಂಪರೆ ಕುರಿತು ವಿಚಾರಗಳನ್ನು ಹಂಚಿಕೊಂಡರು.

ಜ್ಞಾನಗಂಗಾ ಶಿಕ್ಷಣ ಸಮಿತಿ ಕೋಶಾಧ್ಯಕ್ಷ ವಿ.ಎಂ.ಪತ್ರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೆಳೆಯರ ಬಳಗದ ಕಾರ್ಯದರ್ಶಿ ಡಾ. ಶ್ರವಣ ಪಂಡಿತ, ಜಿ.ಎಚ್‌.ಕಾಲೇಜಿನ ಡಾ.ಸಂಜೀವ ನಾಯಕ್‌, ರಂಗ ನಿರ್ದೇಶಕಿ ಗಂಗಾ ಕಾಳೇನವರ ಮಾತನಾಡಿದರು.

ಆರ್‌.ಸಿ. ನಂದೀಹಳ್ಳಿ, ರವೀಂದ್ರ ಮಂಜುನಾಥ ವಾಲ್ಮೀಕಿ, ಹನುಮಂತಸಿಂಗ್‌ ರಜಪೂತ, ಕಾಂತೇಶ, ದತ್ತಾತ್ರೇಯ ಜೋಶಿ ಮುಂತಾದವರು ರಂಗಗೀತೆಗಳನ್ನು ಹಾಡಿದರು. ಗದುಗಿನ ಶಂಕರಗೌಡ ಪಾಟೀಲ ಅವರು ನಾಡಿನ ರಂಗ ಸಾಧಕರ ಚಿತ್ರಗಳನ್ನು ಆವರಣದಲ್ಲಿ ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದರು. ಎಸ್‌.ಆರ್‌.ಹಿರೇಮಠ ಸ್ವಾಗತಿಸಿ, ಟ್ರಸ್ಟ್‌ ಹಿರಿಯ ಸದಸ್ಯ ವಿ.ಎನ್‌. ತಿಪ್ಪನಗೌಡ್ರ ಪ್ರಸ್ತಾವಿಕವಾಗಿ ಮಾತನಾಡಿದರು. ಜಿ.ಎಂ.ಓಂಕಾರಣ್ಣನವರ ಹಾಗೂ ನಾಗರಾಜ ನಡುವಿನಮಠ ನಿರೂಪಿಸಿ, ಚಂದ್ರಶೇಖರ ಮಾಳಗಿ ವಂದಿಸಿದರು. ಕೊನೆಯಲ್ಲಿ ಜಿ.ಎಚ್‌. ಕಾಲೇಜಿನ ವಿದ್ಯಾರ್ಥಿಗಳ ಕಲಾತಂಡ ಸಿಡಿಲ ಕಿಡಿ ಸುಭಾಸ್‌ಚಂದ್ರ ಭೋಸ್‌ ನಾಟಕ ಪ್ರದರ್ಶಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next