Advertisement

ಗುರಿ 150; ಕಾರ್ಯಸೂಚಿ ಸಲ್ಲಿಕೆಗೆ ಅಮಿತ್‌ ಶಾ ಆದೇಶ

01:37 AM Dec 29, 2022 | Team Udayavani |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150ರ ಗುರಿ ತಲುಪಲು ಸಿದ್ಧಪಡಿಸಿರುವ ಕಾರ್ಯಸೂಚಿಯ ಬಗ್ಗೆ ಸಮಗ್ರ ವರದಿ ನೀಡುವಂತೆ ಅಮಿತ್‌ ಶಾ ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ.

Advertisement

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳನ್ನು ರಾಜಕೀಯವಾಗಿ ಮಣಿಸಲು ಕೈಗೊಳ್ಳುವ ಕಾರ್ಯತಂತ್ರ ಹಾಗೂ ಅದರ ಕಾರ್ಯ ಸಾಧ್ಯತೆ ಬಗ್ಗೆ ಮಾಹಿತಿ ಸಲ್ಲಿಸಲು ನಿರ್ದೇಶಿಸಲಾಗಿದೆ.

ಎರಡು ಹಂತಗಳ ಜೆಡಿಎಸ್‌ ಪಂಚರತ್ನ ಯಾತ್ರೆ, ಕಾಂಗ್ರೆಸ್‌ ವತಿಯಿಂದ ಸರಣಿ ಸಮಾವೇಶ ಆಯೋಜನೆ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಜಂಟಿ ಯಾತ್ರೆ, ಆ ನಂತರ ಪ್ರತ್ಯೇಕ ಬಸ್‌ ಯಾತ್ರೆಯಿಂದ ಉಂಟಾಗಬಹುದಾದ ಪರಿ ಣಾಮಗಳು ಮತ್ತು ಬಿಜೆಪಿಗೆ ಅದ ರಿಂದಾಗುವ ಲಾಭ-ನಷ್ಟಗಳ ಬಗ್ಗೆಯೂ ಮಾಹಿತಿ ಕೇಳಲಾಗಿದೆ ಎಂದು ಹೇಳಲಾಗಿದೆ.

ಅಮಿತ್‌ ಶಾ ಅವರು ಈ ಬಾರಿಯ ರಾಜ್ಯ ಭೇಟಿ ಸಂದರ್ಭದಲ್ಲಿ ತಮ್ಮ ಮೂಲಗಳಿಂದ ಸಂಗ್ರಹಿಸಿರುವ ಮಾಹಿತಿ ಆಧಾರದಲ್ಲಿ ಕೆಲವೊಂದು ಸಲಹೆಗಳನ್ನೂ ರಾಜ್ಯ ನಾಯಕರಿಗೆ ನೀಡುವ ಸಾಧ್ಯತೆ ಇದೆ.

ಕಾರ್ಯತಂತ್ರ ಮಾಹಿತಿ
ಇತ್ತೀಚೆಗೆ ದಿಲ್ಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರೊಂದಿಗೆ ಅಮಿತ್‌ ಷಾ ಚುನಾವಣೆ ಹಿನ್ನೆಲೆಯಲ್ಲಿ ಮಹತ್ವದ ಚರ್ಚೆ ನಡೆಸಿದ್ದರು. ಅದರೊಂದಿಗೆ ತಮ್ಮ ಸಿದ್ಧತೆ ಹಾಗೂ ಕಾರ್ಯತಂತ್ರದ ವಿವರ ನೀಡುವಂತೆ ಆದೇ ಶಿಸಿದ್ದರು.

Advertisement

ಈ ಹಿನ್ನೆಲೆಯಲ್ಲಿ ರಾಜ್ಯ ನಾಯಕರು ತಮ್ಮ ಕಾರ್ಯತಂತ್ರದೊಂದಿಗೆ ಜನರ ವಿಶ್ವಾಸ ಗಳಿಸಲು ಪಕ್ಷದ ಸಂಘಟನೆ ವಿವರ, ಸರಕಾರದ ಯೋಜನೆ ಹಾಗೂ ಕಾರ್ಯಕ್ರಮಗಳ ಕುರಿತೂ ವಿವರ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯದಲ್ಲಿ ಮೀಸಲು ವಿಷಯಕ್ಕೆ ಸಂಬಂಧಿಸಿ ವಿವಿಧ ಸಮುದಾಯಗಳ ಬೇಡಿಕೆ ಹಾಗೂ ಅದರಿಂದ ರಾಜಕೀಯವಾಗಿ ಉಂಟಾಗಲಿರುವ ಪರಿಣಾಮಗಳ ಬಗ್ಗೆಯೂ ಅಮಿತ್‌ ಶಾ ಮಾಹಿತಿ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.

ಸಂಪುಟ ಪುನಾರಚನೆ ಪ್ರಸ್ತಾವನೆ
ಸಚಿವ ಸಂಪುಟ ವಿಸ್ತರಣೆಗೆ ಬಗ್ಗೆ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್‌ ಅವರಿಂದಲೇ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಮುಂದಿನ ಚುನಾವಣೆಯ ದೃಷ್ಟಿಯಿಂದ ಕೆಲವು ಸಮುದಾಯಗಳಿಗೆ ಅವಕಾಶ ಕಲ್ಪಿಸಿದರೆ ರಾಜಕೀಯವಾಗಿ ಲಾಭವಾಗಲಿದೆ ಎಂಬುದನ್ನು ಮನವರಿಕೆ ಮಾಡಿಕೊಡಲೂ ನಿರ್ಧರಿಸಲಾಗಿದೆ. ಸಂಪುಟ ವಿಸ್ತರಣೆಗಿಂತ ಹೊಸಮುಖಗಳ ಸಹಿತ ಪುನಾರಚನೆ ಸೂಕ್ತ  ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಪಕ್ಷ ಸೇರ್ಪಡೆ ಬಗ್ಗೆ ಚರ್ಚೆ
ಬಿಜೆಪಿ ಸೇರ್ಪಡೆಯಾಗಲು ಬಯಸಿ ರಾಜ್ಯ ನಾಯಕರ ಜತೆ ಚರ್ಚಿಸಿರುವ ವಿವಿಧ ಪಕ್ಷಗಳ  ಶಾಸಕರು ಹಾಗೂ ಮುಖಂಡರು ಹಾಗೂ ಅವರ ಬೇಡಿಕೆ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚೆಯಾಗಲಿದೆ. ಕೆಲವರು ಟಿಕೆಟ್‌ ನೀಡುವ ಖಾತರಿ ಕೇಳಿದ್ದಾರೆನ್ನಲಾಗಿದೆ. ಅಮಿತ್‌ ಅವರು ಹಸಿರು ನಿಶಾನೆ ನೀಡಿದರೆ ಸಂಕ್ರಾಂತಿ ನಂತರ ಹಾಲಿ ಶಾಸಕರ ಸಹಿತ ಹಲವು ನಾಯಕರು ಬಿಜೆಪಿಗೆ ಸೇರುವರು ಎನ್ನುತ್ತವೆ ಮೂಲಗಳು.

- ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next