Advertisement

ಪೆರು ದೇಶದ ಕತೆ: ಹೆಡ್ಡ ತೋಳ ಜಾಣ ನರಿ

07:00 AM Apr 08, 2018 | |

ಒಂದು ಪರ್ವತ ಪ್ರದೇಶದಲ್ಲಿ ದೊಡ್ಡ ತೋಳವೊಂದು ವಾಸವಾಗಿತ್ತು. ಒಂದು ಸಲ ಅದಕ್ಕೆ ಮನುಷ್ಯರು ಪ್ರತಿವರ್ಷವೂ ತಮ್ಮ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಾರೆ, ಬಗೆಬಗೆಯ ಪಕ್ವಾನ್ನಗಳನ್ನು ತಯಾರಿಸಿ ತಿನ್ನುತ್ತಾರೆ ಎಂಬ ವಿಚಾರ ತಿಳಿಯಿತು. ತಾನೂ ತನ್ನ ಜನ್ಮದಿನವನ್ನು ಹಬ್ಬದಂತೆ ಆಚರಿಸಬೇಕು, ಹೊಟ್ಟೆ ತುಂಬ ತಿಂದು ತೇಗಬೇಕು ಎಂದು ತೋಳಕ್ಕೆ ಬಯಕೆಯುಂಟಾಯಿತು. ಹೆಂಡತಿಯನ್ನು ಕರೆದು ಈ ಸಂಗತಿ ಹೇಳಿತು. ಹೆಣ್ಣು ತೋಳ ಕೂಡ ಖುಷಿಪಟ್ಟಿತು. “”ಒಳ್ಳೆಯ ಯೋಚನೆ. ನಾನು ಕೂಡ ಬಂಧುಗಳನ್ನು, ಮಿತ್ರರನ್ನು ಸಮಾರಂಭಕ್ಕೆ ಕರೆಯುತ್ತೇನೆ. ನೀವು ಕಾಡಿಗೆ ಹೋಗಿ ಎಲ್ಲರಿಗೂ ಸುಗ್ರಾಸ ಭೋಜನಕ್ಕೆ ಬೇಕಾದಷ್ಟು ಖಾದ್ಯಗಳನ್ನು ತಯಾರಿಸಲು ಅಗತ್ಯವಾದ ಪ್ರಾಣಿಯನ್ನು ಬೇಟೆಯಾಡಿಕೊಂಡು ಬನ್ನಿ” ಎಂದು ಗಂಡನಿಗೆ ತಿಳಿಸಿತು. ತೋಳ ಹಾಗೆಯೇ ಆಗಲಿ ಎಂದು ಒಪ್ಪಿಕೊಂಡು ರಾತ್ರೆಯಾಗುವಾಗ ಕಾಡಿನ ಕಡೆಗೆ ಸಾಗಿತು.

Advertisement

    ಒಂದೆಡೆ ಒಂದು ಮೊಲವು ತನ್ನ ಮರಿಗಳೊಂದಿಗೆ ಸೇರಿಕೊಂಡು ಹುಲ್ಲು ತಿನ್ನುತ್ತ ಇತ್ತು. ತೋಳವು ಸದ್ದಾಗದಂತೆ ಹೋಗಿ ಮೊಲವನ್ನು ಗಟ್ಟಿಯಾಗಿ ಹಿಡಿದುಕೊಂಡಿತು. ಅದರ ಮುಷ್ಟಿಯಲ್ಲಿ ಒದ್ದಾಡುತ್ತ ಮೊಲವು, “”ಯಾಕೆ ನನ್ನನ್ನು ಹಿಡಿದುಕೊಂಡಿರುವೆ? ಬಿಟ್ಟುಬಿಡು” ಎಂದು ಅಂಗಲಾಚಿ ಬೇಡಿಕೊಂಡಿತು. ತೋಳವು ಗಹಗಹಿಸಿ ನಕ್ಕಿತು. “”ಬಿಡುವುದಕ್ಕೆ ನಿನ್ನನ್ನು ಹಿಡಿದುಕೊಂಡಿದ್ದೇನಾ? ನಾಳೆ ಇಡೀ ಕಾಡಿನ ಪ್ರಾಣಿಗಳು ಒಂದುಗೂಡಿ ನನ್ನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಿವೆ. ಸಮಾರಂಭ ಸೊಗಸಾಗಿರಬೇಕು. ಅದಕ್ಕಾಗಿ ನಿನ್ನನ್ನು ನನ್ನ ಗವಿಗೆ ತೆಗೆದುಕೊಂಡು ಹೋಗಿ ಕೊಲ್ಲುತ್ತೇನೆ. ಮಾಂಸದಿಂದ ಬಗೆಬಗೆಯ ಪಕ್ವಾನ್ನಗಳನ್ನು ನುರಿತ ಬಾಣಸಿಗರು ತಯಾರಿಸುತ್ತಾರೆ” ಎಂದು ಹೇಳಿತು.

    ಮೊಲವು ಹೆದರಿಕೆಯನ್ನು ತೋರಿಸಿಕೊಳ್ಳದೆ ನಕ್ಕುಬಿಟ್ಟಿತು. “”ಅಯ್ಯೋ ತೋಳರಾಯಾ, ನಿನಗೆ ತಲೆಯಿದೆ, ಆದರೆ ಅದರ ಒಳಗೆ ಏನೂ ಇಲ್ಲದೆ ಟೊಳ್ಳಾಗಿದೆ ಎಂದು ಹಿಂದಿನಿಂದ ಎಲ್ಲ ಪ್ರಾಣಿಗಳೂ ಆಡಿಕೊಳ್ಳುವುದು ಇದಕ್ಕೇ. ಮೊಲದ ಮೈಯಲ್ಲಿ ಮಾಂಸವಿದೆ ಎಂದು ನಿನಗೆ ಯಾರು ಹೇಳಿದರು? ಕೇವಲ ಕೂದಲಿನ ಸುರುಳಿ ಬಿಟ್ಟರೆ ಬೇರೆ ಏನಾದರೂ ಇದ್ದರೆ ತಾನೆ? ನನ್ನನ್ನು ಕೊಂದು ತಯಾರಿಸಿದ ಖಾದ್ಯಗಳನ್ನು ತಿಂದರೆ ಕೂದಲು ತಿಂದವರ ಗಂಟಲಿನಲ್ಲಿ ಅಂಟಿಕೊಂಡು ಉಸಿರುಗಟ್ಟಿ ಸಾಯುತ್ತಾರೆ ಅಷ್ಟೆ” ಎಂದು ತೋಳವನ್ನು ಕಂಗೆಡಿಸಿಬಿಟ್ಟಿತು.

    ತೋಳವು ಚಿಂತೆಯಿಂದ, “”ಹೀಗೋ ವಿಷಯ? ನನಗೆ ಗೊತ್ತಿರಲಿಲ್ಲ. ನೀನು ಹೇಳಿದ್ದು ಒಳ್ಳೆಯದಾಯಿತು ಬಿಡು. ನಿನ್ನನ್ನು ಕೊಲ್ಲದೆ ಬಿಡುತ್ತೇನೆ. ಆದರೆ ನನಗೆ ಬೇರೆ ಒಂದು ಪ್ರಾಣಿ ಸುಲಭವಾಗಿ ಸಿಗುವಂತೆ ನೀನು ಮಾಡಬೇಕು. ಹಾಗಿದ್ದರೆ ಮಾತ್ರ ನಿನಗೆ ಜೀವದಾನ ಸಿಗುತ್ತದೆ” ಎಂದು ಕಟ್ಟುಪಾಡು ವಿಧಿಸಿತು.

    “”ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಅಲೆಯುವುದೇಕೆ? ಅಲ್ಲಿ ನೋಡು, ಎಷ್ಟು ದೊಡ್ಡ ನರಿ ಕುಳಿತುಕೊಂಡಿದೆ! ಹೋಗಿ ಹಿಡಿದುಕೋ. ಬಂದವರಿಗೆಲ್ಲ ಮನದಣಿಯೆ ಊಟ ಬಡಿಸಬಹುದು” ಎಂದು ಮೊಲ ನರಿಯನ್ನು ತೋರಿಸಿತು. ತೋಳಕ್ಕೆ ಹರ್ಷವಾಯಿತು. ಮೊಲವನ್ನು ಕೊಂದರೆ ಎಲ್ಲರಿಗೂ ತೊಂದರೆಯಾಗುತ್ತದೆ. ಅದರ ಬದಲು ನರಿಯನ್ನು ಹಿಡಿದರೆ ಒಳ್ಳೆಯ ಔತಣ ನೀಡಬಹುದು ಎಂದುಕೊಂಡು ಮೊಲವನ್ನು ಹೋಗಲು ಬಿಟ್ಟಿತು. ಸದ್ದು ಕೇಳಿಸದ ಹಾಗೆ ಹೋಗಿ ನರಿಯನ್ನು ಹಿಡಿದುಕೊಂಡಿತು.

Advertisement

    “”ಅಯ್ಯಯ್ಯೋ, ಯಾರದು ನನ್ನನ್ನು ಮುಟ್ಟಿ ಮೈಲಿಗೆ ಮಾಡಿರುವುದು? ಸ್ನಾನ ಮಾಡಿ ಬಂದು ದೇವರ ಧ್ಯಾನ ಮಾಡಲು ಕುಳಿತಿದ್ದೇನಷ್ಟೇ. ಪುನಃ ಸ್ನಾನ ಮಾಡದೆ ನನಗೆ ಇರಲು ಸಾಧ್ಯವಿಲ್ಲ” ಎಂದು ನರಿ ಚಡಪಡಿಸಿತು. ತೋಳ ಜೋರಾಗಿ ನಕ್ಕಿತು. “”ಸ್ನಾನ ಮಾಡುವೆಯಂತೆ ಒಂದೇ ಸಲ. ನಾನು ತೋಳರಾಯ. ನಾಳೆ ನನಗೆ ಹುಟ್ಟುಹಬ್ಬ ನಡೆಯುತ್ತದೆ. ಕಾಡಿನ ಪ್ರಾಣಿಗಳೆಲ್ಲವೂ ಉಡುಗೊರೆ ಹೊತ್ತುಕೊಂಡು ಅಭಿನಂದಿಸಲು ಬರುತ್ತವೆ. ಬಂದ ಅತಿಥಿಗಳನ್ನು ಸತ್ಕರಿಸದೆ ಕಳುಹಿಸಲು ಸಾಧ್ಯವಿಲ್ಲ. ನಿನ್ನನ್ನು ಕೊಂದು ಮಾಂಸದಿಂದ ಹಲವಾರು ತಿನಿಸುಗಳನ್ನು ತಯಾರಿಸಲು ಬಾಣಸಿಗರು ಕಾಯುತ್ತಿದ್ದಾರೆ” ಎಂದು ಅಟ್ಟಹಾಸ ಮಾಡಿತು.

    ನರಿ ಸ್ವಲ್ಪವೂ ಅಳುಕಿದಂತೆ ಕಾಣಲಿಲ್ಲ. “”ಪರಾಕೆ, ನಿಮ್ಮ ಹುಟ್ಟುಹಬ್ಬದ ಅತಿಥಿ ಸತ್ಕಾರಕ್ಕಾಗಿ ನನ್ನ ಸರ್ವಸ್ವವನ್ನೂ ಸಮರ್ಪಣೆ ಮಾಡುವುದಕ್ಕಿಂತ ದೊಡ್ಡ ಸಂತೋಷವಾದರೂ ನನಗೆ ಇನ್ನೇನು ಇರಲು ಸಾಧ್ಯ? ಆದರೆ ಈ ಸಂತೋಷದ ನಡುವೆಯೂ ಒಂದು ದುಃಖ ನನ್ನನ್ನು ಕಾಡುತ್ತಿದೆ” ಎಂದು ಗದ್ಗದ ಕಂಠದಿಂದ ಹೇಳಿತು. ತೋಳ ಹುಬ್ಬೇರಿಸಿತು. “”ಪುಣ್ಯದ ಕಾರ್ಯಕ್ಕಾಗಿ ಸಾಯುತ್ತಿದ್ದೀಯಾ. ಅದರಲ್ಲಿ ನಿನಗೆ ದುಃಖ ವಾದರೂ ಯಾಕೆ?” ಪ್ರಶ್ನಿಸಿತು. “”ಜೀಯಾ, ಇನ್ನೇನಿಲ್ಲ. ನಾನು ಒಂದು ಕಠಿಣವಾದ ಕಾಯಿಲೆಯಿಂದ ಬಳಲುತ್ತಿದ್ದೇನೆ. ರೋಗಗ್ರಸ್ಥವಾದ ಪ್ರಾಣಿಯ ಮಾಂಸದಿಂದ ರುಚಿಕರವಾದ ತಿಂಡಿಗಳನ್ನು ತಯಾರಿಸಲು ಸಾಧ್ಯವಿಲ್ಲ. ಅತಿಥಿಗಳಿಗೆ ಅದನ್ನು ಉಣಬಡಿಸಿದರೆ ಉಂಡವರು ಹರಸುವ ಬದಲು ಶಪಿಸಬಹುದಲ್ಲವೆ ಎಂಬ ಆತಂಕ ನನ್ನನ್ನು ಕಾಡುತ್ತಿದೆ. ಆದರೆ ನೀವು ನನಗಾಗಿ ಒಂದೇ ಒಂದು ಕೆಲಸ ಮಾಡಿದರೆ ಸಾಕು, ಅದರಿಂದ ನಾನು ಆರೋಗ್ಯ ಹೊಂದಿ ನಿಮಗಾಗಿ ದೇಹತ್ಯಾಗ ಮಾಡಲು ಸಿದ್ಧವಾಗಿದ್ದೇನೆ” ಎಂದಿತು ನರಿ.

    “”ಅದಕ್ಕೇನಂತೆ, ಒಂದಲ್ಲದಿದ್ದರೆ ಹತ್ತು ಕೆಲಸವನ್ನಾದರೂ ಮಾಡುತ್ತೇನೆ, ಆದರೆ ನಿನ್ನನ್ನು ಬಿಡುವುದಿಲ್ಲ. ಹೇಳು, ನಾನೇನು ಕೆಲಸ ಮಾಡಿದರೆ ನಿನ್ನ ಮಾಂಸ ಉಪಯೋಗಕ್ಕೆ ಯೋಗ್ಯವಾಗುತ್ತದೆ?” ತೋಳ ಕೇಳಿತು. “”ಇಲ್ಲಿಯೇ ಸ್ವಲ್ಪ$ಮುಂದೆ ಹೋದರೆ ಒಂದು ಹಳ್ಳಿಯಿದೆ. ನಾನು ಆಗಾಗ ಕೋಳಿಗಳನ್ನು ತರಲು ಅಲ್ಲಿಗೆ ಹೋಗುತ್ತೇನೆ. ಅಲ್ಲೊಬ್ಬ ರೈತ ಬೆಕ್ಕಿನ ಕಾಟ ತಾಳಲಾಗದೆ ಮೊಸರು ಕಡೆದಾಗ ಸಿಕ್ಕಿದ ಬೆಣ್ಣೆಯನ್ನೆಲ್ಲ ಒಂದು ಬಾವಿಯಲ್ಲಿ ತುಂಬಿಸಿಟ್ಟಿದ್ದಾನೆ. ತಾವು ನನ್ನೊಂದಿಗೆ ಬಂದು ಹಗ್ಗದ ಮೂಲಕ ಒಂದು ಬಿಂದಿಗೆಯನ್ನು ಬಾವಿಗೆ ಇಳಿಸಿ ಅದರ ತುಂಬ ಬೆಣ್ಣೆಯನ್ನು ಮೇಲಕ್ಕೆಳೆಯಬೇಕು. ಅದನ್ನು ನಾನು ತಿಂದ ಕೂಡಲೇ ಆರೋಗ್ಯವಂತನಾಗಿ ದಷ್ಟಪುಷ್ಟವಾಗುತ್ತೇನೆ. ನನ್ನ ಮಾಂಸ ಸಮೃದ್ಧಿಯಾಗಿ ಭೋಜನಕ್ಕೆ ದೊರೆಯುತ್ತದೆ” ಎಂದು ನರಿ ಹೇಳಿತು.

    ತೋಳವು ನರಿಯೊಂದಿಗೆ ಹಳ್ಳಿಗೆ ಹೋಯಿತು. ನರಿ ಬಾವಿಯನ್ನು ತೋರಿಸಿ ಒಳಗೆ ಬೆಣ್ಣೆಯಿರುವುದನ್ನು ಪರೀಕ್ಷಿಸಲು ಹೇಳಿತು. ತೋಳ ಬಾವಿಗೆ ಇಣುಕಿದಾಗ ಆಕಾಶದಲ್ಲಿರುವ ಹುಣ್ಣಿಮೆಯ ತುಂಬು ಚಂದ್ರನ ಪ್ರತಿಬಿಂಬ ನೀರಿನಲ್ಲಿ ಕಾಣಿಸಿತು. ಇದು ಒಳಗೆ ತುಂಬಿರುವ ಬೆಣ್ಣೆಯ ರಾಶಿಯೆಂದೇ ಹೆಡ್ಡ ತೋಳ ಭಾವಿಸಿತು. ಬಾವಿಯೊಳಗೆ ಬಿಂದಿಗೆ ಇಳಿಸಿ ಕಷ್ಟದಿಂದ ಮೇಲಕ್ಕೆಳೆಯಿತು. ನರಿ ಬಿಂದಿಗೆಯೊಳಗೆ ನೋಡಿ, “”ಬೆಣ್ಣೆ ಬಂದಿಲ್ಲ. ನೀವು ಹೀಗೆ ಮಾಡಿದರೆ ಬೆಣ್ಣೆ ಬರುವುದಿಲ್ಲ. ಬಿಂದಿಗೆಯಲ್ಲಿ ಕುಳಿತುಕೊಳ್ಳಿ, ನಾನು ಕೆಳಗಿಳಿಸುತ್ತೇನೆ. ಬಾವಿಯಿಂದ ಬಾಚಿ ಬಾಚಿ ಬೆಣ್ಣೆಯನ್ನು ತುಂಬಿಸಿ. ನಾನು ಮೊದಲು ಬೆಣ್ಣೆಯನ್ನು ಮೇಲಕ್ಕೆ ತರುತ್ತೇನೆ. ಬಳಿಕ ನಿಮ್ಮನ್ನು ಮೇಲಕ್ಕೆಳೆದುಕೊಳ್ಳುತ್ತೇನೆ” ಎಂದಿತು.

    “”ಹಾಗೆಯೇ ಆಗಲಿ” ಎಂದು ತೋಳವು ಬಿಂದಿಗೆಯೊಳಗೆ ಕುಳಿತುಕೊಂಡಿತು. ನರಿ ಹಗ್ಗವನ್ನು ಬಿಂದಿಗೆಯೊಂದಿಗೆ ಹಾಗೆಯೇ ಕೆಳಗಿಳಿಸಿತು. ಒಳಗೆ ಬೆಣ್ಣೆಯಿರಲಿಲ್ಲ. ಆದರೆ ತೋಳವು ಮುಳುಗಿ ಹೋಗುವಷ್ಟು ನೀರು ಇತ್ತು. ಹೊಟ್ಟೆ ತುಂಬ ನೀರು ಕುಡಿದು ಅದು ಸತ್ತೇಹೋಯಿತು.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next