ಗದಗ: ಹೆಚ್ಚುತ್ತಿರುವ ಅರಣ್ಯ ನಾಶ, ನಗರೀಕರಣದ ಪರಿಣಾಮ ಜಿಲ್ಲೆಯ ಗಜೇಂದ್ರಗಡ, ನರಗುಂದ ಸೇರಿ ಪಕ್ಕದ ಕೊಪ್ಪಳ ಭಾಗದಲ್ಲಿ ತೋಳ-ನಾಯಿ, ನರಿ-ನಾಯಿ ರೂಪಾಂತರಿ ಮಿಶ್ರ ತಳಿಗಳು ಮೊಟ್ಟ ಮೊದಲ ಬಾರಿ ಪತ್ತೆಯಾಗಿವೆ.
ಕೊಪ್ಪಳ ಹಾಗೂ ಗದಗ ಜಿಲ್ಲೆಯ ಗಡಿಭಾಗದಲ್ಲಿ ತೋಳ ಹಾಗೂ ನರಿಗಳ ಸಂಖ್ಯೆ ಹೆಚ್ಚಿವೆ. ಆಹಾರ ಅರಸಿ ಬರುಚ ಕುರಿಗಾಹಿಗಳ ಕುರಿಗಳ ಹಿಂಡಿನ ಮೇಲೆ ದಾಳಿ ಮಾಡುವುದು, ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ಧಾವಿಸುತ್ತಿರುವ ತೋಳ ಹಾಗೂ ನರಿಗಳು, ಅಲ್ಲಿರುವ ನಾಯಿಗಳ ಸಂಪರ್ಕಕ್ಕೆ ಬಂದು ಸಂತಾನೋತ್ಪತ್ತಿಯಲ್ಲಿ ತೊಡಗಿಕೊಳ್ಳುತ್ತಿರುವುದರಿಂದ ತೋಳ-ನಾಯಿ, ನರಿ-ನಾಯಿ ಮಿಶ್ರ ತಳಿಗಳ ಜನನಕ್ಕೆ ಕಾರಣವಾಗುತ್ತಿದೆ.
ತೋಳ-ನಾಯಿ, ನರಿ-ನಾಯಿ ಹೈಬ್ರಿಡ್ ತಳಿಗಳು ಹೆಚ್ಚಾಗಿ ಬೀದಿ ನಾಯಿಗಳ ಸ್ವರೂಪದಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಕಾಣಸಿಗುತ್ತಿವೆ. ಇದು ತೋಳ ಮತ್ತು ನರಿಯ ಮೂಲ ತಳಿಗಳ ಸಂತತಿ ಮರೆಯಾಗುವ ಅಪಾಯದಂಚಿನಲ್ಲಿವೆ ಎನ್ನುತ್ತಿದ್ದಾರೆ ವನ್ಯಜೀವಿ ಸಂರಕ್ಷಕರು.
ಖಾತ್ರಿಪಡಿಸಿದ ವನ್ಯಜೀವಿ ತಜ್ಞರು: ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಸಂಶೋಧಕರಾದ ಪಂಕಜ್ ಬಿಷ್ಣೋಯ್, ನೀಲಕಾಂತ್ ಬೋರಾ, ಕಾರ್ತಿಕ್ ಎನ್.ಜಂಡ್, ಸುಜಿತ್ ಎಸ್.ನರ್ವಾಡೆ ಅವರನ್ನೊಳಗೊಂಡ ತಂಡ 2023, ಅ.12ರಂದು ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಸಮೀಪ ಶಂಕಿತ ತೋಳ-ನಾಯಿ ಮಿಶ್ರತಳಿ ಇರುವುದನ್ನು ಚಿತ್ರ ಸಹಿತ ಖಾತ್ರಿಪಡಿಸಿದೆ. ಬೀದಿನಾಯಿಗಳು ಹುಲ್ಲುಗಾವಲಿನ ಪರಭಕ್ಷಕ ಭಾರತೀಯ ಬೂದು ತೋಳದೊಂದಿಗೆ ಹಾಗೂ ನರಿಯೊಂದಿಗೆ ಸಂತಾನೋತ್ಪತ್ತಿ ಮಾಡಿದಾಗ ಮಿಶ್ರ ತಳಿ ತೋಳ-ನಾಯಿ, ನರಿ-ನಾಯಿ ಉತ್ಪತ್ತಿಯಾಗುತ್ತವೆ. ಈ ಪರಸ್ಪರ ಕ್ರಿಯೆಗಳು ಜಾತಿಗಳ ನಡುವೆ ಜೀನ್ ವಿನಿಮಯಕ್ಕೆ ಕಾರಣವಾಗಬಹುದು ಹಾಗೂ ಇದು ಋಣಾತ್ಮಕವಾಗಿ ಪರಿಣಾಮ ಬೀರಬಹುದು ಎನ್ನುತ್ತಾರೆ ಡೆಕ್ಕನ್ ಕನ್ಸ್‌ರ್ವೇಶನ್ ಫೌಂಡೇಷನ್ ಸಂಸ್ಥಾಪಕ ಇಂದ್ರಜೀತ್ ಘೋರ್ಪಡೆ.
ನೋಡಲು ಹೇಗಿರುತ್ತವೆ?: ತೋಳ-ನಾಯಿ ಮಿಶ್ರತಳಿಯು ಬೂದು ಬಣ್ಣದ್ದಾಗಿದ್ದು, ಇತರ ನಾಯಿಗಳಿಗಿಂತ ನಯವಾದ ಮತ್ತು ತೆಳ್ಳಗಿನ ದೇಹ ಹೊಂದಿ ರುತ್ತವೆ. ಕಣ್ಣುಗಳು ಬಾದಾಮಿ ಆಕಾರದ ಲ್ಲಿದ್ದು, ತಲೆಯ ಗಾತ್ರ ಚಿಕ್ಕದಾಗಿರುತ್ತದೆ. ಎದೆ ಮತ್ತು ಪಾದಗಳು ತೋಳಗಳಂತೆ ಇರುತ್ತದೆ. ನರಿ-ನಾಯಿ ಮಿಶ್ರ ತಳಿಗಳು ನರಿ ಮಖದ ಹೋಲಿಕೆ ಕಂಡು ಬರುತ್ತವೆ.
ಕೌಜುಗ ಹಕ್ಕಿ ಸೇರಿ ನೆಲದಲ್ಲಿ ಮೊಟ್ಟೆ ಇಡುವ ಪಕ್ಷಿಗಳು ಸಂತತಿ ಕಡಿಮೆ ಯಾಗಲು ಕೂಡ ಮಿಶ್ರತಳಿಯ ನಾಯಿಗಳೇ ಕಾರಣ. ಬೀದಿ ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಮುಂದಾಗಬೇಕಿದೆ. ಅಂದಾಗ ಮಾತ್ರ ತೋಳ ಮತ್ತು ನರಿಯ ಮೂಲ ತಳಿಗಳ ಸಂತತಿ ಉಳಿಯಲು ಸಾಧ್ಯ.
●ಇಂದ್ರಜಿತ್ ಘೋರ್ಪಡೆ, ಡೆಕ್ಕನ್ ಕನ್ಸ್‌ರ್ವೇಷನ್ ಫೌಂಡೇಷನ್ ಸಂಸ್ಥಾಪಕ
–ಅರುಣಕುಮಾರ ಹಿರೇಮಠ