ವಾಡಿ: ಗಲೀಜು ಪರಿಸರ-ಕೊಳಚೆ ತುಂಬಿದ ಬಡಾವಣೆ, ಗಬ್ಬು ನಾರುವ ಬಹಿರ್ದೆಸೆ ತಾಣ. ಸ್ವಾತಂತ್ರ್ಯ ನಂತರವೂ ಮೀಸಲು ಮತಕ್ಷೇತ್ರಕ್ಕೆ ದೊರಕದ ಮೂಲ ಸೌಲಭ್ಯ. ಇಂತ ದುಸ್ಥಿತಿ ಸ್ಥಳೀಯ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದೆ.
ಇಂತಹ ಅವ್ಯವಸ್ಥೆ ಇರುವುದು ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದಲ್ಲಿ. ಒಟ್ಟು 31 ಗ್ರಾಪಂ ಸದಸ್ಯರು ಇಲ್ಲಿದ್ದು, ತಾಲೂಕಿನ ಅತಿದೊಡ್ಡ ಗ್ರಾಮ ಪಂಚಾಯಿತಿ ಇದಾಗಿದೆ. ಗ್ರಾಮ ಪಂಚಾಯಿತಿ ಕಚೇರಿ ಆವರಣ ಹಸಿರು ವಾತಾವರಣದಿಂದ ಕೂಡಿದ್ದು, ನೋಡುಗರ ಮನಸೂರೆಗೊಳ್ಳುತ್ತದೆ. ಆದರೆ ದಲಿತರ ಓಣಿಯತ್ತ ಹೆಜ್ಜೆ ಹಾಕಿದಾಗ ನರಕ ದರ್ಶನವಾಗುತ್ತದೆ. ಈ ಭಾಗದಲ್ಲಿ ಓಡಾಡುವಾಗ ಮೂಗು ಮುಚ್ಚಿಕೊಂಡೇ ಇರುವಂತ ಪರಿಸ್ಥಿತಿ ಇಲ್ಲಿದೆ.
ಅಧಿಕಾರಿಗಳು ಹಾಗೂ ಗ್ರಾಪಂ ಆಡಳಿತ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಾರೆ. ಗ್ರಾಮದ ರಸ್ತೆಯುದ್ದಕ್ಕೂ ನಿರ್ಮಿಸಲಾಗಿರುವ ಎಡ ಮತ್ತು ಬಲ ಭಾಗದ ಸಿಸಿ ಚರಂಡಿ ಸಂಪೂರ್ಣ ಕಸದಿಂದ ತುಂಬಿ, ಕೊಳೆ ಹೊತ್ತು ನಿಂತಿವೆ. ಮನೆಯಂಗಳದಲ್ಲಿ ಬೀಡುಬಿಟ್ಟ ಹಂದಿಗಳ ಹಿಂಡು ಕಸವನ್ನು ಹೆಕ್ಕಿ ಆಹಾರ ಹುಡುಕುತ್ತ ದುರ್ಗಂಧ ಹಬ್ಬಿಸುತ್ತಿವೆ. ರಸ್ತೆಗಳಲ್ಲಿ ಚರಂಡಿ ನೀರು ಹರಿದಾಡುತ್ತಿದೆ. ಕುಡಿಯುವ ಸಾರ್ವಜನಿಕ ನೀರಿನ ತಾಣಗಳು ಅಸ್ವಚ್ಚತೆಯಿಂದ ಕೂಡಿವೆ. ಹೋಗಲು ರಸ್ತೆಯಿಲ್ಲದ ಮತ್ತು ನೀರಿನ ಸೌಲಭ್ಯ ವಂಚಿತ ಮಹಿಳಾ ಶೌಚಾಲಯ ಗಬ್ಬೆದ್ದು ನಾರುತ್ತಿದೆ.
ವೈಯಕ್ತಿಕ ಶೌಚಾಲಯ ಸೌಲಭ್ಯ ಈ ಕುಟುಂಬಗಳಿಗೆ ತಲುಪಿವೆಯಾದರೂ ಬಳಕೆಗೆ ಬಾರದಷ್ಟು ಕಳಪೆಯಾಗಿವೆ. ಹೀಗಾಗಿ ಗ್ರಾಮಸ್ಥರು ಬಯಲು ಶೌಚಾಲಯವನ್ನೇ ನೆಚ್ಚಿಕೊಂಡಿದ್ದಾರೆ. ಮಳೆಯಾದರೆ ಮನೆಗಳಿಗೆ ನೀರು ನುಗ್ಗಿ ಬದುಕು ಬೀದಿಗೆ ಬೀಳುತ್ತದೆ. ರಸ್ತೆ, ಚರಂಡಿ, ಶೌಚಾಲಯ, ಕುಡಿಯಲು ಶುದ್ಧ ನೀರು ಗಗನಕುಸುಮವಾಗಿದೆ. ಇವೆಲ್ಲ ಅವ್ಯವಸ್ಥೆ ಸರಿಪಡಿಸಬೇಕು ಎಂದು ಬಡಾವಣೆ ನಿವಾಸಿಗಳು ಕೋರಿದ್ದಾರೆ.
ಗ್ರಾಮದ ವಿವಿಧ ಬಡಾವಣೆಗಳಲ್ಲಿ ಚರಂಡಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಪರಿಶಿಷ್ಟರ ಓಣಿ ಮಾರ್ಗದ ರಸ್ತೆ ಬದಿಯ ಚರಂಡಿಗಳು ಕಸದಿಂದ ತುಂಬಿದ್ದರೆ ಸ್ಥಳ ಪರಿಶೀಲನೆ ನಡೆಸಿ ಸ್ವತ್ಛತೆಗೆ ಆದ್ಯತೆ ನೀಡುತ್ತೇನೆ. ಪರಿಶಿಷ್ಟರ ಬಡಾವಣೆಯ ಸಾರ್ವಜನಿಕ ಮಹಿಳಾ ಶೌಚಾಲಯ ಸೇರಿದಂತೆ ಇತರ ಬಡಾವಣೆಯ ಶೌಚಾಲಯಗಳನ್ನು ದುರಸ್ತಿ ಮಾಡಿಸಿ ನೀರಿನ ಸೌಲಭ್ಯ ಒದಗಿಸಲಾಗುವುದು.
-ದೇವಕಿ ನಾರಾಯಣ ಮಿನಿಗಿಲೇರ ಗ್ರಾಪಂ ಅಧ್ಯಕ್ಷೆ, ರಾವೂರ
ಗ್ರಾಮದ ಪರಿಶಿಷ್ಟರ ಬಡಾವಣೆ ಮಾರ್ಗದಲ್ಲಿನ ಚರಂಡಿಗಳು ಅಸ್ವತ್ಛತೆಯಿಂದ ಕೂಡಿವೆ. ಚರಂಡಿ ಪಕ್ಕದಲ್ಲಿಯೇ ಓಣಿ ಜನರು ತಿಪ್ಪೆಗಳನ್ನು ನಿರ್ಮಿಸಿಕೊಂಡಿದ್ದರಿಂದ ಕಸವೆಲ್ಲ ಚರಂಡಿಗೆ ಬೀಳುತ್ತಿದೆ. ಎಷ್ಟು ಸಾರಿ ತಿಳಿವಳಿಕೆ ನೀಡಿದರೂ ನಿವಾಸಿಗಳು ಜಾಗೃತರಾಗುತ್ತಿಲ್ಲ. ಪದೇಪದೆ ಚರಂಡಿ ಸ್ವತ್ಛತೆ ಮಾಡಿಸಿದರೂ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಚರಂಡಿಗಳ ಮೇಲೆ ಮೇಲ್ಚಾವಣಿ (ಹಾಸುಗಲ್ಲು) ಹಾಕಲು ಅನುದಾನ ಮೀಸಲಿರಿಸಿದ್ದೇವೆ. ದಲಿರ ಓಣಿಯನ್ನು ನಾವು ನಿರ್ಲಕ್ಷ್ಯ ಮಾಡಿಲ್ಲ. ಶೌಚಾಲಯ ಮಾತ್ರ ಬಳಕೆಗಿಲ್ಲ. ಕೆಲವೇ ದಿನಗಳಲ್ಲಿ ಅದನ್ನು ಸರಿಪಡಿಸುತ್ತೇವೆ.
-ಕಾವೇರಿ ರಾಠೊಡ, ಪಿಡಿಒ, ರಾವೂರ ಗ್ರಾಪಂ
-ಮಡಿವಾಳಪ್ಪ ಹೇರೂರ