Advertisement

ಉಕ್ಕಿನ ಸೇತುವೆ ಸ್ವಪ್ರತಿಷ್ಠೆಯಿಲ್ಲ

06:40 AM Jan 05, 2019 | |

ಬೆಂಗಳೂರು: ಬಳ್ಳಾರಿ ರಸ್ತೆಯಲ್ಲಿನ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ಸದುದ್ದೇಶದಿಂದ ಉಕ್ಕಿನ ಸೇತುವೆ ವಿಚಾರ ಮರು ಪ್ರಸ್ತಾಪಿಸಲಾಗಿದ್ದು, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿದ ನಂತರವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

Advertisement

ಮಲ್ಲೇಶ್ವರದ ಐಪಿಪಿ ಕೇಂದ್ರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವೇಶ್ವರ ವೃತ್ತದಿಂದ ಹೆಬ್ಟಾಳದವರೆಗೆ ಉಕ್ಕಿನ ಸೇತುವೆ ನಿರ್ಮಾಣದಿಂದ ವಿಮಾನ ನಿಲ್ದಾಣ ರಸ್ತೆಯಲ್ಲಿನ ಸಂಚಾರ ದಟ್ಟಣೆಗೆ ಪರಿಹಾರ ಒದಗಿಸುವುದು ನಮ್ಮ ಉದ್ದೇಶ. ಇಲ್ಲಿ ನಾವು ಯಾರ ವಿರುದ್ಧವೋ ಹಠ ಸಾಧಿಸುತ್ತಿಲ್ಲ ಅಥವಾ ಕ್ಕಿನ ಸೇರುವೆ ಪ್ರಸ್ತಾಪ ಸ್ವಪ್ರತಿಷ್ಠೆಯೂ ಅಲ್ಲ ಎಂದು ಹೇಳಿದರು.
 
“ಉಕ್ಕಿನ ಸೇತುವೆ ನಿರ್ಮಾಣ ವಿಚಾರ ಪ್ರಸ್ತಾಪಿಸಿದಾಗ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಆದರೆ, ಸೇತುವೆ ನಿರ್ಮಾಣದಿಂದ ಆಗುವ ಪ್ರಯೋಜನದ ಬಗ್ಗೆ ಕೂಡ ಎಲ್ಲರೂ ಚಿಂತಿಸಬೇಕಿದೆ. ಯೋಜನೆಯಲ್ಲಿ ಭ್ರಷ್ಟಾಚಾರವಾಗದಂತೆ ನಾವು ಎಚ್ಚರ ವಹಿಸುತ್ತೇವೆ. ಜತೆಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೂ ಯೋಜನೆಯ ಮಹತ್ವವನ್ನು ಮನವರಿಕೆ ಮಾಡಿಕೊಡುತ್ತೇವೆ,’ ಎಂದರು.

ಮರಗಳ ಸ್ಥಳಾಂತರ: ಉಕ್ಕಿನ ಸೇತುವೆ ಯೋಜನೆಗಾಗಿ 800 ಮರಗಳನ್ನು ತೆರವು ಮಾಡಬೇಕಿದೆ ಎಂದು ಅಂದಾಜಿಸಲಾಗಿದೆ. ಆ ಪೈಕಿ 5ರಿಂದ 10 ವರ್ಷ ಪ್ರಯಾದ ಮರಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು. ಉಳಿದ ಮರಗಳನ್ನು ಮಾತ್ರ ಕತ್ತರಿಸಲಾಗುವುದು. ಅಲ್ಲದೆ, ಮೇಲ್ಸೇತುವೆ ಕಾಮಗಾರಿಗೆ ಹಸಿರು ನ್ಯಾಯಾಧೀಕರಣದ ಅನುಮತಿ ಪಡೆಯಲು ಬೇಕಾಗುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ನಗರದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಗಳಿಂದ ಹಸಿರು ಪ್ರಮಾಣ ಕಡಿಮೆಯಾಗುತ್ತಿದೆ ಎಂಬ ಮಾತುಗಳಿವೆ. ಆ ಹಿನ್ನೆಲೆಯಲ್ಲಿ ನಗರದಲ್ಲಿ ಎಲ್ಲೆಲ್ಲಿ ಅವಕಾಶವಿದೆಯೋ ಅಲ್ಲೆಲ್ಲಾ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ. ಮಳೆಗಾಲದಲ್ಲಿ ಈ ಬಾರಿ 1 ಕೋಟಿ ಸಸಿಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ. ಆ ಮೂಲಕ ಅಭಿವೃದ್ಧಿ ಕಾಮಗಾರಿಗಳಿಂದ ಆಗುವ ಅರಣ್ಯ ನಾಶವನ್ನು ಸರಿದೂಗಿಸಲಾಗುವುದು ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ಮುಖ್ಯಮಂತ್ರಿ ನಿಲುವು ತಿಳಿಸಲಿ: ಬೆಂಗಳೂರು: ಬಸವೇಶ್ವರ ವೃತ್ತದಿಂದ ಹೆಬ್ಟಾಳದವರೆಗೆ ಉಕ್ಕಿನ ಸೇತುವೆ ನಿರ್ಮಿಸುವ ಯೋಜನೆ ಪುನರ್‌ಜಾರಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಸಹಮತವಿದೆಯೇ ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು.

Advertisement

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ಕಿನ ಸೇತುವೆ ನಿರ್ಮಾಣ ಯೋಜನೆಗೆ ಕುಮಾರಸ್ವಾಮಿಯವರು ಈ ಹಿಂದೆ ವಿರೋಧ ವ್ಯಕ್ತಪಡಿಸಿದ್ದರು. ಕಿಕ್‌ಬ್ಯಾಗ್‌ ಬಗ್ಗೆ ಸ್ವತಃ ಅವರೇ ಆರೋಪ ಮಾಡಿದ್ದರು. ಅಂದು ಯೋಜನೆಯನ್ನು ವಿರೋಧಿಸಿದ್ದ ಕುಮಾರಸ್ವಾಮಿಯವರಿಗೆ ಮತ್ತೆ ಉಕ್ಕಿನ ಸೇತುವೆ ಯೋಜನೆ ಪುನರ್‌ಜಾರಿಗೆ ಸಹಮತವಿದೆಯೇ ಎಂಬ ಬಗ್ಗೆ  ಸ್ಪಷ್ಟನೆ ನೀಡಬೇಕು. ಮುಖ್ಯಮಂತ್ರಿಗಳ ಸ್ಪಷ್ಟನೆ ಬಳಿಕ ಮತ್ತಷ್ಟು ಮಾಹಿತಿ ಕೋರಲಾಗುವುದು ಎಂದು ಹೇಳಿದರು.

ಉಕ್ಕಿನ ಸೇತುವೆ ಕುರಿತಂತೆ ಯಾರೂ ಸತ್ಯ ಹರಿಶ್ಚಂದ್ರನ ಮಕ್ಕಳಲ್ಲ ಎಂಬುದಾಗಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಾಗಾದರೆ ಸತ್ಯ ಹರಿಶ್ಚಂದ್ರನ ಮಕ್ಕಳಲ್ಲದವರು ಯೋಜನೆ ಜಾರಿಗೆ ತರಬಹುದೇ ಎಂಬ ಬಗ್ಗೆ ಸ್ಪಷ್ಟನೆ ನೀಡಿಬೇಕು ಎಂದು ತಿಳಿಸಿದರು.

ಉಕ್ಕಿನ ಸೇತುವೆ ಯೋಜನೆ ಪುನರ್‌ಜಾರಿ ಕುರಿತು ಪ್ರತಿಕ್ರಿಯಿಸಿದ ಸಚಿವ ಎಚ್‌.ಡಿ.ರೇವಣ್ಣ, ನನಗೆ ಸ್ಟೀಲ್‌ ಬ್ರಿಡ್ಜ್ ಖಾತೆ ನೀಡಿಲ್ಲ. ರಸ್ತೆ ಮಾಡುವ ಖಾತೆ ನೀಡಿದ್ದಾರೆ. ರಸ್ತೆ ಬಗ್ಗೆ ಕೇಳಿದರೆ ಹೇಳಬಹುದು. ಅದನ್ನು ಬಿಟ್ಟು ಸರ್ವೇ ನಂಬರ್‌ಗಳ ಬಗ್ಗೆ ಕೇಳಿದರೆ ಕಷ್ಟ. ಸಂಬಂಧಪಟ್ಟ ಸಚಿವರು ಚರ್ಚಿಸಿ, ಸಾರ್ವಜನಿಕರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಈ ಹಿಂದೆ ತರಾತುರಿಯಲ್ಲಿ ಉಕ್ಕಿನ ಸೇತುವೆ ನಿರ್ಮಾಣ ಯೋಜನೆ ಕೈಗೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಎಲ್ಲ ಸಿದ್ಧತೆ ಮಾಡಿಕೊಂಡು ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next