Advertisement
2021 ರಲ್ಲಿ ಆಯೋಜನೆ ಮಾಡಿದ್ದ ಟಿಇಟಿ ಪರೀಕ್ಷೆಯನ್ನು ಒಟ್ಟು 2,31,886 ಅಭ್ಯರ್ಥಿಗಳು ಬರೆದಿದ್ದರು. ಇದರಲ್ಲಿ ಶೇಕಡಾ 19.43 ರಷ್ಟು ಅಭ್ಯರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದರು. ಹೆದರಿದ ಸರಕಾರ ಆಹ್ವಾನ ಮಾಡಿದ್ದ ಶಿಕ್ಷಕರ ಹುದ್ದೆಗೆ ಶೇಕಡಾ 19.43 ರಷ್ಟು ಅಭ್ಯರ್ಥಿಗಳು ಮಾತ್ರ ಆಯ್ಕೆಗೊಂಡು ಉಳಿದವರು ಅನುತ್ತೀರ್ಣರಾಗಿದ್ದರು.
Related Articles
Advertisement
ಪ್ರಸ್ತುತ ರಾಜ್ಯ ಸರ್ಕಾರ ರಾಜ್ಯದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿದರೂ ಇನ್ನೂ ಖಾಲಿ ಹುದ್ದೆಗಳು ಉಳಿಯುತ್ತವೆ. ಶಿಕ್ಷಣ ಇಲಾಖೆ ನೇಮಕಾತಿ ನಿರಂತರವಾಗಿರುತ್ತದೆ ಎಂದು ಸರ್ಕಾರ ಘೋಷಣೆ ಮಾಡಿದೆ. ಶಿಕ್ಷಕರ ಅರ್ಹತಾ ಪರೀಕ್ಷೆ ಟಿಇಟಿ ನಡೆಸಲು ಮಾತ್ರ ಆಸಕ್ತಿ ತೋರುತ್ತಿಲ್ಲ. ಇದರಿಂದ ಪ್ರತಿ ವರ್ಷ ಖಾಲಿ ಹುದ್ದೆಗಳ ಸಂಖ್ಯೆ ಏರುತ್ತಲೇ ಇದೆ.
ಪ್ರಸ್ತುತ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕಳೆದ ತಿಂಗಳು ಸಿಇಟಿ ಪರೀಕ್ಷೆ ನಡೆಸಿದ್ದು, ಇದುವರೆಗೂ ಅದರ ಫಲಿತಾಂಶ ಪ್ರಕಟವಾಗಿಲ್ಲ. ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟವಾದ ನಂತರ ಪುನಃ ಎಷ್ಟು ಹುದ್ದೆಗಳು ಖಾಲಿ ಉಳಿಯಲಿವೆ ಎಂಬ ಮಾಹಿತಿ ಲಭ್ಯವಾಗುತ್ತದೆ.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೂಡಲೇ ಶಿಕ್ಷಕರ ಅರ್ಹತಾ ಪರೀಕ್ಷೆ ಟಿಇಟಿ ನಡೆಸುವ ಮೂಲಕ ಹಳೆಯ ಮತ್ತು ನೂತನವಾಗಿ ಬಿ ಎಡ್ ಡಿ ಎಡ್ ಮುಗಿಸಿದ ಅಭ್ಯರ್ಥಿಗಳಿಗೆ ಸಿಇಟಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕೆನ್ನುವುದು ಡಿಎಡ್ ಮತ್ತು ಬಿಎಡ್ ವಿದ್ಯಾರ್ಥಿಗಳ ಆಗ್ರಹವಾಗಿದೆ.
—
ರಾಜ್ಯದಲ್ಲಿ ಖಾಲಿ ಇರುವ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧಪಟ್ಟಂತೆ ಶಿಕ್ಷಣ ಇಲಾಖೆ ಅವೈಜ್ಞಾನಿಕ ನಿಯಮಗಳನ್ನು ಅನುಸರಿಸದೆ ಪ್ರತಿ ವರ್ಷ ಟಿಇಟಿ ಪರೀಕ್ಷೆ ನಡೆಸುವ ಮೂಲಕ ಪಿಇಟಿಯನ್ನು ನಡೆಸಬೇಕು. ಈ ಸಂದರ್ಭದಲ್ಲಿ ಎಲ್ಲಾ ಅಭ್ಯರ್ಥಿಗಳಿಗೂ ನೇಮಕಾತಿಯಾಗಲು ಅನುಕೂಲವಾಗುತ್ತದೆ. ಕಳೆದ ವರ್ಷ ಟಿಇಟಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಪೈಕಿ ಶೇ.19.43 ರಷ್ಟು ಅಭ್ಯರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಇನ್ನುಳಿದವರು ಅನುತ್ತೀರ್ಣರಾಗಿದ್ದು ಪುನಃ ಈಗ ಟಿಇಟಿ ಪರೀಕ್ಷೆ ನಡೆಸಿ ಅನುತ್ತೀರ್ಣರಾದವರಿಗೂ ಅವಕಾಶವನ್ನು ಕಲ್ಪಿಸಬೇಕು. ಪ್ರಸ್ತುತ ಶಿಕ್ಷಕರ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಇದರಲ್ಲಿ ಹುದ್ದೆ ಸಿಗದವರು ಸಹ ಟಿಇಟಿ ಪರೀಕ್ಷೆ ಬರೆದು ಮುಂದಿನ ಸಿಇಟಿ ಪರೀಕ್ಷೆಗೆ ಅರ್ಹತೆ ಪಡೆಯಬಹುದಾಗಿದೆ. ಲಕ್ಷಾಂತರ ಅಭ್ಯರ್ಥಿಗಳು ಹಗಲು ರಾತ್ರಿ ಟಿಇಟಿ ಪರೀಕ್ಷೆಗಾಗಿ ತಯಾರಿ ನಡೆಸಲು ರಾಜ್ಯ ಸರ್ಕಾರ ಶೀಘ್ರವೇ ಟಿಇಟಿ ಪರೀಕ್ಷೆ ನಡೆಸಬೇಕೆಂದು ಬಿ ಎಡ್ ತೇರ್ಗಡೆಯಾಗಿರುವ ಸೋಮನಾಥ್ ಉದಯವಾಣಿಗೆ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು.
—
ಈಗಾಗಲೇ ರಾಜ್ಯದಲ್ಲಿ ಖಾಲಿ ಇರುವ 15,000 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಪ್ರಕ್ರಿಯೆ ನಡೆದಿದೆ. ಸಿಇಟಿ ಪರೀಕ್ಷೆಯ ಫಲಿತಾಂಶ ಇನ್ನೂ ಪ್ರಕಟಗೊಂಡಿಲ್ಲ. ಫಲಿತಾಂಶ ಪ್ರಕಟಗೊಂಡ ನಂತರ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಪುನಃ ಟಿಇಟಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅಲ್ಲಿಯವರೆಗೂ ಅನುದಾನಿತ ಶಾಲೆಗಳಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಯ ಸಿಇಟಿ ಪರೀಕ್ಷೆಯನ್ನು ಸರಕಾರ ನಡೆಸದಿರಲು ಚಿಂತನೆ ನಡೆಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಉದಯವಾಣಿಯೊಂದಿಗೆ ಮಾತನಾಡಿ ತಿಳಿಸಿದ್ದಾರೆ.
– ಕೆ. ನಿಂಗಜ್ಜ