Advertisement

ರಾಜೀನಾಮೆ ಪತ್ರ ಕಿಸೆಯಲ್ಲಿಟ್ಟುಕೊಂಡೇ ಬಂದಿದ್ದ ಸ್ಪೀಕರ್‌!

09:03 AM Jul 25, 2019 | Lakshmi GovindaRaj |

ವಿಧಾನಸಭೆ: ರಾಜ್ಯ ರಾಜಕೀಯ ವಿದ್ಯಮಾನಗಳ ವಿಚಿತ್ರ ಬೆಳವಣಿಗೆ ಹಿನ್ನೆಲೆಯಲ್ಲಿ ತಮ್ಮ ಮೇಲೆ ಬರುತ್ತಿರುವ ಆರೋಪಗಳ ಸುರಿಮಳೆ ಹಿನ್ನೆಲೆಯಲ್ಲಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ರಾಜೀನಾಮೆ ಪತ್ರ ಬರೆದಿಟ್ಟುಕೊಂಡೇ ಸದನಕ್ಕೆ ಬಂದಿದ್ದರು. ಒಂದೊಮ್ಮೆ ಮಂಗಳವಾರ ಸದನದಲ್ಲಿ ವಿಶ್ವಾಸಮತವನ್ನು ನಿರ್ಣಯ ಮತಕ್ಕೆ ಹಾಕದಿದ್ದರೆ ಅಪವಾದ ಹೊತ್ತುಕೊಳ್ಳುವುದು ಬೇಡ ಎಂಬ ಕಾರಣಕ್ಕೆ ರಾಜೀನಾಮೆ ಪತ್ರ ಬರೆದಿಟ್ಟುಕೊಂಡೇ ಬಂದಿದ್ದರು.

Advertisement

ಸದನದಲ್ಲಿ ಚರ್ಚೆ ಸಂದರ್ಭದಲ್ಲಿ ಎಚ್‌.ವಿಶ್ವನಾಥ್‌ ರಾಜೀನಾಮೆ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿದಾಗ ಮಧ್ಯಪ್ರವೇಶಿಸಿ, “ರಾಜೀನಾಮೆ ಪತ್ರ ಯಾವ ನಮೂನೆಯಲ್ಲಿರಬೇಕು ಎಂಬ ಶಿಷ್ಟಾಚಾರ ಗೊತ್ತಿಲ್ಲದವರು ನನ್ನ ಬಗ್ಗೆ ಮಾತನಾಡುತ್ತಾರೆ. ಸ್ಪೀಕರ್‌ ಬಗ್ಗೆ ಮಾತನಾಡಿದರೆ ಕಂಟೆಂಪ್ಟ್ ಆಪ್‌ ಹೌಸ್‌ ಎಂಬುದನ್ನೂ ತಿಳಿದುಕೊಳ್ಳುವಷ್ಟು ಜ್ಞಾನ ಇಲ್ಲ’ ಎಂದು ಬೇಸರ ಹೊರ ಹಾಕಿದರು.

“ನಾನು ಈ ಸ್ಥಾನದಲ್ಲಿ ಶಾಶ್ವತವಾಗಿ ಇರುವು ದಿಲ್ಲ. ನನಗೂ ಮನಸ್ಸು ಇದೆ. ದೇವರಾಜ ಅರಸು ಅವರ ನೆರಳಲ್ಲಿ ಆಶ್ರಯ ಪಡೆದು ರಾಜಕಾರಣಕ್ಕೆ ಬಂದವನು. ನನಗೂ ನೈತಿಕತೆಯಿದೆ. ಇವತ್ತೂ ಸಹ ನಾನು, ರಾಜೀನಾಮೆ ಪತ್ರ ಬರೆದುಕೊಂಡು ಬಂದಿದ್ದೆ’ ಎಂದು ಪ್ರತಿಪಕ್ಷ ನಾಯಕರಿಗೂ ಅದನ್ನು ತೋರಿಸುವಂತೆ ಸಿಬ್ಬಂದಿಗೆ ನೀಡಿದರು.

ಸ್ಪೀಕರ್‌ ನಡೆ: ಸದನದಲ್ಲಿ ವಿಶ್ವಾಸಮತ ನಿರ್ಣಯ ಪ್ರಸ್ತಾಪವಾದ ನಂತರ ಸ್ಪೀಕರ್‌ ಅವರು ಪ್ರತಿ ಹಂತದಲ್ಲೂ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಪಕ್ಷಾತೀತವಾಗಿ ಎಲ್ಲ ಪಕ್ಷಗಳ ನಾಯಕರ ವಿರುದ್ಧವೂ ಅಸಮಾಧಾನ ಹೊರಹಾಕುತ್ತಲೇ ಬಂದರು.

ಸದನ ಕಲಾಪ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು, ರಾಜ್ಯಪಾಲರ ಪತ್ರ, ಶಾಸಕರ ರಾಜೀನಾಮೆ ವಿಚಾರದಲ್ಲಿ ಸಿದ್ದರಾಮಯ್ಯ, ಎಚ್‌.ಕೆ.ಪಾಟೀಲ್‌, ಕೃಷ್ಣ ಬೈರೇಗೌಡರು ಕ್ರಿಯಾಲೋಪ ಸೇರಿ ಆಕ್ಷೇಪ ವ್ಯಕ್ತಪಡಿಸಿದಾಗ ನಿಯಮಾವಳಿ ಪ್ರಕಾರವೇ ಕ್ರಮ ಕೈಗೊಂಡಿದ್ದರು. ಅದು ಆಡಳಿತಾರೂಢ ಪಕ್ಷಕ್ಕೆ ಪರೋಕ್ಷ ಸಹಕಾರ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಿ ದರೂ ತಲೆ ಕೆಡಿಸಿಕೊಳ್ಳದೆ ನಾನು ಸಂವಿಧಾನದ ಆಶಯ ಕಾಪಾಡಲು ಇಲ್ಲಿದ್ದೇನೆ.

Advertisement

ನಾನು ನೀಡುವ ತೀರ್ಪು ಇತಿಹಾಸದಲ್ಲಿ ದಾಖಲಾಗುತ್ತದೆ ಎಂದು ಖಡಕ್‌ ಆಗಿ ಹೇಳಿದ್ದರು. ಒಮ್ಮೆ ಸದನದಲ್ಲಿ ಭಾವುಕರಾದ ಅವರು, “ನಾನು ಏನು, ಎಷ್ಟು ಕೋಟಿ ಆಸ್ತಿ ಮಾಡಿದ್ದೇನೆ, ನನ್ನ ಮನೆ ಹೇಗಿದೆ? ಬಂದು ನೋಡಿ. ನನ್ನ ಬಗ್ಗೆ ಮಾತನಾಡುವವರು ಹೊಟ್ಟೆಗೆ ಏನು ತಿನ್ನುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಸೋಮವಾರವೂ ವಿಶ್ವಾಸಮತ ನಿರ್ಣಯ ಕುರಿತ ಚರ್ಚೆ ಪೂರ್ಣಗೊಳ್ಳದೆ ಮತಕ್ಕೆ ಹಾಕದ ಸ್ಥಿತಿ ನಿರ್ಮಾಣವಾದಾಗ ಅಂತಿಮವಾಗಿ ತಾವೇ ಮಂಗಳವಾರ ಸಂಜೆ 6 ಗಂಟೆಯೊಳಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸುತ್ತೇನೆ ಎಂದು ಗುಡುವು ನೀಡಿದ್ದರು. ಅದರಂತೆ ಮಂಗಳವಾರ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next