Advertisement
ಗಡಿ ವಿವಾದವನ್ನು ಮತ್ತೆ ಕೆಣಕಿರುವ ಶಿವಸೇನೆ ಜತೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಅಧಿಕಾರ ಹಂಚಿಕೊಂಡಿರುವುದರಿಂದ ಕನ್ನಡಿಗರು ಸಹಜವಾಗಿಯೇ ಕಾಂಗ್ರೆಸ್‌ನತ್ತ ಕೆಂಗಣ್ಣು ಬೀರುವಂತಾಗಿದೆ. ಬೆಳಗಾವಿ ಕುರಿತು ಮುಖ್ಯಮಂತ್ರಿಗಳ ಹೇಳಿಕೆ ನಂತರ ಕಾಂಗ್ರೆಸ್ ಪಕ್ಷದ ಅದರಲ್ಲೂ ಬೆಳಗಾವಿ ಜಿಲ್ಲೆಯ ನಾಯಕರ ಸ್ಪಷ್ಟವಾದ ನಿಲುವು ಇದುವರೆಗೆ ಹೊರಬಾರದಿರುವುದು ಸಹ ಅನುಮಾನಗಳಿಗೆ ಅವಕಾಶ ಮಾಡಿಕೊಟ್ಟಿದೆ.
Related Articles
Advertisement
ಮಹಾರಾಷ್ಟ್ರದ ವಿರುದ್ಧ ಅಥವಾ ಗಡಿ ವಿವಾದದ ವಿರುದ್ಧ ಮಾತನಾಡಿದರೆ ಮರಾಠಿ ಭಾಷಿಕ ಮತಗಳು ತಪ್ಪುತ್ತವೆ ಎಂಬ ಭಯದಿಂದ ಕಾಂಗ್ರೆಸ್ ಹಾಗೂ ಬಿಜೆಪಿ ರಾಜಕಾರಣಿಗಳು ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿಯೇ ನಡೆದುಕೊಂಡು ಬಂದಿದ್ದಾರೆ. ಈ ವಿಷಯದಲ್ಲಿ ಸದಾ ಅಂತರವನ್ನು ಕಾಯ್ದಕೊಳ್ಳುತ್ತ ಬಂದಿವೆ. ಇದೇ ಕಾರಣದಿಂದ ಗಡಿ ಭಾಗದ ಕನ್ನಡಿಗರು ಹೋರಾಟದಲ್ಲಿ ಹಿನ್ನಡೆ ಅನುಭವಿಸುತ್ತ ಬಂದಿದ್ದಾರೆ.
ಜಿಲ್ಲೆಯ ರಾಜಕಾರಣಿಗಳು ರಾಜ್ಯದ ಜನರ ಪರ ಗಟ್ಟಿಯಾಗಿ ನಿಂತಿದ್ದರೆ ಇವತ್ತು ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನೆ ಇರುತ್ತಲೇ ಇರಲಿಲ್ಲ. ಆದರೆ ಜಿಲ್ಲೆಯ ರಾಜಕಾರಣಿಗಳ ಪರೋಕ್ಷ ನೆರವು ಎಂಇಎಸ್ ಹಾಗೂ ಶಿವಸೇನೆಗೆ ಗಡಿ ವಿವಾದದ ಹೆಸರಲ್ಲಿ ರಾಜಕಾರಣ ಮುಂದುವರಿಸುವಂತೆ ಮಾಡಿದೆ. ಇದರಿಂದ ಸಾಕಷ್ಟು ಆರ್ಥಿಕವಾಗಿ ಲಾಭ ಉಂಡಿರುವ ಎಂಇಎಸ್ ನಾಯಕರು ವಿವಾದ ಜೀವಂತ ಇರುವಂತೆ ಮಾಡಿದ್ದಾರೆ.
ಶಾಸಕ ಸತೀಶ ಏನಂತಾರೆ?: ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಬೆಳಗಾವಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರಬಹುದು. ಹಾಗೆಂದ ಮಾತ್ರಕ್ಕೆ ಬೆಳಗಾವಿ ಅವರದಾಗುವುದಿಲ್ಲ. ಗಡಿ ವಿವಾದ ನ್ಯಾಯಾಲಯದಲ್ಲಿದೆ. ಅದರ ತೀರ್ಪು ಬರುವವರೆಗೆ ಎಲ್ಲರೂ ಸುಮ್ಮನಿರಬೇಕು. ಈಗ ಮುಖ್ಯಮಂತ್ರಿಗಳಿಂದ ಬಂದಿರುವ ಹೇಳಿಕೆ ಕೇವಲ ಸ್ವಾರ್ಥ ರಾಜಕೀಯ ಉದ್ದೇಶದಿಂದ ನೀಡಿದ ಹೇಳಿಕೆ. ಇದಕ್ಕೆ ಜನರು ಕಿವಿಗೊಡಬಾರದು ಎಂಬುದು ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಹೇಳಿಕೆ.
ಮಹಾರಾಷ್ಟ್ರಕ್ಕಿಂತ ಕರ್ನಾಟಕದಲ್ಲೇ ನೀವು ಚೆನ್ನಾಗಿದ್ದೀರಿ. ಇಲ್ಲಿಗೆ ಬರಬೇಕು ಎನ್ನುವುದನ್ನು ಮರೆತುಬಿಡಿ. ಅದರ ಬದಲು ಕರ್ನಾಟಕದ ಜನರ ಜತೆ ಕೂಡಿ ಬಾಳುವುದನ್ನು ರೂಢಿಸಿಕೊಳ್ಳಿ ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಬೆಳಗಾವಿಯ ಎಂಇಎಸ್ ಮುಖಂಡರಿಗೆ ಬುದ್ಧಿವಾದ ಹೇಳಿ ಕಳಿಸಿದ್ದರು. ಈ ಮಾತನ್ನು ಒಮ್ಮೆ ನೆನಪು ಮಾಡಿಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ ಸತೀಶ ಜಾರಕಿಹೊಳಿ.
ಉರಿಯುವ ಬೆಂಕಿಗೆ ತುಪ್ಪ: ಒಂದು ಕಡೆ ಶಿವಸೇನೆ ಹಾಗೂ ಎಂಇಎಸ್ ನಾಯಕರು ಗಡಿ ವಿವಾದ ತೆಗೆದು ಮರಾಠಿ ಭಾಷಿಕರನ್ನು ಪ್ರಚೋ ದನೆ ಮಾಡುತ್ತಿದ್ದರೆ ಇನ್ನೊಂದೆಡೆ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಬೆಳಗಾವಿ ಗಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಅವರನ್ನು ಸೋಲಿಸಲು ಮರಾಠಿಗರು ಒಂದಾಗಬೇಕೆಂದು ಹೇಳಿರುವುದು ನಾನಾ ರೀತಿಯ ವಿಶ್ಲೇಷಣೆಗೆ ಕಾರಣವಾಗಿದೆ. ರಮೇಶ ಹೇಳಿಕೆಯನ್ನೇ ಅವಕಾಶವಾದಿ ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳಲು ಮುಂದಾಗಿರುವ ಎಂಇಎಸ್ ನಾಯಕರು ಗಡಿ ಭಾಗದಲ್ಲಿ ಭಾವನಾತ್ಮಕ ವಿಷಯದ ಮೂಲಕ ಮರಾಠಿಗರನ್ನು ಒಂದು ಮಾಡುತ್ತಿದ್ದಾರೆ.
ರಾಜಕೀಯಕ್ಕಾಗಿ ರಮೇಶ “ಮರಾಠಿ ಪ್ರೀತಿ’: ವ್ಯಂಗ್ಯವಿಜಯಪುರ: “ಮರಾಠರ ಪರ ಮಾತಾಡದಿದ್ದರೆ ಚುನಾವಣೆಯಲ್ಲಿ ಮಣ್ಣು ಮುಕ್ಕುವ ಭೀತಿಯಿಂದ ಮನಸ್ಸಿನಿಂದ ಅಲ್ಲದಿದ್ದರೂ ಮತಕ್ಕಾಗಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮರಾಠರ ಪರ ಮಾತನಾಡುತ್ತಾರೆ’ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ದೂರಿದರು. ಸುದ್ದಿಗಾರರ ಜತೆ ಮಾತನಾಡಿ, ರಮೇಶ ಜಾರಕಿಹೊಳಿ ಅವರ ಮರಾಠರ ಪರ ಹೇಳಿಕೆ ರಾಜಕೀಯ ಅನಿವಾರ್ಯತೆಯಿಂದ ಕೂಡಿದೆ. ಆದರೆ, ಇತರೆಡೆಗಿಂತ ಬೆಳಗಾವಿ ರಾಜಕಾರಣವೇ ಬೇರೆ ಇದೆ ಎಂದರು. ಮಹಾರಾಷ್ಟ್ರ ರಾಜ್ಯ ಗಡಿ ಕ್ಯಾತೆ ವಿಚಾರ ವಿವಾದ ಮಾಡುವುದನ್ನು ಬಿಟ್ಟು ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಮರಾಠರು ಬೆಳಗಾವಿ ತಮ್ಮದು ಎಂದ ಮಾತ್ರಕ್ಕೆ ಕನ್ನಡಿಗರಾದ ನಾವು ಬಿಡೋಕಾಗುತ್ತಾ? ಇನ್ನು 5 ವರ್ಷ ಮಾತ್ರವಲ್ಲ, ಯಾರೇ ಹುಟ್ಟಿದರೂ ಬೆಳಗಾವಿಯನ್ನು ಕರ್ನಾಟಕದಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಕನ್ನಡಿಗರೇನು ಕೈಯಲ್ಲಿ ಬಳೆ ತೊಟ್ಟುಕೊಂಡಿಲ್ಲ, ತಾಕತ್ತಿದ್ದರೆ ಬೆಳಗಾವಿಯನ್ನು ಪಡೆಯಲಿ ನೋಡೋಣ ಎಂದರು. ಗಡಿ ವಿವಾದ ಇದುವರೆಗೆ ಜೀವಂತವಾಗಿರಲು ನಮ್ಮ ರಾಜಕಾರಣಿಗಳೇ ಕಾರಣ. ವಿವಾದ ಎದ್ದು ವಾರದ ಮೇಲಾಯಿತು. ಪ್ರತಿಭಟನೆಗಳು ನಡೆದವು. ಆದರೆ ಇವತ್ತಿನವರೆಗೂ ಜಿಲ್ಲೆಯ ಒಬ್ಬ ಶಾಸಕ ಹಾಗೂ ಸಂಸದರು ನಮ್ಮ ಪರ ದನಿ ಎತ್ತಲಿಲ್ಲ. ಮಹಾರಾಷ್ಟ್ರದ ನಿಲುವು ಖಂಡಿಸಲಿಲ್ಲ. ಗಡಿ ವಿಷಯವನ್ನು ತಮ್ಮ ರಾಜಕಾರಣಕ್ಕೆ ಬಳಸಿಕೊಂಡರು. ಇದು ಕನ್ನಡಿಗರ ದೊಡ್ಡ ದುರ್ದೈವ.
-ಗಣೇಶ ರೋಕಡೆ, ಕರವೇ ಮುಖಂಡ ಗಡಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟ. ಬೆಳಗಾವಿ ಯಾವತ್ತಿದ್ದರೂ ಕರ್ನಾಟಕದ ಮುಖ್ಯಭಾಗ. ವಿವಾದದ ಹೇಳಿಕೆಯಿಂದ ಯಾವುದೂ ಬದಲಾಗುವುದಿಲ್ಲ. ಇದರಿಂದ ಜನರಿಗೆ ತೊಂದರೆ. ಗಡಿ ವಿವಾದ ಸರ್ವೋತ್ಛ ನ್ಯಾಯಾಲಯದಲ್ಲಿರುವಾಗ ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ತಟಸ್ಥರಾಗಿರಬೇಕು. ಎರಡೂ ರಾಜ್ಯಗಳ ಕಡೆಯಿಂದ ಕಠಿಣ ನಿರ್ಧಾರವಾಗಬೇಕು.
-ಸತೀಶ ಜಾರಕಿಹೊಳಿ, ಕಾಂಗ್ರೆಸ್ ಶಾಸಕ * ಕೇಶವ ಆದಿ