Advertisement

Mangaluru: ಕಾಂಗ್ರೆಸ್‌ ಕಚೇರಿಯಲ್ಲಿ ನಾಯಕರ ಹೊಕೈ; ಆಗಿದ್ದೇನು?

11:58 PM Dec 02, 2024 | Team Udayavani |

ಮಂಗಳೂರು: ಮಂಗಳೂರಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆಯು ತ್ತಿದ್ದ ಸಭೆ ವೇಳೆ ಹಿರಿಯ ಮುಖಂಡರ ಸಮಕ್ಷಮದಲ್ಲೇ ಗ್ರಾ.ಪಂ. ಉಪಚುನಾ ವಣೆಯಲ್ಲಿ ಗೆದ್ದ ಸದಸ್ಯರನ್ನು ಸಮ್ಮಾನಿಸುವ ವಿಚಾರದಲ್ಲಿ ಹೊಕೈ ನಡೆದಿದೆ.

Advertisement

ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಹಾಗೂ ಬಂಟ್ವಾಳದ ಕಾಂಗ್ರೆಸ್‌ ಮುಖಂಡ ತುಂಬೆ ಚಂದ್ರಪ್ರಕಾಶ್‌ ಶೆಟ್ಟಿ ಅವರ ಮಧ್ಯೆ ಹೊಕೈ, ತಳ್ಳಾಟ ನಡೆದಿದೆ ಎನ್ನಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಸಚಿವ ಬಿ.ರಮಾನಾಥ ರೈ ಅವರಿದ್ದ ಸಭೆಯಲ್ಲೇ ಈ ವಿದ್ಯಮಾನ ಸಂಭವಿಸಿದೆ.

ಆಗಿದ್ದೇನು?
ಮುಂಬರುವ ಜಿಪಂ, ತಾಪಂ ಚುನಾವಣೆಗೆ ಸಿದ್ಧತೆ ಹಾಗೂ ನೂತನವಾಗಿ ಗ್ರಾ.ಪಂಗೆ ಆಯ್ಕೆಯಾದ ಕಾಂಗ್ರೆಸ್‌ ಬೆಂಬಲಿತ ಸದಸ್ಯರಿಗೆ ಸಮ್ಮಾನ ಹಾಗೂ ಸ್ವಂತ ಕಾಂಗ್ರೆಸ್‌ ಕಟ್ಟಡ ನಿರ್ಮಾಣ ಕುರಿತ ಸಭೆ ಆಯೋಜಿಸಲಾಗಿತ್ತು.

ಸಭೆಯಲ್ಲಿ ಹಾಜರಿದ್ದ ಕಾಂಗ್ರೆಸ್‌ ಮುಖಂಡ ಕೆ.ಜಯಪ್ರಕಾಶ್‌ ಹೆಗ್ಡೆ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಬೆಂಗಳೂರಿಗೆ ತೆರಳಬೇಕಿದ್ದರಿಂದ ಕಾರ್ಯಕ್ರಮವನ್ನು ಬೇಗ ಮುಗಿಸುವಂತೆ ಕೇಳಿಕೊಂಡಿದ್ದರು. ಹಾಗಾಗಿ ನೂತನ ಗ್ರಾ.ಪಂ. ಸದಸ್ಯರನ್ನು ಕುರ್ಚಿ ಇರಿಸಿ ವೇದಿಕೆಯಲ್ಲಿ ಸಮ್ಮಾನಿಸುವ ಬದಲು ನಿಲ್ಲಿಸಿ ಅಭಿನಂದಿಸೋಣ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು ಹೇಳಿದ್ದಾರೆ. ಇದಕ್ಕೆ ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್‌ ಶೆಟ್ಟಿ ಆಕ್ಷೇಪಿಸಿದ್ದು, ಅಭಿನಂದನೆ ಸರಿಯಾಗಿಯೇ ನಡೆಯಲಿ ಎಂದಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿ ವಾಗ್ವಾದ ಬೆಳೆದಿದ್ದು, ಪರಿಸ್ಥಿತಿ ಕೈ ಮೀರುವ ಹಂತ ತಲುಪಿತು.

ಘಟನೆ ನಡೆಯುವ ವೇಳೆ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜ, ಕೆಪಿಸಿಸಿ ಮುಖಂಡರಾದ ಇನಾಯತ್‌ ಅಲಿ, ಮಿಥುನ್‌ ರೈ ಮುಂತಾದವರೂ ಇದ್ದರು. ಬಳಿಕ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ನೇತೃತ್ವದಲ್ಲಿ ರಾಜಿ ಮಾತುಕತೆ ನಡೆದಿದ್ದು, ಅವರು ಕಾರ್ಯಕರ್ತರು ಹಾಗೂ ನಾಯಕರನ್ನು ಸಮಾಧಾನ ಪಡಿಸಿದ್ದಾರೆ.

Advertisement

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಪ್ರಕಾಶ್‌ ಶೆಟ್ಟಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆ ಆಗಬೇಕು. ಹೈಕಮಾಂಡ್‌ ಈ ಬಗ್ಗೆ ಕ್ರಮ ಕೈಗೊಂಡು ಬದಲಾವಣೆ ಮಾಡಿದರೆ ಪಕ್ಷ ಉಳಿದೀತು ಎಂದೂ ಹೇಳಿಕೆ ನೀಡಿದರು. ಯಾರ ಮೇಲೂ ಹಲ್ಲೆ ಆಗಿಲ್ಲ, ಈಗ ಎಲ್ಲವೂ ಸರಿಯಾಗಿದೆ ಎಂದೂ ಇದೇ ವೇಳೆ ಅವರು ಸ್ಪಷ್ಟಪಡಿಸಿದರು.

ಕಾರ್ಯಕರ್ತರ ಒಳಗಿನ ವಿಷಯವಿದು. ಭಿನ್ನಾಭಿಪ್ರಾಯ ಬರಬಾರದು, ಅಹಿತಕರ ಘಟನೆ ನಡೆಯಬಾರದು ಎನ್ನುವ ದೃಷ್ಟಿಯಿಂದ ಬಗೆಹರಿಸಿಕೊಂಡಿದ್ದೇವೆ. ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಹರೀಶ್‌ ಕುಮಾರ್‌ ತಿಳಿಸಿದ್ದಾರೆ. ಈ ಕುರಿತ ಮಾಹಿತಿಯನ್ನು ರಾಜ್ಯ ನಾಯಕರು ಪಡೆದು ಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next