Advertisement

ಹೆಣ್ಣೆಂಬ ಸೀಕ್ರೆಟ್‌ ಡೈರಿ: ಪುಟಗಳ ಓದುವ ಪುಣ್ಯಾತ್ಮ ಬೇಕೆನಗೆ…

12:45 PM Aug 16, 2017 | |

“ಯತ್ರ ನಾರ್ಯಂತು ಪೂಜ್ಯಂತೆ ರಮಂತೇ ತತ್ರ ದೇವತಃ’ ಎಂಬ ಮಾತನ್ನು ಹುಟ್ಟಿದಾರಭ್ಯ ಕೇಳಿಕೊಂಡು ಬಂದಿದ್ದೇವೆ. ಇದರ ಅರ್ಥವಿಷ್ಟೇ “ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆಂದು. ಹಾಗಂತ ಹೆಣ್ಣನ್ನು ಊದುಬತ್ತಿ -ಕರ್ಪೂರ ಹಚ್ಚಿ ಪೂಜೆ ಮಾಡುತ್ತಾ ಕುಳಿತಿರಬೇಕೆಂದಿಲ್ಲ. ಹೆಣ್ಣಿನ ಭಾವನೆಗಳನ್ನು ಗೌರವಿಸಿ ಸ್ಪಂದಿಸಿದರೆ ಅದೇ ಪೂಜೆಯೆಂಬುದು ನಿಜವಾದ ಅರ್ಥ…

Advertisement

ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಅಂದರೆ ಮೀನಿನ ಹೆಜ್ಜೆಯನ್ನು ಹುಡುಕುವಂತೆ ಎಂಬ ಮಾತು ಬಹುಕಾಲದಿಂದ ಲೋಕಾರೂಢಿಯಲ್ಲಿದೆ. ಆದರೆ, ಈ ಗಾದೆಯನ್ನು ಮಾಡಿದವರು ಹೆಣ್ಣಿನ ಮನಸ್ಸನ್ನು ಅದೆಷ್ಟು ಅರಿತುಕೊಳ್ಳಲು ಪ್ರಯತ್ನಿಸಿದರೋ ನಾ ಕಾಣೆ. ಆದರೆ, ಒಂದು ಸಂಶೋಧನೆಯ ಪ್ರಕಾರ ಹೆಣ್ಣು ತನ್ನ ಮನಸ್ಸಲ್ಲಿರುವ ಭಾವನೆಯನ್ನು ಸುಲಭವಾಗಿ ಬೇರೊಬ್ಬರೊಡನೆ ಹಂಚಿಕೊಳ್ಳದಿರುವುದೇ ಈ ಮಾತಿನ ಹುಟ್ಟಿಗೆ ಕಾರಣವಿರಬಹುದು ಎನ್ನಲಾಗಿದೆ. ಹೆಣ್ಣು ಎಲ್ಲವನ್ನೂ ಎಲ್ಲರೊಡನೆಯೂ ಹೇಳಿಕೊಳ್ಳುವುದಿಲ್ಲ. ತನ್ನ ಮನಸ್ಸನ್ನು ಎಲ್ಲರೊಡನೆಯೂ ತೆರೆದುಕೊಳ್ಳುವುದಿಲ್ಲ. ಅವರದೆಷ್ಟೇ ಆತ್ಮೀಯರಾದರೂ ಅವಳು ಅಂತರವನ್ನು ಕಾದುಕೊಂಡೇ ಇರುತ್ತಾಳೆ. ಆದರೂ ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅವಳನ್ನು ಮನಸ್ಸಿಂದ ಪ್ರೀತಿಸಿ, ಪ್ರೀತಿಯಲ್ಲಿ ನಿಮ್ಮ ಬದ್ಧತೆಯನ್ನು ತೋರಿಸಿದರೆ ನಿಮ್ಮ ಮೇಲೆ ನಂಬಿಕೆ ಹುಟ್ಟಿ ಅವಳು ತನ್ನ ಮನಸ್ಸನ್ನು ಕ್ರಮೇಣ ತೆರೆದುಕೊಳ್ಳುತ್ತಾಳೆ.

ಪ್ರತೀ ಹೆಣ್ಣು ಋತುಚಕ್ರದ ಸಮಯದಲ್ಲಿ ದೇಹದಲ್ಲಾಗುವ ಏರುಪೇರಿನಿಂದ ದೈಹಿಕವಾಗಿಯೂ ಮಾನಸಿಕವಾಗಿಯೂ ಕಿರಿಕಿರಿಯನ್ನು ಅನುಭವಿಸುತ್ತಿರುತ್ತಾಳೆ. ಸಿಟ್ಟು, ಸಿಡುಕು, ಏಕಾಂಗಿತನ, ಸುಖಾಸುಮ್ಮನೇ ಉಕ್ಕಿ ಬರುವ ಅಳು, ಹೀಗೆ ಹೇಳಿಕೊಳ್ಳಲಾಗದಂತಹ ಭಾವತೀವ್ರತೆಯಿಂದ ತೊಳಲಾಡುತ್ತಿರುತ್ತಾಳೆ. ಆ ಸಮಯದಲ್ಲಿ ಅವಳನ್ನು ಅರ್ಥ ಮಾಡಿಕೊಂಡು, ಸುಮ್ಮನೆ ಕೆದಕದೆ ಅವಳನ್ನು ಅವಳ ಪಾಡಿಗೆ ಬಿಟ್ಟರೆ ಒಳ್ಳೆಯದು. ಇನ್ನೂ ಕೆಲವು ಹೆಣ್ಣು ಮಕ್ಕಳಿಗೆ ತಮ್ಮ ಕೆಲಸದ ಒತ್ತಡದಿಂದ ಅವರ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳಲು ಸಮಯವೇ ಇರುವುದಿಲ್ಲ. ಮನೆಯವರೆಲ್ಲರ ಆಹಾರ- ಆರೋಗ್ಯವೆಂದು ಹಗಲಿರುಳು ಮುತುವರ್ಜಿ ವಹಿಸುವ ಆ ಹೆಣ್ಣಿನ ಬಗ್ಗೆಯೂ ಸ್ವಲ್ಪ ಯೋಚಿಸಿ. ಅದರಲ್ಲೂ ಮಧ್ಯವಯಸ್ಸಿನ, ಮುಟ್ಟು ನಿಲ್ಲಲು ಬಂದಿರುವ ಹೆಣ್ಣಿನ ಆರೋಗ್ಯವು ತುಂಬಾ ಸೂಕ್ಷ್ಮವಾಗಿರುತ್ತದೆ. ಅವಳನ್ನು ಕಾಲಕಾಲಕ್ಕೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ಮಾಡಿಸಿ. ಎಲ್ಲರನ್ನೂ ಆರೈಕೆ ಮಾಡುವ ಅವಳ ಬಗ್ಗೆ ನಿಮಗಿರುವ ಕಾಳಜಿಯನ್ನು ತೋರ್ಪಡಿಸಿ. ಇಷ್ಟಕ್ಕೇ ಸಂತುಷ್ಟಳಾಗುವ ಅವಳಿಗೆ ಮತ್ಯಾವ ಪಾರಿತೋಷಕವೂ ಬೇಡ.

ಪ್ರತೀ ಹೆಣ್ಣಿಗೂ ತನ್ನ ಮನೆಯವರು, ಅವರು ಹೆತ್ತವರೇ ಆಗಿರಲಿ, ಮಕ್ಕಳೇ ಆಗಿರಲಿ, ಪತಿಯೇ ಆಗಿರಲಿ, ತನ್ನೊಡನೆ ಹೆಚ್ಚಿನ ಸಮಯ ಕಳೆಯಬೇಕು ಎಂಬ ಆಸೆ ಇದ್ದೇ ಇರುತ್ತದೆ. ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳಿಗೆ ತನ್ನ ಪತಿಯಾದವನು ತನ್ನ ಅಡುಗೆಯನ್ನು ಹೊಗಳಬೇಕು, ತನ್ನ ವೇಷಭೂಷಣವನ್ನು ಗಮನಿಸಿ ಅದರಲ್ಲಿ ಆಸಕ್ತಿ ತೋರಿಸಬೇಕು… ಹೀಗೆ ಹಲವಾರು ಆಸೆಗಳಿರುತ್ತವೆ. ಆದರೆ, ಅದನ್ನು ಅರ್ಥ ಮಾಡಿಕೊಳ್ಳದೇ ಅವಳೆಡೆಗೆ ಗಮನವೀಯದೇ ಇದ್ದರೆ ಅವಳು ಚಿಪೊ³ಳಗಿನ ಮುತ್ತಾಗಿ ತನ್ನ ಭಾವನೆಯನ್ನೆಲ್ಲಾ ಮನಸ್ಸಲ್ಲೇ ಹುದುಗಿಸಿಟ್ಟುಕೊಳ್ಳುತ್ತಾಳೆ. ಇದರಿಂದ ಅವಳಲ್ಲಿ ಅವಳಿಗರಿವಲ್ಲದೇ ಏಕಾಂಗಿತನ, ಅನ್ಯಮನಸ್ಕತೆ, ಕೀಳರಿಮೆಯ ಭಾವಗಳು ಮನೆ ಮಾಡಬಹುದು. ಇದೇ ಹತಾಶ ಭಾವ ಮುಂದುವರಿದು ಅನಾವಶ್ಯಕ ಜಗಳ- ಮನಸ್ತಾಪಗಳುಂಟಾಗಿ ಕುಟುಂಬದಲ್ಲಿ ಸಾಮರಸ್ಯವಿಲ್ಲದೇ ಹೋಗಬಹುದು. ಇದರಿಂದ ನಿಮ್ಮ ತಾಯಿ, ಪತ್ನಿ, ಸಹೋದರಿ, ಮಗಳು ಎಲ್ಲರ ಜೊತೆಗೂ ಸಮಯ ಕಳೆಯಿರಿ, ಆ ಹೆಣ್ಣು ಮಕ್ಕಳಿಗೆ ಅವರ ಪ್ರಾಮುಖ್ಯತೆಯನ್ನು ಮನವರಿಕೆ ಮಾಡಿಕೊಡಿ. 

ಹೆಣ್ಣನ್ನು ಹೆಂಗರುಳಿನಿಂದ ನೋಡುವ ಪ್ರಯತ್ನ ಮಾಡಿ, ಆಗ ಅವಳ ಮನಸ್ಸು ಮೀನಿನ ಹೆಜ್ಜೆಯಾ? ನದಿಯ ಮೂಲವಾ? ಅಂತ ನಿಮಗೇ ಅರಿವಾಗುತ್ತದೆ.

Advertisement

ಶುಭಶ್ರೀ ಭಟ್ಟ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next