Advertisement

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

01:53 AM Dec 18, 2024 | Team Udayavani |

ರಾಜ್ಯದ ಹೈನುಗಾರರು ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಪೂರೈಕೆ ಮಾಡುವ ಪ್ರತೀ ಲೀಟರ್‌ ಹಾಲಿಗೆ ಕ್ಷೀರಧಾರೆ ಯೋಜನೆಯಡಿ ಸರಕಾರ ನೀಡುತ್ತಿರುವ 5 ರೂ. ಪ್ರೋತ್ಸಾಹಧನವನ್ನು ಕಳೆದ ಆರು ತಿಂಗಳುಗಳಿಂದ ಬಾಕಿ ಉಳಿಸಿಕೊಂಡಿದೆ. ಕೆಲವು ಜಿಲ್ಲೆಗಳಲ್ಲಂತೂ ಕಳೆದ 7-9 ತಿಂಗಳುಗಳ ಅವಧಿಯಿಂದ ಹೈನುಗಾರರ ಖಾತೆಗೆ ಸರಕಾರದಿಂದ ಪ್ರೋತ್ಸಾಹಧನ ಜಮೆಯಾಗಿಲ್ಲ. ಈ ಸಂಬಂಧ ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅಗತ್ಯ ಅನುದಾನವನ್ನು ಬಿಡುಗಡೆ ಮಾಡದಿರುವುದರಿಂದಾಗಿ ಹೈನುಗಾರರಿಗೆ ಪ್ರೋತ್ಸಾಹಧನ ನೀಡುವಲ್ಲಿ ವಿಳಂಬವಾಗಿದೆ ಎಂದು ಸ್ವತಃ ಪಶುಸಂಗೋಪನ ಸಚಿವರು ಹೇಳಿಕೆ ನೀಡಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದದ್ದೇ ಆದಲ್ಲಿ ಮುಂದಿನ ಬೇಸಿಗೆ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟಾರೆ ಹಾಲಿನ ಉತ್ಪಾದನೆಯ ಮೇಲೆ ತೀವ್ರ ತೆರನಾದ ಪರಿಣಾಮ ಬೀರುವ ಸಾಧ್ಯತೆ ಇದೆ.

Advertisement

2008ರಲ್ಲಿ ಅಂದಿನ ಸರಕಾರ ಮೊದಲ ಬಾರಿಗೆ ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸ್ಥಳೀಯ ಹಾಲು ಉತ್ಪಾದಕ ಸಂಘಗಳಿಗೆ ಹೈನುಗಾರರು ಪೂರೈಸುವ ಪ್ರತೀ ಲೀಟರ್‌ ಹಾಲಿಗೆ 2 ರೂ. ಪ್ರೋತ್ಸಾಹಧನ ನೀಡುವ ಯೋಜನೆಯನ್ನು ಜಾರಿಗೆ ತಂದಿತ್ತು. 5 ವರ್ಷಗಳ ಬಳಿಕ ಈ ಮೊತ್ತವನ್ನು 4 ರೂ.ಗೆ ಹೆಚ್ಚಿಸಲಾಗಿದ್ದು, 2016ರಿಂದ 5 ರೂ.ಗೆ ಹೆಚ್ಚಿಸಲಾಯಿತು. ಸರಕಾರದ ಈ ಯೋಜನೆಯಿಂದ ಹೈನುಗಾರರಿಗೆ ಒಂದಿಷ್ಟು ಪ್ರಯೋಜನ ಲಭಿಸಿತಲ್ಲದೆ, ಹೈನುಗಾರಿಕೆಯನ್ನು ಉಪವೃತ್ತಿಯನ್ನಾಗಿಸಿಕೊಳ್ಳಲು ರೈತರು ಆಸಕ್ತಿ ತೋರಿದರು. ಇದರ ಪರಿಣಾಮ ಕರ್ನಾಟಕವು ಹಾಲು ಉತ್ಪಾದನೆಯಲ್ಲಿ ದೇಶದಲ್ಲಿಯೇ ಮುಂಚೂಣಿಯ ರಾಜ್ಯಗಳಲ್ಲಿ ಒಂದಾಗಿ ಹೊರಹೊಮ್ಮಲು ಸಾಧ್ಯವಾಯಿತು. ಆದರೆ ಕಳೆದ ಕೆಲವು ವರ್ಷಗಳಿಂದ ಸರಕಾರದ ನಿರ್ಲಕ್ಷ್ಯ, ದನಕರುಗಳನ್ನು ವಿವಿಧ ಕಾಯಿಲೆಗಳು ಬಾಧಿಸತೊಡಗಿರುವುದು, ಪಶು ಆಹಾರ, ಮೇವು ಧಾರಣೆಯಲ್ಲಿನ ಹೆಚ್ಚಳ ಮತ್ತು ಅಭಾವ, ಬರ ಮತ್ತಿತರ ಕಾರಣಗಳಿಂದಾಗಿ ರಾಜ್ಯದ ಒಟ್ಟಾರೆ ಹಾಲಿನ ಉತ್ಪಾದನೆ ಪ್ರಮಾಣ ಭಾರೀ ಇಳಿಕೆ ಕಾಣುವಂತಾಗಿದೆ. ಮಳೆಗಾಲದ ಅವಧಿಯನ್ನು ಹೊರತುಪಡಿಸಿದಂತೆ ಉಳಿದ ಅವಧಿಯಲ್ಲಂತೂ ಹಾಲು ಉತ್ಪಾದನೆ ಮತ್ತಷ್ಟು ಕುಸಿಯುತ್ತಲೇ ಸಾಗಿದೆ. ಇದರಿಂದಾಗಿ ರೈತರು ಭಾರೀ ಸಂಖ್ಯೆಯಲ್ಲಿ ಹೈನುಗಾರಿಕೆಯಿಂದ ವಿಮುಖರಾಗಿದ್ದಾರೆ.

ಹಾಲು ಖರೀದಿ ಮತ್ತು ಮಾರಾಟ, ಬೆಲೆ ನಿಗದಿ ಮತ್ತಿತರ ವಿಷಯಗಳಲ್ಲಿನ ಸರಕಾರದ ಬಿಗಿ ನಿಯಮಾವಳಿಯ ಪರಿಣಾಮ ಹಾಲು ಉತ್ಪಾದಕ ಸಂಘಗಳು ಮತ್ತು ಒಕ್ಕೂಟಗಳು ತೀವ್ರ ಸಂಕಷ್ಟದಲ್ಲಿವೆ. ಇತರೆಡೆಗೆ ಹೋಲಿಸಿದರೆ ರಾಜ್ಯದಲ್ಲಿ ಹಾಲಿಗೆ ಕನಿಷ್ಠ ಬೆಲೆ ಇದ್ದು, ಇದು ಕೂಡ ಹೈನುಗಾರರ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ. ಇನ್ನು ಪ್ರೋತ್ಸಾಹಧನ ನೀಡುವಲ್ಲೂ ಸರಕಾರ ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವುದು ಹೈನುಗಾರರನ್ನು ಹತಾಶರನ್ನಾಗಿಸಿದೆ.

ರಾಜ್ಯದಲ್ಲಿ ಈಗಾಗಲೇ ಹೈನುಗಾರಿಕೆ ನೆಲಕಚ್ಚುವ ಹಾದಿ ಹಿಡಿದಿದೆ. ಹೈನುಗಾರರು ಮತ್ತು ಹಾಲು ಉತ್ಪಾದಕ ಸಂಘಗಳು ಎದುರಿಸುತ್ತಿರುವ ಸಮಸ್ಯೆಗಳ ಸಂಪೂರ್ಣ ಅರಿವಿದ್ದರೂ ಸರಕಾರ ಮಾತ್ರ ಮೌನವಾಗಿರುವುದು ವಿಪರ್ಯಾಸ. ಹೈನುಗಾರರನ್ನು ಹಾಲಿ ಸಂಕಷ್ಟದಿಂದ ಪಾರು ಮಾಡಲು ಸರಕಾರ ಅಗತ್ಯ ಕಾರ್ಯಯೋಜನೆಯನ್ನು ರೂಪಿಸಿ ಜಾರಿಗೆ ತರುವ ಅಗತ್ಯವಿದೆ. ಮುಂದಿನ ಬೇಸಿಗೆ ಋತುವಿನಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ಹಾಲು ಉತ್ಪಾದನೆ ಸಹಿತ ಹೈನೋದ್ಯಮ ಕ್ಷೇತ್ರದಲ್ಲಿನ ರಾಜ್ಯದ ಸಾಧನೆ ಇತಿಹಾಸದ ಪುಟ ಸೇರುವ ಆತಂಕವಿದೆ. ಹೀಗಾಗಿ ಸರಕಾರ ತುರ್ತಾಗಿ ಹೈನುಗಾರರ ಅಳಲಿಗೆ ಸ್ಪಂದಿಸಬೇಕು. ಆದ್ಯತೆಯ ಮೇಲೆ ಹೈನುಗಾರರಿಗೆ ಬಾಕಿ ಇರುವ ಪ್ರೋತ್ಸಾಹಧನವನ್ನು ನೀಡಬೇಕು ಹಾಗೂ ಹೈನೋದ್ಯಮದ ಚೇತರಿಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next