ಬೆಂಗಳೂರು: ಹಾಸನದಲ್ಲಿ ಡಿಸೆಂಬರ್ 5ರಂದು ನಡೆಯಲಿರುವ ಕಾಂಗ್ರೆಸ್ ಸಮಾವೇಶದ ಸಿದ್ಧತೆಗಳ ಸಂಬಂಧ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ರವಿವಾರ ಸಭೆ ನಡೆಯಲಿದೆ.
ಮೈಸೂರು ಭಾಗದ ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಎಲ್ಲ ಉಸ್ತುವಾರಿ ಸಚಿವರು, ಸ್ಥಳೀಯ ಸಚಿವರು, ಸಂಸದರು, ಶಾಸಕರು, 2024ರ ಲೋಕಸಭಾ ಹಾಗೂ 2023ರ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳು, ಕೆಪಿಸಿಸಿ ಉಸ್ತುವಾರಿ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ರಾಜ್ಯ ಮುಂಚೂಣಿ ಘಟಕ, ವಿಭಾಗ, ಸೆಲ್ ರಾಜ್ಯಾಧ್ಯಕ್ಷರನ್ನು ಸಭೆಗೆ ಆಹ್ವಾನಿಸಲಾಗಿದೆ.
“ಸ್ವಾಭಿಮಾನಿ ಸಮಾವೇಶ’ದ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸ್ವಂತ ಜಿಲ್ಲೆಯಾದ ಹಾಸನದಲ್ಲಿ ಕಾರ್ಯಕ್ರಮ ಏರ್ಪಡಿಸಲು ಸಿದ್ಧತೆ ನಡೆಸಿದ್ದರು. ದಿಲ್ಲಿಯಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಕಾಂಗ್ರೆಸ್ ವರಿಷ್ಠರನ್ನು ಭೇಟಿಯಾದ ಬಳಿಕ ಈ ಸಮಾವೇಶವನ್ನು ಪಕ್ಷದ ಬ್ಯಾನರ್ ಅಡಿಯಲ್ಲಿಯೇ ಸಂಘಟಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಈಗ ಕೆಪಿಸಿಸಿವತಿಯಿಂದಲೇ ಸಿದ್ಧತೆಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ.
ರಹಸ್ಯ ವರದಿ ಪಡೆದ ಹೈಕಮಾಂಡ್
ಹಾಸನ ಸಮಾವೇಶಕ್ಕೆ ಯಾವೆಲ್ಲ ಸಚಿವರು, ಶಾಸಕರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂಬ ಬಗ್ಗೆ ಎಐಸಿಸಿ ತನ್ನದೇ ಮೂಲಗಳಿಂದ ರಹಸ್ಯ ವರದಿ ಪಡೆದುಕೊಂಡಿದೆ ಎನ್ನಲಾಗಿದೆ. ಸಂಘಟನೆ ಹೆಸರಿನಲ್ಲಿ ಸಚಿವರಾದ ಕೆ.ಎನ್.ರಾಜಣ್ಣ, ಎಚ್.ಸಿ. ಮಹದೇವಪ್ಪ, ವೆಂಕಟೇಶ್, ಡಾ| ಜಿ. ಪರಮೇಶ್ವರ್ ಸಕ್ರಿಯರಾಗಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಾವೇಶ ಸಂಘಟಿಸಲಾಗುತ್ತಿದೆಯೋ ಇಲ್ಲವೋ ಎಂಬ ಬಗ್ಗೆ ಎಐಸಿಸಿ ಮಾಹಿತಿ ಸಂಗ್ರಹಿಸಿದೆ ಎಂದು ಹೇಳಲಾಗಿದೆ.