Advertisement

ಸರ್ಕಾರಿ ಎಲ್ಲಾ ಆಸ್ಪತ್ರೆಗಳಲ್ಲಿ ಒಂದೇ ರೀತಿ ಸಮಸ್ಯೆ

10:29 AM Sep 20, 2017 | Team Udayavani |

ದಾವಣಗೆರೆ: ರಾಜ್ಯದಲ್ಲಿ ಈಚೆಗೆ ಹೆಚ್ಚಾಗಿ ಸಂಭವಿಸುತ್ತಿರುವ ಶಿಶುಗಳ ಮರಣಕ್ಕೆ ಕಾರಣ ಹಾಗೂ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಾಸ್ತವಿಕವಾಗಿ ನಡೆಸಿದ ಅಧ್ಯಯನದ ವರದಿಯನ್ನು ಪಕ್ಷದ ರಾಜ್ಯದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪರಿಗೆ ಸಲ್ಲಿಸಲಾಗುವುದು ಎಂದು ಬಿಜೆಪಿ ಸತ್ಯಶೋಧನಾ ಸಮಿತಿ ಸದಸ್ಯ, ಶಾಸಕ ಎಸ್‌. ಸುರೇಶ್‌ಕುಮಾರ್‌ ತಿಳಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೋಲಾರ, ರಾಯಚೂರು, ಕಲ್ಬುರ್ಗಿ , ಯಾದಗಿರಿ,
ದಾವಣಗೆರೆ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚಾಗಿರುವ ಶಿಶುಗಳ ಸಾವಿಗೆ ಕಾರಣ, ತಡೆಗಟ್ಟುವ ಕ್ರಮಗಳ ಬಗ್ಗೆ ಅಧ್ಯಯನಕ್ಕಾಗಿ ಪಕ್ಷದ ರಾಜ್ಯ ಅಧ್ಯಕ್ಷರು ಸಮಿತಿ ರಚಿಸಿದ್ದು, ಈಗಾಗಲೇ ಕೋಲಾರ, ಕಲ್ಬುರ್ಗಿ ನಂತರ ದಾವಣಗೆರೆ ಜಿಲ್ಲೆಗೆ ಭೇಟಿ ನೀಡಲಾಗಿದೆ. ಅಧ್ಯಯನದ ವರದಿಯನ್ನು ಮೊದಲು ಯಡಿಯೂರಪ್ಪನವರಿಗೆ ನಂತರ ಅವರ ಅನುಮತಿ ಪಡೆದು, ರಾಜ್ಯ ಸರ್ಕಾರಕ್ಕೂ ಸಲ್ಲಿಸಲಾಗುವುದು ಎಂದರು.

ದಾವಣಗೆರೆ ಒಳಗೊಂಡಂತೆ ಎಲ್ಲಾ ಕಡೆ ಒಂದೇ ರೀತಿಯ ಸಮಸ್ಯೆ ಇದೆ. ಹೆರಿಗೆಗೆ ದಾಖಲಾಗುವರ ಸಂಖ್ಯೆಗೆ ಅನುಗುಣವಾಗಿ ವಾರ್ಡ್‌, ಹಾಸಿಗೆ ಸೌಲಭ್ಯ, ಶಿಶುಗಳ ಅನುಗುಣವಾಗಿ ತುರ್ತು ಚಿಕಿತ್ಸಾ ಘಟಕ, ವೆಂಟಿಲೇಟರ್‌ ಸೌಲಭ್ಯ ಹಾಗೂ ಅತಿ ಕಡಿಮೆ ತೂಕದ ಮಕ್ಕಳಿಗೆ ನೀಡಲಾಗುವ ಔಷಧಿ, ಇಂಜೆಕ್ಷನ್‌ ಲಭ್ಯತೆಯೇ ಇಲ್ಲದಿರುವುದು ಕಂಡು ಬಂದಿದೆ. ಎಲ್ಲವನ್ನೂ ಕ್ರೂಢೀಕರಿಸಿ, ಸರ್ಕಾರ ಯಾವ ಕ್ರಮಗಳ ಮೂಲಕ ಶಿಶುಗಳ ಮರಣ ತಡೆಗಟ್ಟಬಹುದು ಎಂಬುದರ ಬಗ್ಗೆ ಸಮಾಲೋಚಿಸಲಾಗುವುದು ಎಂದು ತಿಳಿಸಿದರು.

ದಾವಣಗೆರೆ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಗೆ ಐದು ಜಿಲ್ಲೆ ಜನರು ಬರುತ್ತಾರೆ. ತಿಂಗಳಿಗೆ 900ಕ್ಕೂ ಹೆಚ್ಚು ಹೆರಿಗೆ ಆಗುತ್ತಿವೆ. 15 ಹಾಸಿಗೆ ಸಾಮರ್ಥ್ಯದ ತುರ್ತು ಚಿಕಿತ್ಸಾ ಘಟಕದಲ್ಲಿ ಆಸ್ಪತ್ರೆಯವರು 30 ಹಾಸಿಗೆಗೆ ವಿಸ್ತರಣೆಯೇನೋ ಮಾಡಿದ್ದಾರೆ. ಆದರೆ, ಅದಕ್ಕೆ ತಕ್ಕಂತೆ ಹಾಸಿಗೆ ಇಲ್ಲ. ಹಾಗಾಗಿ ಒಂದೇ ಹಾಸಿಗೆಯಲ್ಲಿ ಇಬ್ಬರನ್ನು ಮಲಗಿಸಲಾಗುತ್ತಿದೆ. ಇದು ಸೋಂಕಿಗೂ ಕಾರಣವಾಗುತ್ತಿದೆ. ಹಾಗಾಗಿ ಸರ್ಕಾರಿ ಇನ್ನೂ 100 ಹಾಸಿಗೆ ಸಾಮರ್ಥ್ಯದ ಹೆರಿಗೆ ಆಸ್ಪತ್ರೆ ಪ್ರಾರಂಭಿಸಬೇಕಿದೆ ಎಂದು ಹೇಳಿದರು.

ಹೆರಿಗೆ ಕೊಠಡಿ, ವಾರ್ಡ್‌, ತುರ್ತು ಚಿಕಿತ್ಸಾ ಘಟಕದಲ್ಲಿ ಪ್ರತಿ 15 ದಿನಕ್ಕೊಮ್ಮೆ ಧೂಮೀಕರಣ ಮಾಡಬೇಕು. ಆದರೆ.
ಇಲ್ಲಿ ಧೂಮೀಕರಣ ಆಗಿಯೇ ಇಲ್ಲ.ಮಾಡಲಿಕ್ಕೂ ಆಸ್ಪದ ಇಲ್ಲದ ವಾತಾವರಣ ಇದೆ. ಎಲ್ಲಕ್ಕಿಂತಲೂ ಮುಖ್ಯವಾಗಿ
ವೈದ್ಯರು, ವೈದ್ಯಕೀಯೇತರ ಸಿಬ್ಬಂದಿ ಒಳಗೊಂಡಂತೆ ಒಟ್ಟು 90 ಜನರು ಬೇಕೇ ಬೇಕು. ಆದರೆ, ಇರುವುದು 18 ಜನರು ಮಾತ್ರ. ದಾಖಲಾಗುವರ ಸಂಖ್ಯೆಗೆ ಅನುಗುಣವಾಗಿ ವೆಂಟಿಲೇಟರ್‌ ಇಲ್ಲ. ಮುಂದಿನ ದಿನಗಳಲ್ಲಿ ನಾಲ್ಕು
ವೆಂಟಿಲೇಟರ್‌ ಬರಲಿವೆ. ಎರಡನ್ನು ಆಸ್ಪತ್ರೆಯಿಂದಲೇ ಖರೀದಿಸಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ ಎಂದು
ತಿಳಿಸಿದರು.

Advertisement

ಅತಿ ಕಡಿಮೆ ತೂಕದ ಮಕ್ಕಳಿಗೆ ನೀಡಲಾಗುವ ಇಂಜೆಕ್ಷನ್‌ ಲಭ್ಯವೇ ಇಲ್ಲ. ಆರೋಗ್ಯ ಸುರಕ್ಷಾ ಸಮಿತಿ ಖಾತೆಯಲ್ಲಿ
3 ಕೋಟಿ ರೂಪಾಯಿಯಷ್ಟು ಅನುದಾನ ಇದೆ. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಇಂಜೆಕ್ಷನ್‌ ದೊರೆಯುವಂತೆ ಮಾಡಬಹುದು. ಇದರಲ್ಲಿ ಲೋಪ, ನಿರ್ಲಕ್ಷ್ಯ  ಕಂಡು ಬರುತ್ತಿದೆ. ಇನ್ನೂ ಅತಿ ಕಡಿಮೆ ತೂಕ, ಪೌಷ್ಠಿಕಾಂಶವುಳ್ಳ ಗರ್ಭಿಣಿಯರಿಗೆ ನೀಡಲಾಗುವ ಪೌಷ್ಠಿಕ ಆಹಾರದ ನಿರ್ವಹಣೆ ಜಿಲ್ಲೆಯಲ್ಲಿ ಸರಿಯಾಗಿ ಇಲ್ಲ. ನೋಡಲ್‌ ಅಧಿಕಾರಿಗಳು ಸರಿಯಾಗಿ ಉಸ್ತುವಾರಿ ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದಾವಣಗೆರೆ ಜಿಲ್ಲೆಯಲ್ಲಿ ಶೇ. 22 ರಿಂದ 23 ರಷ್ಟು, ಜಿಲ್ಲಾ ಆಸ್ಪತ್ರೆಯಲ್ಲಿ ಶೇ. 15 ರಷ್ಟು ಪ್ರಮಾಣದಲ್ಲಿ ಶಿಶುಗಳ ಸಾವು ಸಂಭವಿಸುತ್ತಿವೆ. ಶಿಶುಗಳ ಸಾವಿಗೆ ಪ್ರಮುಖ ಕಾರಣವಾದ ಸಿಬ್ಬಂದಿ ಕೊರತೆ, ಹಾಸಿಗೆ. ವೆಂಟಿಲೇಟರ್‌, ಇಂಜೆಕ್ಷನ್‌ ಅಲಭ್ಯತೆ… ಎಲ್ಲ ವಿಚಾರಗಳ ಕುರಿತ ವಾಸ್ತವಿಕ ವರದಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ಶಿಶುಗಳ ಮರಣ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಂಬಂಧಿತರ ಎಲ್ಲರ ಗಮನ ಸೆಳೆಯಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಕ್ಕಳ ಮುಖ ತೋರಿಸಲಿಕ್ಕೂ ಹಣ ಕೀಳುವ ದೂರು ದಾವಣಗೆರೆಯಲ್ಲಿ ಮಾತ್ರವಲ್ಲ ಎಲ್ಲ ಕಡೆ ಸಾಮಾನ್ಯವಾಗಿದೆ.
ಈ ನಡವಳಿಕೆ ನಿಜಕ್ಕೂ ಅನಾಗರಿಕತನದ್ದು ಹಾಗೂ ಹಣ ಕೀಳುವರ ಮನೋಸ್ಥಿತಿ ತೋರಿಸುತ್ತದೆ. ಸಂಬಂಧಿತ ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು. ವಿಧಾನ ಪರಿಷತ್‌ ಮಾಜಿ ಸದಸ್ಯ
ಅಶ್ವತ್‌ ನಾರಾಯಣ್‌, ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಯುವ ಮೋರ್ಚಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್‌, ಎಚ್‌.ಎನ್‌. ಶಿವಕುಮಾರ್‌, ಸಿ. ರಮೇಶ್‌ನಾಯ್ಕ, ಧನುಶ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next