ಉಡುಪಿ: ಸಂತೆಕಟ್ಟೆಯಲ್ಲಿ ವೆಹಿಕ್ಯುಲರ್ ಓವರ್‌ಪಾಸ್ ಎರಡನೇ ಹಂತದ ಕಾಮಗಾರಿ ನಡೆಯುತ್ತಿದ್ದು, ಇದೀಗ ಉಡುಪಿಯಿಂದ ಕುಂದಾಪುರ ಕಡೆ ಹೋಗುವವರ ಅನುಕೂಲಕ್ಕಾಗಿ ಇನ್ನೊಂದು ಸರ್ವಿಸ್ ರಸ್ತೆ ತೆರವುಗೊಳಿಸಲಾಗಿದೆ. ಆದರೆ, ಸಮರ್ಪಕ ಡಾಮರು ಹಾಕದೇ ಇರುವುದರಿಂದ ಇನ್ನಷ್ಟು ಸಮಸ್ಯೆ ಎದುರಾಗುತ್ತಿದೆ. ಸರ್ವಿಸ್ ರಸ್ತೆಗೆ ಡಾಮರು ಹಾಕಬೇಕು, ಟ್ರಾಫಿಕ್ ಸಮಸ್ಯೆಯನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಇಲ್ಲವಾದರೆ ಬೆಳಗ್ಗೆ ಮತ್ತು ಸಂಜೆ ದೊಡ್ಡ ಪ್ರಮಾಣ ಸಮಸ್ಯೆ ಉದ್ಭವಿಸಲಿದೆ ಎನ್ನುತ್ತಾರೆ ಸ್ಥಳೀಯರು.
ಓವರ್‌ಪಾಸ್ ಕಾಮಗಾರಿಯಿಂದ ಈ ರಸ್ತೆಯಲ್ಲಿ ನಿತ್ಯ ವಾಹನ ಚಲಾಯಿಸಿಕೊಂಡು ಬರುವ ಸವಾರರು ಹೈರಾಣಾಗಿದ್ದಾರೆ. ಸ್ಥಳೀಯರಂತೂ ರೋಸಿ ಹೋಗಿದ್ದಾರೆ. ರಾ.ಹೆ.66ರಲ್ಲಿ ಬಿದ್ದಿರುವ ಗುಂಡಿಗಳನ್ನು ಇನ್ನೂ ಸರಿಪಡಿಸಿಲ್ಲ. ದ್ವಿಚಕ್ರ ವಾಹನ ಸೇರಿದಂತೆ ಸಣ್ಣ ಗಾತ್ರದ ವಾಹನಗಳ ಸಂಚಾರ ಇಂದಿಗೂ ಕಷ್ಟವೇ ಆಗಿದೆ.
ಸಂತೆಕಟ್ಟೆ ಕೇಂದ್ರ ಸ್ಥಾನದಿಂದ ಕುಂದಾಪುರ ಕಡೆ ಹೋಗಲು ಈವರೆಗೂ ಸರ್ವಿಸ್ ರಸ್ತೆ ಇರಲಿಲ್ಲ. ಬದಲಿಗೆ ಸಂತೆ ಮಾರುಕಟ್ಟೆ ಮಾರ್ಗವಾಗಿ ಮುಖ್ಯ ರಸ್ತೆಗೆ ಹೋಗುತ್ತಿದ್ದರು. ಎರಡನೇ ಹಂತದ ಕಾಮಗಾರಿ ವೇಳೆ ಆರಂಭದಲ್ಲಿ ತಡೆಗೋಡೆ ನಿರ್ಮಾಣ ಮಾಡಿರುವುದರಿಂದ ಈಗ ಉಡುಪಿಯಿಂದ ಕುಂದಾಪುರ ಸಾಗುವ ವಾಹನಗಳಿಗೆ ವಿಶೇಷವಾಗಿ ಸರ್ವಿಸ್ ಹಾಗೂ ಸಿಟಿ ಬಸ್‌ಗಳಿಗೆ ಅನುಕೂಲವಾಗುವಂತೆ ಸರ್ವಿಸ್ ರಸ್ತೆ ವ್ಯವಸ್ಥೆಯಾಗಿದೆ. ಆದರೆ, ಇಲ್ಲಿ ಸರಿಯಾಗಿ ಡಾಮರು ಹಾಕಿಲ್ಲ. ಜಲ್ಲಿಕಲ್ಲುಗಳನ್ನು ಮಾತ್ರ ಹಾಕಿರುವುದರಿಂದ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಬಿಸಿಲು ಜಾಸ್ತಿ ಇರುವುದರಿಂದ ಧೂಳು ಏಳುತ್ತಿದೆ. ಸರ್ವಿಸ್ ರಸ್ತೆಗೆ ತತ್‌ಕ್ಷಣವೇ ಡಾಮರು ಹಾಕಬೇಕು. ಆಗ ಮುಖ್ಯರಸ್ತೆಯಲ್ಲಿ ವಾಹನ ಸಂಚಾರವೂ ಕಡಿಮೆಯಾಗಲಿದೆ ಎನ್ನುತ್ತಾರೆ ಸ್ಥಳೀಯರು.
ಸ್ಥಳೀಯ ವಾಹನಗಳಿಗೆ ಸಮಸ್ಯೆ
ಈ ಹಿಂದೆ ಸ್ಥಳೀಯ ವಾಹನಗಳು(ಕೆಮ್ಮಣ್ಣು, ಹೂಡೆ, ನೇಜಾರು ಮೊದಲಾದ ಭಾಗದ ವಾಹನಗಳು) ಸಂತೆಕಟ್ಟೆ ಕೇಂದ್ರಭಾಗದಿಂದ ಸರ್ವಿಸ್ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ರೋಬೋಸಾಫ್ಟ್ ವರೆಗೂ ಬಂದು, ಅಲ್ಲಿಂದ ಮುಖ್ಯರಸ್ತೆಗೆ ಸೇರಿಕೊಳ್ಳುತ್ತಿದ್ದವು. ಇದೀಗ ಸರ್ವಿಸ್ ರಸ್ತೆ ಆಗಿರುವುದರಿಂದ ಈ ವಾಹನಗಳು ವಿರುದ್ಧ ದಿಕ್ಕಿನ ಸಂಚಾರ ಕಷ್ಟವಾಗಿದೆ. ಟ್ರಾಫಿಕ್ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಸಂತೆಕಟ್ಟೆ ಕೇಂದ್ರಸ್ಥಾನದಿಂದ ಕುಂದಾಪುರಕಡೆಗೆ ಹೋಗುವ ರಸ್ತೆಯಲ್ಲಿ ಸ್ವಲ್ಪ ಮುಂದೆ ಸಾಗಿ ಈ ಹಿಂದೆ ರೂಪಿಸಿದ್ದ ಯುಟರ್ನ್ ಜಾಗದಲ್ಲಿ ಯುಟರ್ನ್ ತೆಗೆದುಕೊಂಡು ಬರುವಂತೆ ಮಾಡಬೇಕು. ಆದರೆ, ಇಷ್ಟು ದೂರು ಸುತ್ತುವರಿದು ಹೋಗಲು ಬಸ್ ಹಾಗೂ ಇತರೆ ವಾಹನ ಚಾಲಕ, ಮಾಲಕರು ಒಪ್ಪುವುದಿಲ್ಲ. ಹೀಗಾಗಿ ಅಗತ್ಯ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.