Advertisement

ಸಾಧು ಸಂತರ ಭದ್ರತೆಗೆ ಕೇಸರಿ ರಕ್ಷಕ್‌ ಪಡೆ

09:10 AM Nov 22, 2017 | Team Udayavani |

ಉಡುಪಿ: ಧರ್ಮ ಸಂಸದ್‌ಗೆ ದೇಶದೆಲ್ಲೆಡೆಯಿಂದ ಆಗಮಿಸುವ ಸರಿಸುಮಾರು 2,000 ಸಂತರು, ಸ್ವಾಮೀಜಿಗಳ ಭದ್ರತೆಗೆ ಒಂದು ಕಡೆಯಲ್ಲಿ ಪೊಲೀಸರು ಅವರದ್ದೇ ರೀತಿಯಲ್ಲಿ ಭದ್ರತೆಯನ್ನು ಆಯೋಜಿಸಲು ರೂಪರೇಖೆ ಸಿದ್ಧಪಡಿಸಿಕೊಳ್ಳುತ್ತಿದ್ದರೆ, ಇತ್ತ ಆಯೋಜಕರು ಅವರದ್ದೇ ಆದ ರೀತಿಯಲ್ಲಿ “ಕೇಸರಿ ರಕ್ಷಕ್‌ ಪಡೆ’ಯನ್ನು ಸಿದ್ಧಗೊಳಿಸುತ್ತಿದ್ದಾರೆ.

Advertisement

ಸಂತರು, ಸ್ವಾಮೀಜಿಗಳು ಉಳಿದುಕೊಳ್ಳುವ ವಸತಿ ಯಿಂದ ಹಿಡಿದು, ಊಟ, ಸಾರಿಗೆ, ಕಾರ್ಯಕ್ರಮ ನಡೆಯುವ ಸ್ಥಳ, ಪ್ರದರ್ಶಿನಿ, ಭೋಜನ ಶಾಲೆ ಮತ್ತು ಪಾಕಶಾಲೆಯ ಸಮೀಪದಲ್ಲಿ ಧರ್ಮ ಸಂಸದ್‌ನ ಅಧಿಕೃತ ಸ್ವಯಂಸೇವಕ ಭದ್ರತಾ ಪಡೆ “ಕೇಸರಿ ರಕ್ಷಕ್‌ ಪಡೆ’ ಕೆಲಸ ಮಾಡಲಿದೆ. ಸ್ವಾಮೀಜಿಗಳು, ವಿಐಪಿ (ಗಣ್ಯರು), ವಿವಿಐಪಿ (ಅತಿಗಣ್ಯರು) ಇವರು ಎಲ್ಲೆಲ್ಲಿ ಉಳಿಯುತ್ತಾರೆ, ಎಲ್ಲಿಗೆಲ್ಲ ಹೋಗುತ್ತಾರೆ, ಅಲ್ಲಲ್ಲಿ ರಕ್ಷಣಾ ಪ್ರಬಂಧಕರು (ಕೇಸರಿ ರಕ್ಷಕ್‌ ಪಡೆ) ಭದ್ರತೆಯ ಸೇವಾ ಕಾರ್ಯ ನಡೆಸಲಿದ್ದಾರೆ. ನಾಗಾ ಸಾಧುಗಳು ಬರುವ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ; ಅವರು ದಿಢೀರ್‌ ಬರುವವರು. ಬಂದರೆ ಅವರಿಗೂ ಎಲ್ಲ ವ್ಯವಸ್ಥೆ ಕಲ್ಪಿಸಲು ಧರ್ಮ ಸಂಸದ್‌ ಸಮಿತಿ ಸಿದ್ಧವಾಗಿದೆ.

ಧರ್ಮ ಸಂಸದ್‌ ನಡೆಯುವ ಕಲ್ಸಂಕ ರೋಯಲ್‌ ಗಾರ್ಡನ್‌ ಸ್ಥಳದಲ್ಲಿರುವ ಕಾರ್ಯಕ್ರಮ ಪೆಂಡಾಲ್‌ನ ಎಡಭಾಗದಲ್ಲಿ ಕಲ್ಸಂಕ ಬಸ್‌ ನಿಲ್ದಾಣದ ಸಮೀಪದಲ್ಲಿ ವಿವಿಐಪಿ ಪ್ರಮುಖರಿಗೆ ಒಳಬರುವ ದ್ವಾರ ಇರಲಿದೆ. ಇಲ್ಲಿ 10 ಅಡಿ ಅಗಲ, 10 ಅಡಿ ಎತ್ತರಕ್ಕೆ ಗೇಟು ಅಳವಡಿಸಲಾಗುತ್ತದೆ. ಇಲ್ಲಿ ವಿಶೇಷ ಭದ್ರತೆ ಇರುತ್ತದೆ. ಪೆಂಡಾಲ್‌ನ ಸುತ್ತಲೂ ಕೇಸರಿ ರಕ್ಷಕ್‌ ಪಡೆ ಕಾರ್ಯನಿರ್ವಹಿಸುತ್ತಲಿರುತ್ತದೆ.

ರಕ್ಷಕ್‌ ಪಡೆಗಿದೆ ಯೂನಿಫಾರಂ 
ಭದ್ರತಾ ಕೇಸರಿ ರಕ್ಷಕ್‌ ಪಡೆಯಲ್ಲಿ ಸರಿಸುಮಾರು 170 ಮಂದಿ ಇರಲಿದ್ದಾರೆ. ಅವರೆಲ್ಲರಿಗೂ ಯೂನಿಫಾರಂ (ಸಮವಸ್ತ್ರ) ಸಿದ್ಧಪಡಿಸಲಾಗುತ್ತಿದೆ. ಬಿಳಿ ಬಣ್ಣದ ಶರ್ಟು, ಕೇಸರಿ ಬಣ್ಣದ ಪಂಚೆಯಲ್ಲಿ ಕಾಣಿಸಿ ಕೊಳ್ಳಲಿರುವ ರಕ್ಷಕ್‌ ಪಡೆಯವರು ಧರ್ಮ ಸಂಸದ್‌ ಮುದ್ರೆ ಹೊಂದಿರುವ ಅಡ್ಡ ಬೆಲ್ಟ್ ಒಂದನ್ನು ಶರ್ಟಿನ ಮೇಲೆ ಧರಿಸಲಿದ್ದಾರೆ. ರಕ್ಷಕ್‌ ಪಡೆಯವರಿಗೆಲ್ಲರಿಗೂ ಪ್ರತ್ಯೇಕ ಐಡೆಂಟಿಟಿ ಕಾರ್ಡ್‌ ಇರಲಿದೆ.

ಬಜರಂಗದಳದ ಯುವಕಾರ್ಯಕರ್ತರು
ಕೇಸರಿ ರಕ್ಷಕ್‌ ಪಡೆಯಲ್ಲಿರುವ ಎಲ್ಲ 170 ಮಂದಿಯೂ ರಾಜ್ಯ ಬಜರಂಗ ದಳದ ಯುವ ಕಾರ್ಯಕರ್ತರಾಗಿರುತ್ತಾರೆ. ಈಗಾಗಲೇ ದಾವಣಗೆರೆ, ಚಿತ್ರದುರ್ಗ, ಎಚ್‌.ಡಿ. ಕೋಟೆ, ಮೈಸೂರು ಭಾಗ ದಿಂದ ಯುವಬಜರಂಗದಳದ ಕಾರ್ಯಕರ್ತರು ಉಡುಪಿಗೆ ಆಗಮಿಸಿದ್ದಾರೆ. ಉಡುಪಿ, ದ.ಕ. ಜಿಲ್ಲೆಯ ಕಾರ್ಯಕರ್ತರು ಬುಧವಾರ, ಗುರುವಾರ ಸೇರಿಕೊಳ್ಳಲಿದ್ದಾರೆ. ಅವರೆಲ್ಲರಿಗೆ ವಿಶೇಷವಾದ ಮಾಹಿತಿ, ತರಬೇತಿ ನೀಡಲಾಗುತ್ತದೆ. ದಿನಕ್ಕೆ ಮೂರು ಶಿಫ್ಟ್ನಲ್ಲಿ ರಕ್ಷಕ್‌ ಪಡೆಯ ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ ಎಂದು ಧರ್ಮ ಸಂಸದ್‌ನ ಭದ್ರತಾ ಉಸ್ತುವಾರಿ ರಘು ಸಕಲೇಶಪುರ ತಿಳಿಸಿದ್ದಾರೆ.

Advertisement

ಹೆಲಿಕಾಪ್ಟರ್‌ನಲ್ಲಿ ಬರಲಿರುವ ಶ್ರೀಗಳು
ಸುತ್ತೂರು ಶ್ರೀ ಶಿವರಾತ್ರಿ ದೇಶೀ ಕೇಂದ್ರದ ಸ್ವಾಮೀಜಿಯವರು ಮತ್ತವರ ಶಿಷ್ಯಂದಿರು ಹೆಲಿಕಾಪ್ಟರ್‌ನಲ್ಲಿ ಉಡುಪಿಗೆ ಆಗಮಿಸುವರು. ಝಡ್‌ ಸೆಕ್ಯೂರಿಟಿ ಹೊಂದಿರುವ ಆದಿಚುಂಚನ ಗಿರಿ ಮಠದ ಶ್ರೀ ನಿರ್ಮಲಾನಂದ ಶ್ರೀಗಳು ಅವರದ್ದೇ ಭದ್ರತೆಯಲ್ಲಿ ಬರುವರು. ಇನ್ನೂ ಕೆಲವು ಪ್ರಮುಖ ಸ್ವಾಮೀಜಿಗಳು ಹೆಲಿಕಾಪ್ಟರ್‌ ನಲ್ಲಿ ಬರುತ್ತಾರೆ ಎನ್ನಲಾಗಿದೆ. ಒಡಿಶಾ, ಕೇರಳ, ತಮಿಳುನಾಡು, ಉತ್ತರಪ್ರದೇಶ, ಪಶ್ಚಿಮ ಬಂಗಾಲದಿಂದ ಬರುವ ಸಂತರ ಮಾಹಿತಿ ಪಡೆಯಲಾಗಿದೆ. ಕರ್ನಾಟಕ ದಕ್ಷಿಣದಿಂದ ಸುಮಾರು 350, ಉತ್ತರದಿಂದ ಸುಮಾರು 400 ಸ್ವಾಮೀಜಿಗಳು ಆಗಮಿಸಲಿದ್ದಾರೆ.

ಚೇತನ್‌ ಪಡುಬಿದ್ರಿ

Advertisement

Udayavani is now on Telegram. Click here to join our channel and stay updated with the latest news.

Next