Advertisement

ಆಳುವವರೇ ಕನ್ನಡದ ವಿರುದ್ಧ ನಿಂತಿದ್ದಾರೆ

06:56 AM Jan 07, 2019 | Team Udayavani |

ಬೆಂಗಳೂರು: ಆಳುವ ಸರ್ಕಾರವೇ ಕನ್ನಡದ ವಿರುದ್ಧ ನಿಂತಿದ್ದು, ಮುಂಬರುವ ದಿನಗಳಲ್ಲಿ ಕನ್ನಡ ಮತ್ತು ಕನ್ನಡ ಕಲಿಸುವವರಿಗೆ ತುಂಬಾ ದಾರುಣ ಸ್ಥಿತಿ ಎದುರಾಗಲಿದೆ ಎಂದು ಕವಿ ಡಾ.ಎಚ್‌.ಎಸ್‌. ವೆಂಕಟೇಶಮೂರ್ತಿ ಕಳವಳ ವ್ಯಕ್ತಪಡಿಸಿದರು.

Advertisement

ನಗರದ ಶಿಕ್ಷಕರ ಸದನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಐಸಿಎಸ್‌ಇ ಶಾಲಾ ಕನ್ನಡ ಶಿಕ್ಷಕರ ಸಂಘದ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಕನ್ನಡ ಎಲ್ಲ ರೀತಿಯ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವ ಸಂದರ್ಭ ಇದು.

ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಜಾರಿ ಮಾಡಿಯೇ ತೀರುತ್ತೇವೆ ಎನ್ನುವ ಮೂಲಕ ಆಳುವ ಸರ್ಕಾರವೇ ಕನ್ನಡದ ವಿರುದ್ಧ ನಿಂತಿದೆ. ಈ ರೀತಿಯ ನಿಲುವು ಸರಿಯಲ್ಲ ಎಂಬುದನ್ನು ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಅತ್ಯಂತ ಕಠೊರವಾಗಿ ಹೇಳಿದರೂ, ನಮ್ಮ ಮಂತ್ರಿಮಾನ್ಯರಿಗೆ ಅದು ಅರ್ಥವಾಗುತ್ತಿಲ್ಲ. ಸರ್ಕಾರ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ.

ಆದರೆ, ಇದರಿಂದಾಗುವ ಪರಿಣಾಮಗಳ ಬಗ್ಗೆ ಕೂಲಂಕಷವಾಗಿ ಯೋಚಿಸುವ ಅಗತ್ಯವಿದೆ ಎಂದು ಹೇಳಿದರು. ಹಾಗೊಂದು ವೇಳೆ ಪ್ರಾಥಮಿಕ ಹಂತದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಜಾರಿಯಾದರೆ, ಕನ್ನಡ ಮತ್ತು ಕನ್ನಡಿಗರ ಪಾಲಿಗೆ ಭವಿಷ್ಯದ ದಿನಗಳು ದಾರುಣವಾಗಿರಲಿವೆ. ಅದರಲ್ಲೂ ಕನ್ನಡ ಶಿಕ್ಷಕರ ಮೌಲ್ಯ ಕುಸಿಯಲಿದ್ದು, ಕನ್ನಡ ಕಲಿಸುವವರ ಬಗ್ಗೆ ಉದಾಸೀನತೆ ಉಂಟಾಗಲಿದೆ ಎಂದು ಕವಿ ಆತಂಕ ವ್ಯಕ್ತಪಡಿಸಿದರು.

ಕನ್ನಡವನ್ನು ಇಂಗ್ಲಿಷ್‌ನಲ್ಲಿ ಹೇಳಬೇಕಿತ್ತು!: ಕನ್ನಡ ಶಿಕ್ಷಕರು ದೊಡ್ಡ ಪರಂಪರೆಯ ವಾರಸುದಾರರು. ಜ್ಞಾನಪೀಠ ಪಡೆದ ಎಂಟು ಜನರ ಪೈಕಿ ಐವರು ಶಿಕ್ಷಕರೇ ಆಗಿದ್ದಾರೆ. ಹಾಗಾಗಿ, ನಮ್ಮ ವೃತ್ತಿ ಬಗ್ಗೆ ಗೌರವ, ನಾವು ಕಲಿಸುವ ವಿಷಯ ಅಥವಾ ವಸ್ತು ಬಗ್ಗೆ ಗೌರವ ಮತ್ತು ವಿದ್ಯಾರ್ಥಿ ಪ್ರೀತಿ ಬೆಳೆಸಿಕೊಳ್ಳಬೇಕು. ಶಿಕ್ಷಕರು ಒಳ್ಳೆಯವರಾಗಿದ್ದರೆ ಶ್ರೇಷ್ಠ ವಿದ್ಯಾರ್ಥಿಗಳು ಹೊರಹೊಮ್ಮಲು ಸಾಧ್ಯ.

Advertisement

ನಾನು ಪಾಠ ಮಾಡುತ್ತಿದ್ದ ಕ್ರಿಶ್ಚಿಯನ್‌ ಕಾಲೇಜಿನಲ್ಲಿ ಕನ್ನಡವನ್ನು ಇಂಗ್ಲಿಷ್‌ನಲ್ಲಿ ಹೇಳಬೇಕಾದ ಸ್ಥಿತಿ ಇತ್ತು. ಇಂತಹ ವಾತಾವರಣದಲ್ಲಿ ನಾನು 30 ವರ್ಷ ವೃತ್ತಿ ಜೀವನ ಪೂರೈಸಿದ್ದೇನೆ. ಆ ಕಾಲೇಜಿಗೆ ಪುತಿನ, ಅನಂತಮೂರ್ತಿ, ಯಶವಂತ ಚಿತ್ತಾಲರಂತಹ ದಿಗ್ಗಜರು ಬರುವಂತೆ ಮಾಡಿದೆ. ಕನ್ನಡ ಸಂಘ ಕಟ್ಟಿದೆ. ಅಲ್ಲಿ ಸಂಪೂರ್ಣ ಕನ್ನಡದ ವಾತಾವರಣ ನಿರ್ಮಾಣವಾಯಿತು. ಹಾಗಾಗಿ, ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು ಎಂದು ಕಿವಿಮಾತು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಮಾತನಾಡಿ, ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳ ಶಿಕ್ಷಕರು ಹೀಗೆ ಕನ್ನಡ ಸಂಘ ಕಟ್ಟಲು ಮುಂದಾಗಿರುವುದು ಖುಷಿ ಕೊಟ್ಟಿದೆ. ಮೈಚಳಿ ಬಿಟ್ಟು ಈ ಶಿಕ್ಷಕರು ಹೊರಬರಬೇಕು. ಸಂಘಟನೆಯಲ್ಲಿ ಒಡಕು ಮೂಡದಂತೆ ಎಚ್ಚರವಹಿಸಬೇಕು ಎಂದು ಸಲಹೆ ಮಾಡಿದರು.

ಕಾರ್ಯಕ್ರಮದಲ್ಲಿ ಸಚಿವ ಜಿ.ಟಿ.ದೇವೇಗೌಡ, ವಿಧಾನ ಪರಿಷತ್‌ ಸದಸ್ಯ ಅ.ದೇವೇಗೌಡ, ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್‌ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬಟ್ಟೂರ ಅಧ್ಯಕ್ಷತೆ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next