Advertisement

ಜನರ ಕೈಗೆ ಮಹಾನಗರ ಪಾಲಿಕೆ ಕಾರ್ಯಭಾರ

09:32 AM Mar 22, 2022 | Team Udayavani |

ಕಲಬುರಗಿ: “ನಮ್‌ ವಾರ್ಡ್‌ನಲ್ಲಿ ನಾವ್‌ ಹೇಳಿದ ಕೆಲಸ ಮಾಡ್ತಾ ಇಲ್ಲ. ವಾರ್ಡ್‌ನ ಪಾಲಿಕೆ ಸದಸ್ಯರು ತಮಗೆ ಮನಸ್ಸಿಗೆ ಬಂದಂತೆ, ಇಲ್ಲವೇ ವಾರ್ಡ್‌ನಲ್ಲಿ ಯಾರು ಬಲಾಡ್ಯ ಇರುತ್ತಾರೋ ಅವರ ಮಾತು ಕೇಳ್ತಾರೇ’ ಎನ್ನುವ ಇತ್ಯಾದಿ ಆರೋಪಗಳು, ದೂರುಗಳು ಬರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಾಲಿಕೆ ಮಹತ್ತರ ಕಾರ್ಯಕ್ಕೆ ಮುಂದಾಗಿದೆ.

Advertisement

ಜನರ ಕೈಗೆ ಅಧಿಕಾರ ಎನ್ನುವ ನಿಟ್ಟಿನಲ್ಲಿ ವಾರ್ಡ್‌ ಸಮಿತಿ ರಚಿಸಲು ನಿರ್ಧರಿಸಿದ್ದು, ಬರುವ ಏಪ್ರಿಲ್‌ 5ರೊಳಗೆ ವಾರ್ಡ್‌ಗೆ ಸದಸ್ಯರಾಗ ಬಯಸುವರು ಅರ್ಜಿ ಹಾಕಲು ಮುಕ್ತ ಅವಕಾಶ ನೀಡಲಾಗಿದೆ.

ಪ್ರಮುಖವಾಗಿ ಸಾರ್ವಜನಿಕರಿಗೆ ವಾರ್ಡ್‌ ಸಮಿತಿ ರಚನೆ ಹಾಗೂ ಕಾರ್ಯವೈಖರಿಗೆ ಸಂಬಂಧಿಸಿದಂತೆ ಪಾಲಿಕೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಜತೆಗೆ ಇರುವ ಸಂಶಯಗಳನ್ನು ದೂರ ಮಾಡಲು ಪಾಲಿಕೆ ಮಾರ್ಚ್‌ 22ರಂದು ಬೆಳಗ್ಗೆ 11ಕ್ಕೆ ಪಾಲಿಕೆಯ ಇಂದಿರಾ ಸ್ಮಾರಕ ಭವನದಲ್ಲಿ ಮಹತ್ವದ ಸಭೆ ಕರೆಯಲಾಗಿದೆ.

ಜನಪ್ರತಿನಿಧಿಗಳಂತೆ ಜನರು ಸಹ ಅಭಿವೃದ್ಧಿ ಕಾರ್ಯಗಳಿಗೆ ಸಕ್ರಿಯವಾಗಿ ಆಸಕ್ತಿ ವಹಿಸುವ ಜತೆಗೆ ಆಯಾ ವಾರ್ಡ್‌ನಲ್ಲಿ ಏನೇನು ಅಭಿವೃದ್ದಿ ಕಾರ್ಯಗಳು ಆಗಬೇಕು ಎನ್ನುವ ನಿಟ್ಟಿನಲ್ಲಿ ಸೂಚಿಸುವ ಹಾಗೂ ಸಲಹೆ ನೀಡುವ ಪ್ರಮುಖ ವಾರ್ಡ್‌ ಸಮಿತಿಯೊಂದನ್ನು ರಚಿಸಲು ಪಾಲಿಕೆ ಮುಂದಾಗಿರುವುದು ಹೊಸ ಆಡಳಿತಕ್ಕೆ ನಾಂದಿ ಹಾಡುವಂತಾಗಿದೆ.

ವಾರ್ಡ್‌ ರಚನೆ ಹೇಗೆ?

Advertisement

ಮಹಾನಗರದಲ್ಲಿ 55 ವಾರ್ಡ್‌ಗಳಿವೆ. ಪ್ರತಿಯೊಂದು ವಾರ್ಡ್‌ಗೆ ಸಮಿತಿಯೊಂದನ್ನು ರಚಿಸಲಾಗುತ್ತಿದೆ. ಆಯಾ ವಾರ್ಡ್‌ನಲ್ಲಿ ಮತದಾರರ ಪಟ್ಟಿಯಲ್ಲಿರುವ ಹತ್ತು ಜನ ಸದಸ್ಯರನ್ನು ಸಮಿತಿಗೆ ಸದಸ್ಯರನ್ನಾಗಿ ಆಯ್ಕೆಗೊಳಿಸಲಾಗುತ್ತಿದೆ. ಸಮಿತಿ ಸದಸ್ಯರು ಸಭೆ ನಡೆಸಿ, ಅಭಿಪ್ರಾಯ ಪಡೆದು ಕೈಗೊಳ್ಳಬೇಕಾದ ಕಾಮಗಾರಿ ಇಲ್ಲವೇ ಕೆಲಸಗಳ ಕುರಿತು ಪಾಲಿಕೆ ಮುಖ್ಯ ಅಧಿಕಾರಿಗಳಿಗೆ ಸಲ್ಲಿಸಬೇಕು. ಪಾಲಿಕೆ ಆಡಳಿತ ಮಂಡಳಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ. ಒಟ್ಟಾರೆ ಇಲ್ಲಿ ವಾರ್ಡ್‌ ಸಮಿತಿ ನೀಡಿದ ಸಲಹೆ, ಶಿಫಾರಸುಗಳೇ ಕಾರ್ಯರೂಪಕ್ಕೆ ಬರುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.

ವಾರ್ಡ್‌ ಸಮಿತಿಗೆ ಆಯಾ ಪಾಲಿಕೆ ಸದಸ್ಯರೇ ಅಧ್ಯಕ್ಷರಾಗಿರುತ್ತಾರೆ. ವಾರ್ಡ್‌ವಾರು ಸಮಿತಿಗೆ ಸದಸ್ಯರ ಅವಧಿ ಐದು ವರ್ಷ ಇಲ್ಲವೇ ಎರಡು ವರ್ಷ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಒಟ್ಟಾರೆ ಆಯಾ ವಾರ್ಡ್‍ನ ಕ್ರಿಯಾಶೀಲ ಮತದಾರರು, ಅಭಿವೃದ್ಧಿಪರ ಚಿಂತನೆಯುಳ್ಳವರು ಸದಸ್ಯರಾದಲ್ಲಿ ಸಮಿತಿಗೆ ಹೆಚ್ಚು ಅರ್ಥ ಬರುತ್ತದೆ. ಅಲ್ಲದೇ ಮಾದರಿ ಕಾರ್ಯಗಳಾಗಲು ಕಾರಣವಾಗುತ್ತಾರೆ. ಈ ನಿಟ್ಟಿನಲ್ಲಿ ಸಾಮಾಜಿಕ ಚಿಂತಕರು, ಅಭಿವೃದ್ಧಿಪರ ಧೋರಣೆಯುಳ್ಳವರು ಸಮಿತಿ ಸದಸ್ಯರಾಗಲು ಮುಂದೆ ಬರುವುದು ಅವಶ್ಯಕವಾಗಿದೆ.

ಪಾಲಿಕೆ ಸದಸ್ಯ ಕೆಲಸ ಮಾಡುತ್ತಿಲ್ಲ. ನಾವು ಹೇಳಿದ ಕೆಲಸ ಮಾಡುವುದೇ ಇಲ್ಲ ಎಂದು ಕೊರಗುವ ಹಾಗೂ ಆರೋಪ ಹೊರಿಸುವ ಬದಲು ವಾರ್ಡ್‌ವಾರು ಸಮಿತಿಗೆ ಸದಸ್ಯರಾದಲ್ಲಿ ಅವರೇ ಮುಂದೆ ನಿಂತು ಆಸಕ್ತಿ ವಹಿಸಿ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಬಹುದಾಗಿದೆ. ಅಲ್ಲದೇ ಕೆಲಸ ಕಾರ್ಯಗಳು ಗುಣಮಟ್ಟವಾಗಿರದೇ ಕಳಪೆಯಿಂದ ನಡೆಯುತ್ತಿದ್ದರೆ ಪಾಲಿಕೆ ಗಮನ ತರಬಹುದು. ಸಮಿತಿ ಸದಸ್ಯರೆಲ್ಲರೂ ಕಾಮಗಾರಿಗೆ ಸಂಬಂಧಿಸಿದಂತೆ ನಿಗಾ ವಹಿಸಬಹುದು. ಒಟ್ಟಾರೆ ಸಾರ್ವಜನಿಕರ ಕೈಯಲ್ಲಿ ಅಧಿಕಾರದ ಪ್ರಭುತ್ವ ಎಂಬುದಾಗಿ ಸ್ಪಷ್ಟವಾಗಿ ಹೇಳಬಹುದಾಗಿದೆ.
ವಾರ್ಡ್‌ನಲ್ಲಿ ಅತ್ಯಂಶ ಅವಶ್ಯಕ ಕೆಲಸಗಳಾಗಬೇಕು ಎನ್ನುವ ನಿಟ್ಟಿನಲ್ಲಿ ಮಾಹಿತಿ ನೀಡಲು ಜತೆಗೆ ಅಭಿಪ್ರಾಯ ಸಲ್ಲಿಸಲು ವಾರ್ಡ್‌ ಸಮಿತಿ ರಚಿಸಲು ಪಾಲಿಕೆ ಮುಂದಾಗಿದೆ. ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಜತೆಗೆ ಸಂಶಯ ನಿವಾರಣೆ ಮಾಡುವ ನಿಟ್ಟಿನಲ್ಲಿ ಮಾರ್ಚ್‌ 22ರಂದು ಬೆಳಗ್ಗೆ 11ಕ್ಕೆ ಪಾಲಿಕೆ ಇಂದಿರಾ ಸ್ಮಾರಕ ಭವನದಲ್ಲಿ ಸಭೆ ಕರೆಯಲಾಗಿದೆ. -ಸ್ನೇಹಲ್‌ ಸುಧಾರಕ ಲೋಖಂಡೆ, ಪಾಲಿಕೆ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next