Advertisement
ಹೆಣ್ಣು ಅಬಲೆಯೆಂದೇ ಎಲ್ಲರೂ ಎಣಿಸುತ್ತಾರೆ. ಆದರೆ ಆ ಕೋಮಲತೆಯೇ ಅವಳ ಶಕ್ತಿ. ಗಂಡು ಶಕ್ತಿವಂತನೇ ಇದ್ದರೂ ಆತನನ್ನು ತನ್ನ ಸೂಕ್ಷ್ಮ ಸ್ವಭಾವದಿಂದ, ಒಳ್ಳೆಯ ವಿಚಾರಗಳಿಂದ, ಸಮಯ ಪ್ರಜ್ಞೆಯಿಂದ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುವವಳೇ ಹೆಣ್ಣು. ಆಕೆ ತನ್ನ ಪ್ರೇಮಮಯ ಸ್ವಭಾವದಿಂದ ಮನೆಯ ಜನರ ಹೃದಯವನ್ನು ಗೆಲ್ಲುತ್ತಾಳೆ. ಎಲ್ಲಿಂದಲೋ ಬಂದವಳಾದರೂ ಅವರ ಸುಖ-ದುಃಖಗಳನ್ನು ತನ್ನದೆಂದೇ ತಿಳಿದು ಪಾಲ್ಗೊಳ್ಳುತ್ತಾಳೆ.
Related Articles
Advertisement
ಮೈ ಅಂದ ಚಂದವನ್ನು ಎತ್ತಿ ತೋರಿಸುವ ಬಟ್ಟೆಗಳು, ಡಿಸ್ಕೋ ಕ್ಲಬ್‌ಗಳಲ್ಲಿ ತಡ ರಾತ್ರಿವರೆಗೆ ಸ್ವಚ್ಚಂದ ಕುಣಿತ. ಗಂಡಿಗೆ ತಾನೇನು ಕಡಿಮೆ ಇಲ್ಲ ಎಂಬ ಭಾವವನ್ನು ತೋರುವಂತೆ ಕುಡಿತ ಸಿಗರೇಟು ಡ್ರಗ್ ಸೇವನೆ ಲೈಂಗಿಕ ಸ್ವಾತಂತ್ರ್ಯ ಇವು ಯಾರನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯವಿಲ್ಲ. ಗಂಡಿಗೆ ಹೆಗಲೆಣೆಯಾಗಿ ತನ್ನನ್ನು ಸಮರ್ಥಿಸಿಕೊಳ್ಳಲು ಹೆಣ್ಣಿಗೆ ಅನೇಕ ಕ್ಷೇತ್ರಗಳಿವೆ.
ಯಾವುದೇ ಕೆಲಸವಿರಲಿ ತನ್ನಿಂದಾಗದ್ದು ಯಾವುದೂ ಇಲ್ಲವೆಂದು ಹೆಣ್ಣು ಸಾಬೀತುಗೊಳಿಸಿದ್ದಾಳೆ. ಮಹಿಳೆಯು ಒಬ್ಬ ಪ್ರಜ್ಞಾವಂತ ಪ್ರಜೆಯಾಗಿ ರೂಪುಗೊಳ್ಳಬೇಕಾದರೆ ತಂದೆ-ತಾಯಿಯರ ಪಾತ್ರ ಮಹತ್ತರವಾದುದು. ಆಕೆಯಲ್ಲಿ ಸದ್ಗುಣಗಳನ್ನು, ಪರಿಸ್ಥಿತಿಯನ್ನು ಎದುರಿಸಬಲ್ಲ ಎದೆಗಾರಿಕೆಯನ್ನು ತುಂಬಿದಾಗಲೇ ಇವೆಲ್ಲ ಸಾಧ್ಯ. ಕೇವಲ ಸಾಂಪ್ರದಾಯಿಕ ಶಿಕ್ಷಣದಿಂದ ಮಗಳು ಡಾಕ್ಟರೋ, ಎಂಜಿನಿಯರೋ ಆಗಬಹುದು. ಹಣ ಗಳಿಸಬಹುದು. ಆದರೆ ಅದರ ಜತೆಗೆ ಮಾನವೀಯ ಗುಣಗಳಾದ ಮಮತೆ, ಸಹನೆ, ತ್ಯಾಗ, ಪ್ರೀತಿ, ದಯೆ ಮುಂತಾದವುಗಳಿಂದ ಕೂಡಿದ ಒಳ್ಳೆಯ ಗೃಹಿಣಿ, ಒಳ್ಳೆಯ ಹೆಂಡತಿ, ಒಳ್ಳೆಯ ಸ್ನೇಹಿತೆ, ಒಳ್ಳೆಯ ಮಾತೆ ಆಗಬೇಕಾದರೆ ತಂದೆ-ತಾಯಿಯರು ತಾವೂ ಸುಸಂಸ್ಕೃತರಾಗಿದ್ದು ಆಕೆಗೆ ಬಾಲ್ಯದಿಂದಲೇ ಸಂಸ್ಕಾರಯುತ ಶಿಕ್ಷಣ ಕೊಟ್ಟಾಗಲೇ ಸಾಧ್ಯ.
ರುಷೋ ಎಂಬ ಶಿಕ್ಷಣ ಶಾಸ್ತ್ರಜ್ಞನೇ ಹೇಳಿದಂತೆ ನಮ್ಮ ಮಕ್ಕಳಿಗೆ ನಿಷೇಧಾತ್ಮಕ ಶಿಕ್ಷಣದ ಅವಶ್ಯಕತೆಯಿಲ್ಲ. ಅವರು ಜೀವನದ ಅನುಭವಗಳಿಂದಲೇ ಪಾಠ ಕಲಿಯಬೇಕು. ಜೀವನದ ಕಷ್ಟ- ನಷ್ಟಗಳನ್ನು, ಎಡರು-ತೊಡರುಗಳನ್ನು ಎದುರಿಸುವ ಎದೆಗಾರಿಕೆ ಅವರಲ್ಲಿ ಈ ಅನುಭವಗಳಿಂದಲೇ ಬರಬೇಕು. ಮಕ್ಕಳಿಗೆ ಒಳ್ಳೆಯ ಅನುಭವಗಳನ್ನು ಒದಗಿಸಬೇಕಾದದ್ದು ಮಾತ್ರ ತಂದೆ-ತಾಯಿಯರ ಕರ್ತವ್ಯ.
ಸೌಮ್ಯಾ ಕಾಗಲ್
ಬಾಗಲಕೋಟೆ