ಬೆಂಗಳೂರು: ಕಾಂಗ್ರೆಸ್‌ನಲ್ಲಿ “ಸ್ಟಾರ್’ ಪ್ರಚಾರಕರಾಗಲು ದುಂಬಾಲು ಬಿದ್ದು ಪಟ್ಟಿ ಸೇರಿರುವ ಬಹುತೇಕ ನಾಯಕರು ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಳ್ಳದೇ ದೂರ ಉಳಿದಿದ್ದಾರೆ. ಬಹುತೇಕ ಸ್ಟಾರ್ ಪ್ರಚಾರಕರಿಗೆ ಕ್ಷೇತ್ರಗಳ ಉಸ್ತುವಾರಿಯನ್ನೂ ವಹಿಸಿರುವುದರಿಂದ ಅವರೂ ಕ್ಷೇತ್ರಗಳಿಗೆ ಸೀಮಿತರಾಗುವಂತಾಗಿದೆ.
ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಕಾಂಗ್ರೆಸ್‌ನಿಂದ 40 ಸ್ಟಾರ್ ಪ್ರಚಾರಕರನ್ನು ಗುರುತಿಸಲಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ 40 ಸ್ಟಾರ್ ಪ್ರಚಾರಕರಿದ್ದಾರೆ. ಆದರೆ, 15 ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಹೊರತು ಪಡಿಸಿ ಯಾವ ಸ್ಟಾರ್ ಪ್ರಚಾರಕರೂ ಪ್ರವಾಸ ಮಾಡಿ ಪ್ರಚಾರ ನಡೆಸಿಲ್ಲ.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಲೆಕ್ಕಾಚಾರದ ಮೇಲೆ ಪ್ರಚಾರ ನಡೆಸುತ್ತಿದ್ದು, ದಕ್ಷಿಣ ಕರ್ನಾಟಕದ ಕ್ಷೇತ್ರಗಳ ಕಡೆಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಕೊನೆಯ ಎರಡು ದಿನ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಹಾಗೂ ಹೀರೆಕೆರೂರು ಹಾಗೂ ಬೆಳಗಾವಿ ಜಿಲ್ಲೆಯ ಅಥಣಿ ಹಾಗೂ ಕಾಗವಾಡ ಕ್ಷೇತ್ರಗಳಿಗೆ ಪ್ರಚಾರಕ್ಕೆ ಹೋಗುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಆದರೆ, ಗೋಕಾಕ್ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುವ ಕುರಿತು ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಸಂದರ್ಭ ಬಂದರೆ ಬಹಿರಂಗ ಪ್ರಚಾರದ ಕೊನೆಯ ದಿನ ಡಿ.3ರಂದು ತೆರಳುವ ಆಲೋಚನೆ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಚಾರದಲ್ಲಿ ಕಾಣದ ಸ್ಟಾರ್: ಕೆ.ಸಿ.ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ ಅವರು ಮಹಾರಾಷ್ಟ್ರ ರಾಜಕೀಯ ಬೆಳ ವಣಿಗೆಯ ಹಿನ್ನೆಲೆಯಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಆಗಿರಲಿಲ್ಲ. ಆದರೆ, ಉಳಿದ ಸಮಯಕ್ಕೂ ಅವರು ಪ್ರಚಾರದಲ್ಲಿ ತೊಡಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಮಾಜಿ ಡಿಸಿಎಂ ಪರಮೇಶ್ವರ್ ಆರೋಗ್ಯ ಸಮಸ್ಯೆಯಿಂದ ಪ್ರಚಾರ ದಲ್ಲಿ ತೊಡಗಿಸಿಕೊಂಡಿಲ್ಲ. ಹುಣಸೂರು ಕ್ಷೇತ್ರದಲ್ಲಿ ಒಂದು ದಿನ ಪ್ರಚಾರದಲ್ಲಿ ತೊಡಗಿಸಿ ಕೊಂಡಿದ್ದು ಬಿಟ್ಟರೆ ಬೇರೆ ಕ್ಷೇತ್ರಗಳಲ್ಲಿ ಕಾಣಿಸಿ ಕೊಂಡಿಲ್ಲ. ಕೇಂದ್ರದ ಮಾಜಿ ಸಚಿವರಾದ ಕೆ.ರೆಹಮಾನ್ ಖಾನ್, ಕೆ.ಎಚ್.ಮುನಿಯಪ್ಪ, ಸಿ.ಎಂ.ಇಬ್ರಾಹಿಂ, ಜಮೀರ್ ಅಹಮದ್, ಜಯಮಾಲಾ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದರೂ ದೂರ ಉಳಿದಿದ್ದಾರೆ. ತನ್ವೀರ್ ಸೇಠ್ ಆರೋಗ್ಯ ಸಮಸ್ಯೆಯಿಂದ ಪ್ರಚಾರದಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ.
ಕ್ಷೇತ್ರಗಳಿಗೆ ಸೀಮಿತರಾದ ಸ್ಟಾರ್: ಕಾಂಗ್ರೆಸ್ ನೇಮಿಸಿರುವ 40 ಸ್ಟಾರ್ ಪ್ರಚಾರಕರಲ್ಲಿ ಬಹುತೇಕ ನಾಯಕರು ಕ್ಷೇತ್ರಗಳಿಗೆ ಮಾತ್ರ ಸೀಮಿತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾಜಿ ಸಚಿವರಾದ ಎಚ್.ಕೆ. ಪಾಟೀಲ್, ಎಂ.ಬಿ.ಪಾಟೀಲ್, ಬಸವರಾಜ ರಾಯರಡ್ಡಿ, ಕೆ.ಜೆ.ಜಾರ್ಜ್, ಕೃಷ್ಣ ಬೈರೇಗೌಡ, ಸತೀಶ್ ಜಾರಕಿಹೊಳಿ, ಆರ್.ವಿ.ದೇಶಪಾಂಡೆ, ಡಾ.ಎಚ್.ಸಿ. ಮಹದೇವಪ್ಪ, ಶಿವಾನಂದ ಪಾಟೀಲ್, ಎಚ್.ಎಂ.ರೇವಣ್ಣ, ರಾಮಲಿಂಗಾ ರೆಡ್ಡಿ. ಹೀಗೆ ಪ್ರತಿಯೊಬ್ಬರಿಗೂ ಕ್ಷೇತ್ರಗಳ ಉಸ್ತುವಾರಿಯನ್ನಾಗಿ ಜವಾಬ್ದಾರಿ ವಹಿಸಿರುವುದರಿಂದ ಆಯಾ ಕ್ಷೇತ್ರದಲ್ಲೇ ತಮಗೆ ವಹಿಸಿರುವ ಜವಾಬ್ದಾರಿಯನ್ನು ನಿಭಾಯಿಸು ವುದಕಷ್ಟೇ ಸೀಮಿತರಾಗಿದ್ದಾರೆ.
ಕೆಲವು ನಾಯಕರಿಗೆ ಬೇರೆ ಕ್ಷೇತ್ರಗಳಲ್ಲೂ ವರ್ಚಸ್ಸು ಬಳಸಿ ಪಕ್ಷದ ಅಭ್ಯರ್ಥಿಗಳಿಗೆ ಮತ ತರುವ ಸಾಮರ್ಥ್ಯ ಇದ್ದರೂ, ಅವರನ್ನು ನಿರ್ದಿಷ್ಠ ಕ್ಷೇತ್ರಕ್ಕೆ ಸೀಮಿತಗೊಳಿಸಿ ಜವಾಬ್ದಾರಿ ವಹಿಸಿರುವುದು ಅವರನ್ನು ಕಟ್ಟಿಹಾಕಿದಂತಾಗಿದೆ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ. ಇದರ ನಡು ವೆಯೇ ತಮಗೆ ವಹಿಸಿರುವ ಜಿಲ್ಲೆಗಳ ಜವಾಬ್ದಾರಿಯ ಜೊತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಯು.ಟಿ.ಖಾದರ್, ಉಮಾಶ್ರೀ ಬೇರೆ ಕ್ಷೇತ್ರಗಳಿಗೆ ತೆರಳಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮುನಿಯಪ್ಪ ಮನವಿಗೆ ಸಿಗದ ಸ್ಪಂದನೆ: ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಹಾಲಿ ಸಂಸದರು, ರಾಜ್ಯಸಭಾ ಸದಸ್ಯರು ಹಾಗೂ ಬಿ.ಕೆ.ಹರಿಪ್ರಸಾದ್ ಸೇರಿದಂತೆ 12 ಜನರಿಗೆ ಅವಕಾಶ ದೊರೆತಿಲ್ಲ ಎಂದು ಅವರ ಹೆಸರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿಸುವಂತೆ ಎಐಸಿಸಿ ಅಧ್ಯಕ್ಷೆé ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಆದರೆ, ಹೈಕಮಾಂಡ್ ಅದಕ್ಕೆ ಸ್ಪಂದಿಸಿಲ್ಲ ಎನ್ನಲಾಗಿದೆ. ಹೀಗಾಗಿ, ಕೆಪಿಸಿಸಿ ವತಿಯಿಂದಲೇ ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್, ಎಲ್.ಹನುಮಂತಯ್ಯ ಹಾಗೂ ಬಿ.ಕೆ.ಹರಿಪ್ರಸಾದ್ ಅವರ ಅಗತ್ಯವಿದೆ ಎಂದು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಲಾಗಿತ್ತು. ಅದರಂತೆ ಬಿ.ಕೆ.ಹರಿಪ್ರಸಾದ್ ಡಿ.1ರಂದು ಯಲ್ಲಾಪುರ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
* ಶಂಕರ ಪಾಗೋಜಿ