Advertisement

ಹೋರಾಟದಿಂದ ಸಿಕ್ಕಿದೆ ಮೀಸಲಾತಿ ಸೌಲಭ್ಯ; ಶ್ರೀಪ್ರಸನ್ನಾನಂದಪುರಿ

06:18 PM Nov 01, 2022 | Team Udayavani |

ಚಳ್ಳಕೆರೆ: ಕಳೆದ ನೂರಾರು ವರ್ಷಗಳಿಂದ ಸಮಾಜದ ಎಲ್ಲಾ ವರ್ಗಗಳೊಂದಿಗೆ ಪ್ರೀತಿ, ವಿಶ್ವಾಸದಿಂದ ಬದುಕನ್ನು ರೂಪಿಸಿಕೊಂಡಿರುವ ನಾಯಕ ಸಮುದಾಯ ಇಂದು ಎಲ್ಲಾ ರೀತಿಯಲ್ಲೂ ಸಮಾಜದಲ್ಲಿ ಉತ್ತಮ ಶಕ್ತಿಯಾಗಿ ಹೊರಹೊಮ್ಮಿದೆ. ಸರ್ಕಾರಗಳು ಮೀಸಲಾತಿ ನೀಡುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ ಫಲವಾಗಿ ಹೋರಾಟದ ಮೂಲಕವೇ ಅದನ್ನು ಪಡೆಯಬೇಕಾಯಿತು.

Advertisement

ಹೋರಾಟಕ್ಕೆ ಕೈಜೋಡಿಸಿದ ಸಮುದಾಯ ಮತ್ತು ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆಂದು ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ತಿಳಿಸಿದರು. ಅವರು, ನಗರದ ಶ್ರೀಗುರುರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ವಾಲ್ಮೀಕಿ ನಾಯಕ ಸಮುದಾಯ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸುಧೀರ್ಘ‌ಕಾಲ ರಾಜ್ಯದ ರಾಜಧಾನಿಯಲ್ಲಿ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಕುರಿತು ಧರಣಿ ನಡೆಸಲಾಯಿತು. ಆದರೆ, ಈ ಹಿಂದೆ ಸರ್ಕಾರ ನೀಡಿದ ಭರವಸೆ ಈಡೇರದ ಹಿನ್ನೆಲೆಯಲ್ಲಿ ಈ ಬಾರಿ ಸಮುದಾಯದ ಹಿತದೃಷ್ಟಿಯಿಂದ ಧರಣಿ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲಾಯಿತು. ನಿರೀಕ್ಷೆಯಂತೆ ಸಮುದಾಯಕ್ಕೆ ಶೇ.3 ರಿಂದ 7ರಷ್ಟು ಮೀಸಲಾತಿ ದೊರಕಿದ್ದು ಇದನ್ನು ಜನಾಂಗ ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು.

ಜನಾಂಗದ ಕಲ್ಯಾಣಕ್ಕಾಗಿ ಮೀಸಲಾತಿಯೊಂದೇ ನಮಗೆ ದಾರಿದೀಪವಾಗಿದ್ದು, ಮೀಸಲಾತಿ ಎಂಬ ಜ್ಯೋತಿಯನ್ನು ನಮ್ಮ ಬದುಕಿನ ಪ್ರಕಾಶಕ್ಕಾಗಿ ಎಲ್ಲರೂ ಉಪಯೋಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಪ್ರಾಸ್ತಾವಿಕ ಮಾತನಾಡಿದ ತಹಶೀಲ್ದಾರ್‌ ಎನ್‌.ರಘುಮೂರ್ತಿ, ನಮ್ಮ ಹಿರಿಯರು ಮತ್ತು ಮಹಾನೀಯರು ಸಮಾಜಕ್ಕಾಗಿ ಸಲ್ಲಿಸಿದ ಸೇವೆಯನ್ನು ಜನರೊಂದಿಗೆ ಹಂಚಿಕೊಳ್ಳಲು ಸರ್ಕಾರ ಇಂತಹ ಕಾರ್ಯಕ್ರಮಗಳ ಮೂಲಕ ಅವಕಾಶ ಮಾಡಿಕೊಟ್ಟಿದೆ. ಮಹರ್ಷಿ ಶ್ರೀವಾಲ್ಮೀಕಿಯವರು ಸರ್ವಸಮಾಜದ ಶಕ್ತಿ ಎಂದರು.

ನಾಯಕ ಸಮುದಾಯದ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಖ್ಯಾತ ವೈದ್ಯ ನಾಗೇಂದ್ರನಾಯಕ, ನಾಟಕ ಆಕಾಡೆಮಿ ಮಾಜಿ ಸದಸ್ಯ ಪಿ.ತಿಪ್ಪೇಸ್ವಾಮಿ, ವಾಲ್ಮೀಕಿ ಕಲ್ಯಾಣ ಮಂಟಪ ಟ್ರಸ್ಟ್‌ ಅಧ್ಯಕ್ಷ ಮಲ್ಲಪ್ಪ ನಾಯಕ, ಎನ್‌.ದೇವರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಾ.ಕಾಟಂಲಿಂಗಯ್ಯ, ಎಲ್‌ಐಸಿ ತಿಪ್ಪೇಸ್ವಾಮಿ, ಡಿ.ಎಸ್‌.ಪಾಲಯ್ಯ ಮುಂತಾದವರನ್ನು ಸನ್ಮಾನಿಸಲಾಯಿತು.

Advertisement

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ, ವಾಲ್ಮೀಕಿ ಸಮುದಾಯ ಇಂದು ತನ್ನದೇಯಾದ ವಿಶೇಷತೆ ಮತ್ತು ಮೌಲ್ಯವನ್ನುಹೊಂದಿದೆ. ಶ್ರೀಗಳ ಹೋರಾಟದ ಫಲದಿಂದ ನಮ್ಮ ಸಮುದಾಯಕ್ಕೆ ಮೀಸಲಾತಿ ದೊರಕಿದೆ. ಮೀಸಲಾತಿಯ ಸೌಲಭ್ಯವನ್ನು ಸಮಾಜದ ಸರ್ವರೂ ಸದ್ವಿನಿಯೋಗ ಪಡಿಸಿಕೊಳ್ಳಿ ಎಂದರು.

ರಾಜಕೀಯ ಕ್ಷೇತ್ರದಲ್ಲೂ ಈ ಸಮುದಾಯಕ್ಕೆ ಇನ್ನೂ ಹೆಚ್ಚಿನ ಅವಕಾಶಗಳ ಅವಶ್ಯಕತೆ ಇದೆ. ನಾವೆಲ್ಲರೂ ಸಂಘಟಿತರಾಗಿ ನಮ್ಮ ಸಮಾಜದ ಅಭಿವೃದ್ಧಿಗೆ ಕಾರ್ಯನಿರ್ವಹಿಸಬೇಕಿದೆ. ವಾಲ್ಮೀಕಿ ಸಮುದಾಯದ ಬಗ್ಗೆ ಸಾರ್ವಜನಿಕರಲ್ಲಿರುವ ಅಪಾರವಾದ ಪ್ರೀತಿ, ವಿಶ್ವಾಸ, ನಂಬಿಕೆಗೆ ಹಿನ್ನಡೆ ಉಂಟಾಗದಂತೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕಿದೆ ಎಂದರು.

ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಆರ್‌. ಮಂಜುಳಾ, ಸದಸ್ಯರಾದ ಎಸ್‌.ಜಯಣ್ಣ, ವೆಂಕಟೇಶ್‌, ಕವಿತಾ ಬೋರಯ್ಯ, ಸುಮ, ಸುಜಾತಾ, ನಾಗಮಣಿ, ಜಯಲಕ್ಷ್ಮಿ, ತಿಪ್ಪಮ್ಮ, ಸಿ.ಶ್ರೀನಿವಾಸ್‌, ಪಾಲಮ್ಮ, ಜೈತುಂಬಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಪಿ. ಜಯಪಾಲಯ್ಯ, ದೊರೆಬೈಯಣ್ಣ, ಕಸಾಪ ಅಧ್ಯಕ್ಷ ಜಿ.ಟಿ. ವೀರಭದ್ರಸ್ವಾಮಿ, ಸಿ.ಟಿ. ಶ್ರೀನಿವಾಸ್‌, ಡಿ.ಕೆ. ಕಾಟಯ್ಯ, ಜೆಡಿಎಸ್‌ ಮುಖಂಡ ಎಂ.ರವೀಶ್‌ ಕುಮಾರ್‌, ಯುವ ಮುಖಂಡ ಕೆ.ಟಿ. ಕುಮಾರಸ್ವಾಮಿ, ಟಿ.ಜೆ.ತಿಪ್ಪೇಸ್ವಾಮಿ, ಎಲೆಭದ್ರಿ, ಕೆಇಬಿ ನಾಗರಾಜು, ವೀರೇಂದ್ರಸಿಂಹ, ಪಾಲಯ್ಯ, ಅನಿಲ್‌ಕುಮಾರ್‌, ಸೂರ್ಯಪ್ರಭಾ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next