ಬೆಂಗಳೂರು: ಮರಳು ಅಭಾವ ಹಾಗೂ ಕೃತಕ ಬೇಡಿಕೆ ಸಮಸ್ಯೆ ತಪ್ಪಿಸಲು ಮಂಗಳೂರು ನಗರದಲ್ಲಿ “ಸ್ಯಾಂಡ್ ಬಜಾರ್’ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದ್ದು, ಹಂತ ಹಂತವಾಗಿ ರಾಜ್ಯಾದ್ಯಂತ ವಿಸ್ತರಿಸುವ ಚಿಂತನೆಯಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಹದಿನೈದು ದಿನಗಳ ಹಿಂದೆ ಮಂಗಳೂರು ನಗರದಲ್ಲಿ ಆರಂಭಿಸಿರುವ ಸ್ಯಾಂಡ್ ಬಜಾರ್ ಆ್ಯಪ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಅಗತ್ಯ ಇರುವವರಿಗೆ ಬೇಕಾದಷ್ಟು ಮರಳು ನ್ಯಾಯಯುತ ಬೆಲೆಯಲ್ಲಿ ಸಿಗುತ್ತಿದೆ ಎಂದು ಹೇಳಿದರು.
ಮರಳಿನ ಅಗತ್ಯ ಇರುವವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಬಳಿ ನೋಂದಾಯಿಸಬೇಕು. ಆ ನಂತರ ಲಾರಿ ಹಾಗೂ ಮರಳು ಎಲ್ಲಿ ಸಿಗುತ್ತದೆ ಎಂಬುದರ ಮಾಹಿತಿ ಅವರ ಮೊಬೈಲ್‌ಗೆ ರವಾನೆಯಾಗಲಿದೆ. ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯೇ ಮರಳಿಗೆ ದರ ನಿಗದಿಪಡಿಸಲಿದೆ. ಮರಳು ಸಾಗಣೆ ಲಾರಿ ಹೊಂದಿರುವವರು ನೋಂದಣಿ ಮಾಡಿಸಿಕೊಂಡಿರಬೇಕು. ಹೀಗಾಗಿ, ಜಿಲ್ಲಾಡಳಿತ ವತಿಯಿಂದಲೇ ಮರಳು ಅಗತ್ಯ ಇದ್ದವರಿಗೆ ಪೂರೈಕೆಯಾಗುತ್ತಿದೆ ಎಂದು ತಿಳಿಸಿದರು.
ಲಾರಿಗೆ ಪ್ರತಿ ಕಿ.ಮೀ.ಗೆ ಇಂತಿಷ್ಟು ಹಣ ನಿಗದಿಪಡಿಸಲಾಗುತ್ತದೆ. ಮರಳಿಗೂ ದರ ನಿಗದಿಪಡಿಸಲಾಗುತ್ತದೆ. ಗ್ರಾಹಕರು ಜಿಲ್ಲಾಡಳಿತಕ್ಕೆ ನೇರವಾಗಿ ಹಣ ಪಾವತಿಸಿ ಅನುಮತಿ ಪಡೆಯಬಹುದು. ಜಿಲ್ಲಾಡಳಿತ ಮರಳು ಬ್ಲಾಕ್ ಗುತ್ತಿಗೆದಾರರಿಗೆ ಹಾಗೂ ಲಾರಿ ಮಾಲೀಕರಿಗೆ ಹಣ ಪಾವತಿಸಲಿದೆ. ಈ ವ್ಯವಸ್ಥೆಯಿಂದ ಕೃತಕ ಮರಳು ಅಭಾವ, ಮನಸೋಯಿಚ್ಛೆ ದರ ಹೆಚ್ಚಳ, ಅಕ್ರಮ ಸಾಗಣೆಗೆ ಕಡಿವಾಣ ಬಿದ್ದಿದೆ. ಈ ಪದ್ಧತಿ ಯಶಸ್ವಿಯಾದರೆ ರಾಜ್ಯಾದ್ಯಂತ ವಿಸ್ತರಣೆ ಮಾಡಬಹುದು. ಇದರಿಂದ ಮರಳು ಸಮಸ್ಯೆ ತಲೆದೋರುವುದು ತಪ್ಪಲಿದೆ. ಅಗತ್ಯ ಇದ್ದವರಿಗೆ ಮರಳು ಸಿಗಲಿದೆ ಎಂದರು.
ಸಿಸಿ ಟಿವಿ: ಕೇರಳ ಗಡಿ ಭಾಗಕ್ಕೆ ಮರಳು ಅಕ್ರಮ ಸಾಗಾಟ ಜತೆಗೆ ಡ್ರಗ್ಸ್ ಸಾಗಾಟಕ್ಕೆ ಕಡಿವಾಣ ಹಾಕಲು ಗಡಿ ಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ ಜಾಗೃತ ದಳ ನಿಯೋಜಿಸಲಾಗುವುದು ಎಂದು ತಿಳಿಸಿದರು.
ಅಕ್ರಮ ಮರಳು ಸಾಗಾಟದಾರರು ಮಾಹಿತಿ ರವಾನೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅಕ್ರಮ ತಡೆಗಟ್ಟುವ ಅಧಿಕಾರಿಗಳು ಎಲ್ಲಿ ಯಾವ ಹೊತ್ತಿಗೆ ಬರುತ್ತಾರೆ, ಎಲ್ಲಿಂದ ಬಿಟ್ಟರು, ಎಲ್ಲಿಗೆ ತಲುಪಿದರು, ಯಾವ ಮಾರ್ಗದಲ್ಲಿ ಬರುತ್ತಿದ್ದಾರೆ ಎಂಬೆಲ್ಲಾ ಮಾಹಿತಿ ಒಬ್ಬರಿಂದ ಒಬ್ಬರಿಗೆ ರವಾನೆ ಮಾಡುತ್ತಾರೆ ಎಂದು ಹೇಳಿದರು.