Advertisement

ಕೇಳುವವರಿಲ್ಲ ವಿದ್ಯಾರ್ಥಿಗಳ ಗೋಳು…

09:03 PM Feb 17, 2020 | Lakshmi GovindaRaj |

ಹುಣಸೂರು: ಸರ್ಕಾರ, ಪ್ರತಿ ವರ್ಷ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕೋಟ್ಯಂತರ ರೂ. ಖರ್ಚು ಮಾಡುತ್ತದೆ. ಊಟ, ವಸತಿ, ಕಲಾ°ರು ಶೀಟ್‌ಗಳ ತಾಪದಿಂದ ಅನಾರೋಗ್ಯ.. ಹೀಗೆ ವಿದ್ಯಾರ್ಥಿಗಳು ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಲೇ ಇದ್ದಾರೆ. ಆದರೆ ಹಾಸ್ಟೆಲ್‌ಗ‌ಳ ಸಮಸ್ಯೆಗಳು ಮಾತ್ರ ಪರಿಹಾರವಾಗಿಲ್ಲ.

Advertisement

ವಸತಿ ನಿಲಯ ಸ್ಥಳಾಂತರಿಸಿ: ನಗರದ ಮಂಜುನಾಥ ಬಡಾವಣೆ ಬಾಲಕರ ಮೆಟ್ರಿಕ್‌ ನಂತರದ ಪರಿಶಿಷ್ಟ ವರ್ಗಗಳ ಹಾಸ್ಟೆಲ್‌ನಲ್ಲಿ ಯಾವುದೂ ನೆಟ್ಟಗಿಲ್ಲ. ಬೆಳಗ್ಗೆಯಿಂದ ಸಂಜೆವರೆಗೆ ಬಿಸಿಲಿನ ತಾಪ. ಸಂಜೆಯಾದರೆ ಸೊಳ್ಳೆ-ಹಾವುಗಳ ಕಾಟದಿಂದ ನಲುಗಿ ಹೋಗಿರುವ ವಿದ್ಯಾರ್ಥಿಗಳು ವ್ಯಾಸಂಗ ಮಾಡುವುದೇ ಕಷ್ಟವಾಗಿದೆ. ಆದರೂ ಸಂಬಂಧಿಸಿದ ಯಾರೊಬ್ಬ ಅಧಿಕಾರಿಗಳು, ಇತ್ತ ಗಮನ ಹರಿಸಿಲ್ಲ.

ಇನ್ನಾದರೂ ವಸತಿ ನಿಲಯದ ಸಮಸ್ಯೆಗಳನ್ನು ಪರಿಹರಿಸಬೇಕು. ಜತಗೆ ಸುಸಜ್ಜಿತ ಕಟ್ಟಡಕ್ಕೆ, ವಸತಿ ನಿಲಯವನ್ನು ಸ್ಥಳಾಂತರಿಸಬೇಕು. ಬಾಡಿಗೆ ಕಟ್ಟಡದ ಕಿಷ್ಕಿಂದೆ ಸ್ಥಳದಲ್ಲೇ 40 ಪಿಯು, ಪದವಿ ಹಾಗೂ ಬಿ.ಇಡಿ ಕಾಲೇಜಿನ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ಪರಿಹರಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಮೈಯೆಲ್ಲ ಗಂಧೆ(ದದ್ದು): ಬಾಡಿಗೆ ಕಟ್ಟಡದಲ್ಲಿರುವ ವಸತಿ ನಿಲಯ, ಕಲಾ°ರು ಶೀಟ್‌ ಮೇಲ್ಛಾವಣಿಯಿದ್ದು, ಬಿಸಿಲಿನ ತಾಪಕ್ಕೆ ವಿದ್ಯಾರ್ಥಿಗಳ ಮೈಮೇಲೆ ಹೆಬ್ಬೆಟ್ಟಿನಷ್ಟು ಗಾತ್ರದ ಗಂಧೆ(ದದ್ದು)ಎಳುತ್ತಿವೆ. ಜತೆಗೆ ತುರಿಕೆ, ಬೆವರುಸಾಲೆ, ಬಟ್ಟೆ ಹಾಕಿಕೊಳ್ಳದೆ ಓದುವ, ಊಟ ಮಾಡುವ ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿಂದ ದಯನೀಯ ಸ್ಥಿತಿಯಿದೆ. ಹೀಗಾಗಿ ಬಿಸಿಲಿನ ತಾಪದಿಂದ ತಾಪತ್ರಯಪಡುತ್ತಿರುವ ವಿದ್ಯಾರ್ಥಿಗಳು ಮಂಚದ ಮೇಲೆ ಮಲಗಲೂ ಆಗದೆ, ನೆಲದ ಮೇಲೆ ಮಲಗುವಂತಾಗಿದೆ. ಇನ್ನು ನಿಲಯದೊಳಗೆ ಯಾವಾಗಲೂ ಫ್ಯಾನ್‌ ಬಳಸುತ್ತಿದ್ದರೂ ಬಿಸಿಗಾಳಿಯಿಂದ ಬಳಲುವಂತಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಹಾವು-ಸೊಳ್ಳೆಕಾಟ: ಸಂಜೆಯಾಗುತ್ತಿದ್ದಂತೆ ನಿಲಯದಲ್ಲಿ ಸೊಳ್ಳೆಗಳು ರಕ್ತ ಹೀರುತ್ತಿವೆ. ಸೆಕೆಯಿಂದಾಗಿ ಸೊಳ್ಳೆ ಪರದೆಯೊಳಗೆ ಮಲಗಲಾಗದ ಸ್ಥಿತಿಯಿದೆ. ಈ ಹಾಸ್ಟೆಲ್‌ಗೆ ಸುತ್ತಲೂ ಕಾಂಪೌಂಡ್‌ ಕೂಡ ಇಲ್ಲ. ಹೀಗಾಗಿ ಆಗಾಗ ಹಾವು, ವಿಷಜಂತುಗಳು ನುಗ್ಗುತ್ತವೆ. ಹೀಗಾಗಿ ಭಯದಿಂದಲೇ ಜೀವನ ನಡೆಸಬೇಕಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಬೆಳಗ್ಗೆ ತಿಂಡಿಯನ್ನೇ ಮಾಡಲ್ಲ: ನಿತ್ಯವೂ ಮಂಗಳೂರು ಸೌತೆಕಾಯಿ, ಮೂಲಂಗಿ, ಗೆಡ್ಡೆಕೋಸು, ಸಾಂಬರ್‌ ಊಟ ಮಾಡಿ ಸಾಕಾಗಿದ್ದೇವೆ. ಮೊಟ್ಟೆ ಬೇಯಿಸಲ್ಲ. ಪರೀಕ್ಷೆ ಸಂದರ್ಭದಲ್ಲೂ ಬೆಳಗಿನ ತಿಂಡಿ ಮಾಡುತ್ತಿಲ್ಲ. ಬೇಯಿಸಿಟ್ಟು ಹೋಗುತ್ತಾರೆ. ಒಮ್ಮೊಮ್ಮೆ ತಂಗಳನ್ನ ಬಡಿಸುತ್ತಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಮೇಲ್ವಿಚಾರಕರು-ಕಾವಲುಗಾರರೂ ಇಲ್ಲಿಲ್ಲ: ವಸತಿ ನಿಲಯಕ್ಕೆ ಕಾಯಂ ವಾರ್ಡ್‌ನ್‌ ಇಲ್ಲ. ಕಾವಲುಗಾರರೂ ಇಲ್ಲ. ಅಡಿಗೆಯವರು ಅಡಿಗೆ ಮಾಡಿಟ್ಟು ಹೋಗುತ್ತಾರೆ. ನಾವೇ ಹೊಂದಾಣಿಕೆ ಮಾಡಿಕೊಂಡು ಊಟ ಮಾಡಬೇಕು. ಕೆಲವೊಮ್ಮೆ ಹೊಟ್ಟೆ ತುಂಬ ಊಟವೂ ಸಿಗುವುದಿಲ್ಲ. ಇಲ್ಲಿ ಕನಿಷ್ಠ ಬಟ್ಟೆ ತೊಳೆದುಕೊಳ್ಳಲೂ ವ್ಯವಸ್ಥೆಯಿಲ್ಲ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ, ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.

ಬಿಸಿಲಿನ ಝಳಕ್ಕೆ ಕೆಲ ವಿದ್ಯಾರ್ಥಿಗಳ ಮೈಮೇಲೆ ಗಂಧೆ(ದದ್ದು) ಎದ್ದಿದೆ. ಸೂಕ್ತ ಸೌಲಭ್ಯ ಇಲ್ಲದೆ ಪರದಾಡುತ್ತಿದ್ದೇವೆ. ಕನಿಷ್ಠ ಬಟ್ಟೆ ತೊಳೆದುಕೊಳ್ಳಲು ವ್ಯವಸ್ಥೆ ಇಲ್ಲ. ಸಂಬಂಧಿಸಿದ ಎಲ್ಲರಿಗೂ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳು ಇತ್ತ ಸುಳಿಯಲ್ಲ. ನಮ್ಮ ಸಮಸ್ಯೆ ನೀಗದೆ ಉತ್ತಮವಾಗಿ ಅಭ್ಯಾಸ ಸಾಧ್ಯವಾಗುತ್ತಿಲ್ಲ.
-ನಾರಾಯಣ್‌, ನಿಲಯದ ವಿದ್ಯಾರ್ಥಿ

ಬಿಸಿಲಿನ ತಾಪದಿಂದ ನಲುಗಿದ್ದೇವೆ. ಮಲಗಲೂ ಆಗುತ್ತಿಲ್ಲ. ಇಂತಹ ಅಭದ್ರ, ಅವ್ಯವಸ್ಥೆಯ ಕಟ್ಟಡದಲ್ಲಿ ವಸತಿ ನಿಲಿಯ ನಡೆಯುತ್ತಿದೆ. ಆದರೂ ಸಂಬಂಧಿಸಿದವರು ವ್ಯವಸ್ಥಿತ ಕಟ್ಟಡಕ್ಕೆ ಸ್ಥಳಾಂತರಿಸಲು ಕ್ರಮವಹಿಸಿಲ್ಲ. ಈಗಲಾದರೂ ಗಮನಹರಿಸಿ ಹಾಸ್ಟಲ್‌ ಸಮಸ್ಯೆ ಪರಿಹರಿಸಲಿ.
-ರಾಜೇಶ್‌, ಬಿ.ಇಡಿ. ವಿದ್ಯಾರ್ಥಿ

ವಿದ್ಯಾರ್ಥಿಗಳು ಮೂಲ ಸೌಕರ್ಯಗಳ ಕೊರತೆ ಕುರಿತು ತಿಳಿಸಿದ್ದಾರೆ. ನೂತನ ಕಟ್ಟಡ ಹುಡುಕುತ್ತಿದ್ದೇವೆ. ಆದರೆ ಊಟ, ತಿಂಡಿ, ಕಾವಲುಗಾರರ ಸಮಸ್ಯೆ ಪರಿಹರಿಸುತ್ತೇನೆ. ಕೂಡಲೇ ವಸತಿ ನಿಲಯಕ್ಕೆ ಭೇಟಿ ನೀಡಿ, ಸಮಸ್ಯೆ ಆಲಿಸಿ, ಪರಿಹಾರಕ್ಕೆ ಕ್ರಮಕೈಗೊಳ್ಳುತ್ತೇನೆ.
-ಚಂದ್ರಶೇಖರ್‌, ತಾಲೂಕು ಗಿರಿಜನ ಕಲ್ಯಾಣಾಧಿಕಾರಿ

* ಸಂಪತ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next